ಬೆವರಿಳಿಸುತ್ತಿದೆ ಬಿರು ಬಿಸಿಲು:  ಮೈಸೂರಿನ ಜನತೆ ಕಂಗಾಲು
ಮೈಸೂರು

ಬೆವರಿಳಿಸುತ್ತಿದೆ ಬಿರು ಬಿಸಿಲು: ಮೈಸೂರಿನ ಜನತೆ ಕಂಗಾಲು

March 11, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಸುಡು ಬಿಸಿಲು ಹೆಚ್ಚಾಗುತ್ತಿದ್ದು, ಜನರನ್ನು ಕಂಗೆಡಿಸುತ್ತಿದೆ. ರಣ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನತೆ ತಂಪು-ಪಾನೀಯ ಹಾಗೂ ಎಳನೀರಿನ ಮೊರೆ ಹೋಗುತ್ತಿದ್ದಾರೆ.

ಬೇಸಿಗೆ ಕಾಲ ಸುಡುವ ಬಿಸಿಲಿನ ಝಳ ವನ್ನು ಸೂಸುತ್ತಿದ್ದು, ಜನರನ್ನು ಹಿಂಡಿ ಹಿಪ್ಪೆಗೊಳಿಸುತ್ತಿದೆ. ಈ ಸಾಲಿನ ಫೆಬ್ರವರಿ ತಿಂಗಳಿಂದಲೂ ಬಿಸಿಲಿನ ತಾಪ ಹೆಚ್ಚಾಗಿದ್ದು, ಮಾರ್ಚ್ ತಿಂಗಳ ಆರಂಭದಲ್ಲಿ ತೀವ್ರ ಸ್ವರೂಪದಿಂದ ಕಾಡತೊಡಗಿದೆ. ಈ ತಿಂಗಳ ಆರಂಭದಲ್ಲಿಯೇ ತಾಪ ಮಾನ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಭೀಕರ ಬರಗಾಲ ತಲೆದೋರಿದ್ದರಿಂದ 2016ನೇ ಸಾಲಿನಲ್ಲಿ 40 ವರ್ಷಗಳ ನಂತರ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ 2018ನೇ ಸಾಲಿನಲ್ಲಿ ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ತಾಪಮಾನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಆದರೆ ಈ ಸಾಲಿನಲ್ಲಿ ಸುಡು ಬಿಸಿಲು ಜನರನ್ನು ಕಂಗೆಡಿಸುತ್ತಿದ್ದು, ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ತೀವ್ರ ಪರದಾಡುತ್ತಿದ್ದಾರೆ.

ಮಳೆ ಬಾರದಿದ್ದರೆ: ಫೆಬ್ರವರಿ ಎರಡನೇ ವಾರದಿಂದಲೇ 30 ಡಿಗ್ರಿ ಸೆ ಉಷ್ಣಾಂಶ ದಾಖಲಾಗಿತ್ತು. ಮೈಸೂರು ಜಿಲ್ಲೆಯ ವಿವಿಧೆಡೆ ಮಾ.6ರಂದು 35.8 ಡಿಗ್ರಿ, ಮಾ.7ರಂದು 36.9 ಡಿಗ್ರಿ, ಮಾ.8ರಂದು 37.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆದರೆ ನಾಗನಹಳ್ಳಿಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಮಾಪನದಲ್ಲಿ 34 ಡಿ.ಸೆ ಉಷ್ಣಾಂಶ ವರದಿಯಾಗಿದೆ. ಜನರಿಗೆ ಮುಂದೆ ಬಿಸಿಲಿನ ಹಬ್ಬ ಇರುವ ಮುನ್ಸೂಚನೆ ದಟ್ಟವಾಗುತ್ತಿದೆ. ಹವಾಮಾನ ವೈಪರೀತ್ಯ ಉಂಟಾಗಿ ಬೇಸಿಗೆಯ ಬೇಗೆ ಹೆಚ್ಚಾಗಿದೆ. ಸುಡುವ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮಳೆಯೊಂದೇ ಪರಿಹಾರವಾಗಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗುವುದನ್ನು ತಡೆಗಟ್ಟುವುದಕ್ಕೆ ಮಳೆ ಅನಿವಾರ್ಯವಿದೆ. ಮಾರ್ಚ್ ಎರಡನೇ ವಾರದಲ್ಲಾ ದರೂ ಮಳೆ ಬಂದರೆ ಇಳೆ ತಣಿಯಲಿದ್ದು, ತಾಪಮಾನ ನಿಯಂತ್ರಣವಾಗಲಿದೆ. ಒಂದು ವೇಳೆ ಮಳೆ ಬಾರದಿದ್ದಲ್ಲಿ ಉಷ್ಣಾಂಶ 40 ಡಿ.ಸೆ. ದಾಟಿದರೂ ಆಶ್ಚರ್ಯವಿಲ್ಲ.

ತಂಪು ಪಾನೀಯ, ಎಳನೀರು: ಸುಡು ಬಿಸಿಲಿನಿಂದಾಗಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಬೆವರಿನ ರೂಪದಲ್ಲಿ ಹೊರಬಂದು ದೇಹದಲ್ಲಿರುವ ತೇವಾಂಶ ಕಡಿಮೆಯಾಗ ಲಿದೆ. ಇದರಿಂದ ಆಯಾಸ ಆಗುವುದರೊಂದಿಗೆ ನಿಶ್ಯಕ್ತಿ ಉಂಟಾಗಲಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಚರ್ಮ ರೋಗಕ್ಕೂ ತುತ್ತಾಗುವ ಅಪಾಯವಿದೆ. ಪರಿಣಾಮ ಜನರು ಹಣ್ಣಿನ ರಸಗಳು, ಎಳನೀರು ಸೇವನೆಗೆ ಮುಂದಾಗಿದ್ದಾರೆ. ಬೇಸಿಗೆ ಕಾಡುತ್ತಿರುವುದನ್ನು ಅರಿತು ಎಲ್ಲೆಡೆ ರಸ್ತೆ ಬದಿಗಳಲ್ಲಿ ಎಳನೀರು ಮಾರಾಟಗಾರರು ವಿವಿಧೆಡೆಗಳಿಂದ ಎಳನೀರು ತಂದು ಮಾರಾಟ ಮಾಡ ತೊಡಗಿದ್ದಾರೆ. ಬಹುತೇಕ ಎಲ್ಲಾ ಜ್ಯೂಸ್ ಸೆಂಟರ್ ಗಳಲ್ಲಿಯೂ ವ್ಯಾಪಾರ ಜೋರಾಗಿದೆ. ಎಳನೀರಿನ ಬೆಲೆ 25ರಿಂದ 30 ರೂ.ಗೆ ಮುಟ್ಟಿದೆ.

ಎಳನೀರು ಜ್ಯೂಸ್: ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ `ಲಕ್ಷ್ಮೀ ಟಿಫಾನೀಸ್’ನಲ್ಲಿ ಬೇಸಿಗೆಯ ವಿಶೇಷ ವಾಗಿ ಮಾಡುವ ಎಳನೀರು ಜ್ಯೂಸ್ ಹಾಗೂ ಪುನರ್‍ಪುಳಿ ಜ್ಯೂಸ್‍ಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ. ನೂರಾರು ಎಳ ನೀರು ಒಡೆದು ಅದಕ್ಕೆ ನಿಂಬೆಹಣ್ಣಿನ ರಸ, ಗ್ಲೂಕೋಸ್ ಹಾಗೂ ದೇಹವನ್ನು ತಂಪು ಮಾಡುವ ಸಬ್ಜಿ ಬೀಜವನ್ನು ಬೆರೆಸಿ ತಯಾರಿಸುವ ಎಳನೀರು ಜ್ಯೂಸ್ ಬಾರಿ ಫೇಮಸ್ ಆಗಿದೆ. ಮೈಸೂರಿನಲ್ಲಿ ಇದೊಂದೇ ಹೊಟೇಲ್‍ನಲ್ಲಿ ಎಳನೀರು ಜ್ಯೂಸ್ ತಯಾರಿಸುವುದರಿಂದ ವಿವಿಧ ಬಡಾವಣೆ ಗಳಿಂದ ನೈಸರ್ಗಿಕ ಪಾನೀಯವೂ ಆದ ಎಳನೀರು ಜ್ಯೂಸ್ ಸೇವಿಸಲು ಜನರು ಬರುವುದು ವಿಶೇಷವಾಗಿದೆ.

ಬಿಸಿಲಿನ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯ. ಜಾನುವಾರುಗಳನ್ನು ಕಟ್ಟಿ ಹಾಕುವ ಸ್ಥಳದಲ್ಲಿ ನೆರಳು ಬೀಳುವಂತೆ ಚಪ್ಪರವನ್ನು ಹಾಕಬೇಕು. ಸಾಧ್ಯವಾದಷ್ಟು ಬಾರಿ ತಣ್ಣೀರಿನಿಂದ ಜಾನುವಾರುಗಳ ಮೈ ತೊಳೆದು, ಅವುಗಳ ದೇಹವನ್ನು ತಂಪಾಗಿಸಬೇಕು. ಸಕಾಲಕ್ಕೆ ನೀರನ್ನು ಕುಡಿಸುವಂತೆ ಕೃಷಿ ಸಂಶೋಧನಾಲಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

–  ಎಂ.ಟಿ.ಯೋಗೇಶ್ ಕುಮಾರ್

Translate »