ಕೆಎಸ್‍ಆರ್‍ಟಿಸಿ ಬಸ್-ಕಾರು ಮುಖಾಮುಖಿ ಡಿಕ್ಕಿ ನಾಲ್ವರು ಸಾವು
ಮೈಸೂರು

ಕೆಎಸ್‍ಆರ್‍ಟಿಸಿ ಬಸ್-ಕಾರು ಮುಖಾಮುಖಿ ಡಿಕ್ಕಿ ನಾಲ್ವರು ಸಾವು

March 11, 2019

ಹಾಸನ: ಕೆಎಸ್‍ಆರ್‍ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ಯಶವಂತಪುರ ನಿವಾಸಿಗಳಾದ ಚಾಲಕ ಜಗದೀಶ್(30), ಗೌರಮ್ಮ(45), ಚಿನ್ನಯ್ಯ (50) ಹಾಗೂ ಭುವನೇಶ್(6) ಸಾವನ್ನಪ್ಪಿದ್ದರೆ, ಭವ್ಯ(16) ಮತ್ತು ನಾಗರತ್ನ(38) ಗಂಭೀರವಾಗಿ ಗಾಯಗೊಂಡು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಬೆಂಗಳೂರಿನ ಜಗದೀಶ್ ಅವರ ಕುಟುಂಬದವರು ಭಾನುವಾರ ಬೆಳಗಿನ ಜಾವ ಧರ್ಮಸ್ಥಳಕ್ಕೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ (ಕೆ.ಎ.-50-ಎ-4923) ರಾಷ್ಟ್ರೀಯ ಹೆದ್ದಾರಿ 75ರ ಬಿಎಂ ರಸ್ತೆಯಲ್ಲಿ ಶಿರಾಡಿ ಘಾಟ್‍ನ ಡಬ್ಬಲ್ ಟರ್ನ್ ಸಮೀಪ ಹೋಗುತ್ತಿದ್ದಾಗ ಎದುರುಗಡೆಯಿಂದ ಧರ್ಮಸ್ಥಳದಿಂದ ಕೋಲಾರಕ್ಕೆ ಹೋಗುತ್ತಿದ್ದ (ಕೆಎ-07-ಎಫ್-1821) ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 6ಜನರ ಪೈಕಿ ಓರ್ವ ಮಹಿಳೆ, ಓರ್ವ ಬಾಲಕ ಸೇರಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲನೆ ಮಾಡುತ್ತಿದ್ದ ಜಗದೀಶ್ ಅವರು ನಿದ್ರೆ ಮಂಪರಿನಲ್ಲಿದ್ದರಿಂದ ಕಾರನ್ನು ವೇಗವಾಗಿ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಸ್‍ನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಬಸ್‍ನ ಚಾಲಕ ಆನಂದಕುಮಾರ್ ಅವರು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಾರೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಿದ ಕುಟುಂಬ ಮಾರ್ಗಮಧ್ಯೆ ಸಾವನ್ನಪ್ಪಿದ್ದು ದುರಂತ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್‍ಗೌಡ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Translate »