ಕೈಗಾರಿಕಾಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಣ್ಣ ಉದ್ಯಮ ನಿರ್ದೇಶನಾಲಯ ನಿರ್ದೇಶಕರಿಗೆ ಮನವಿ
ಮೈಸೂರು

ಕೈಗಾರಿಕಾಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಣ್ಣ ಉದ್ಯಮ ನಿರ್ದೇಶನಾಲಯ ನಿರ್ದೇಶಕರಿಗೆ ಮನವಿ

August 20, 2019

ಮೈಸೂರು,ಆ.19(ಎಸ್‍ಬಿಡಿ)-ಕೈಗಾರಿಕಾಭಿವೃದ್ಧಿ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶನಾಲಯದ ನಿರ್ದೇಶಕ ಎಸ್.ಜಿóಯ ಉಲ್ಲಾ ಅವರಿಗೆ ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮಗಳ ಪರಿಷತ್ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಜಿóಯಉಲ್ಲಾ ಅವರನ್ನು ಭೇಟಿ ಮಾಡಿದ ಪರಿಷತ್ ಅಧ್ಯಕ್ಷ ರವಿ ಕೋಟಿ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಸಣ್ಣ ಕೈಗಾರಿಕೆಗಳ ಅಭಿವೃದ್ದಿಗೆ ಪೂರಕವಾದ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ 5 ಕೋಟಿ ರೂ.ವರೆಗೆ ಶೇ.4ರ ಬಡ್ಡಿ ದರದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಸಾಲ ನೀಡುವ ಯೊಜನೆ ಜಾರಿಗೆ ತಂದಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಭದ್ರತಾ ರಹಿತ ಸಾಲ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ವಂಚಿತ ಸಣ್ಣ ಉದ್ಯಮಿಗಳಿಗೆ ಭಾರತೀಯ ಸಣ್ಣ ಕೈಗಾರಿಕಾಭಿವೃದ್ದಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ದೊರೆಯುವಂತೆ ಪರಿಷ್ಕøತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಜಿóಯ ಉಲ್ಲಾ ಅವರು, ಸಣ್ಣ ಕೈಗಾರಿಕೆಗಳ ನಿವೇಶನ ಮಂಜೂರಾತಿ ಮೀಸಲಾತಿಯನ್ನು ಶೇ.20ರಿಂದ ಶೇ.10ಕ್ಕೆ ಇಳಿಕೆ ಮಾಡಿರುವ ವಿಷಯ ತಮ್ಮಿಂದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೆ, ಮನವಿ ಪತ್ರದಲ್ಲಿರುವ ಎಲ್ಲಾ ಅಂಶಗಳನ್ನು ಪರಿಗಣಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಂಎಸ್‍ಎಂಇ ನಿರ್ದೇಶನಾಲಯದ ಅಪರ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಶ್ರೀಧರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇ ಶಕ ಲಿಂಗರಾಜು, ಉಪನಿರ್ದೇಶಕ ಚೌಡಯ್ಯ, ಉದ್ಯಮಿಗಳಾದ ಗೇವರಾಂ, ಪದ್ಮನಾಭ, ಮಹಮ್ಮದ್ ಫಾಜಿóಲ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಗಳಲ್ಲಿ ಕೈಗಾರಿಕೆಗಳನ್ನು ನಡೆಸದಿರುವವರೂ ಶೇರುದಾರರಾಗಿದ್ದಾರೆ. ಹಲವು ಸಂಘಗಳು ವ್ಯಾಪಾರಿಗಳು ಹಾಗೂ ರಾಜಕಾರಣಿಗಳ ಕೈಲಿವೆ. ಹಾಗಾಗಿ ಶೇರುದಾರರಾಗಿ ಮುಂದುವರಿಯಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಕೈಗಾರಿಕೆ ನಡೆಸುತ್ತಿರುವ ಖಾತರಿಗೆ ಅವರಿಂದ ಜಿಎಸ್‍ಟಿ ಆಡಿಟೆಡ್ ಬ್ಯಾಲೆನ್ಸ ಶೀಟ್ ಕಡ್ಡಾಯವಾಗಿ ಸಲ್ಲಿಸುವ ಆದೇಶವಾಗಬೇಕು. ರಾಜ್ಯದಲ್ಲಿ ಶೇ.20 ರಷ್ಟು ಕೈಗಾರಿಕೆಗಳು ಮುಚ್ಚಿಹೋಗಿದ್ದು, ಶೇ.25 ರಷ್ಟು ಕೈಗಾರಿಕೆಗಳು ರೋಗಗ್ರಸ್ಥವಾಗಿವೆ. ಶೇ.15 ರಷ್ಟು ಕೈಗಾರಿಕೆಗಳೂ ಅದೇ ಹಾದಿಯಲ್ಲಿವೆ. ಶೇ.40ರಷ್ಟು ಕೈಗಾರಿಕೆಗಳು ಮಾತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ರೋಗಗ್ರಸ್ಥ ಕೈಗಾರಿಕೆಗಳ ಪುನಶ್ಚೇತನಾ ಯೋಜನೆಯನ್ನು ಪರಿಷ್ಕರಿಸಿ, ಪ್ರಸಕ್ತ ಕೈಗಾರಿಕಾ ಪರಿಸ್ಥಿತಿಗೆ ಅನ್ವಯವಾಗುವ ನೀತಿ ರೂಪಿಸಬೇಕು. ನಗರ ಪಾಲಿಕೆಯಿಂದ ಪೂರೈಕೆ ಯಾಗುವ ಕೈಗಾರಿಕಾ ನೀರು ದರ ವರ್ಗವನ್ನು ಪರಿಷ್ಕರಿಸುವು ದರ ಜೊತೆಗೆ ಕೆಇಆರ್‍ಸಿ ಮಾದರಿಯ ಆಯೋಗ ರಚಿಸಬೇಕು.

ಅಲ್ಪಸಂಖ್ಯಾತ ವರ್ಗದ ಉದ್ಯಮಿಗಳಿಗೆ ಶೇ.4ರ ಬಡ್ಡಿದರದಲ್ಲಿ ಗರಿಷ್ಠ 5 ಕೋಟಿ ರೂ.ವರೆಗೆ ಸಾಲ ಹಾಗೂ ಕೆಐಎಡಿಬಿ ನಿವೇಶನಗಳಿಗೆ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಶೇ.25ರಷ್ಟು ಸಹಾಯ ಧನ ಕಲ್ಪಿಸಬೇಕು. ವಿಕಲಾಂಗ ಚೇತನ ಉದ್ಯಮಿಗಳಿಗೆ ಕೈಗಾರಿಕಾ ಶೆಡ್ಡು ಹಾಗೂ ನಿವೇಶನಕ್ಕೆ ಶೇ.50 ರಿಯಾಯಿತಿ ಜೊತೆಗೆ 8 ತ್ರೈಮಾಸಿಕ ಕಂತುಗಳ ಪಾವತಿಗೆ ಅವಕಾಶ ನೀಡಬೇಕು. ಸೂಕ್ಷ್ಮ ಉದ್ಯಮಗಳಿಗೆ ತಮಿಳು ನಾಡು, ಗುಜರಾತ್ ಮಾದರಿಯಲ್ಲಿ ಕನಿಷ್ಠ ಕಾಸ್ಟ್ ಆಫ್ ಸಪ್ಲೆ ದರದಲ್ಲಿ ವಿದ್ಯುತ್ ಒದಗಿಸಬೇಕು. ಮೈಸೂರಿನ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಸಂರಕ್ಷಿಸಿ, ದೆಹಲಿ ಮಾದರಿ ಪಾಲಿಕಾ ಬಜಾರ್ ಆರಂಭಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ಶುದ್ದ ನೀರಿನ ಘಟಕ ನಿರ್ಮಿಸಬೇಕು. ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನಿವೇಶನ ಮಂಜೂರಾತಿ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸ ಬೇಕೆಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ.

Translate »