ದೇವರಾಜ ಅರಸು `ತಳ ಸಮುದಾಯದ ತಂದೆ’
ಮೈಸೂರು

ದೇವರಾಜ ಅರಸು `ತಳ ಸಮುದಾಯದ ತಂದೆ’

August 20, 2019

ಮೈಸೂರು,ಆ.19(ಎಸ್‍ಪಿಎನ್)-ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ತಮ್ಮ ಅಧಿಕಾರಾ ವಧಿಯಲ್ಲಿ ತಳ ಸಮುದಾಯದವರ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದು ಅವರಿಗೆ ಸಾಮಾಜಿಕ ದನಿ ನೀಡಿದವರು. ಈ ನಿಟ್ಟಿನಲ್ಲಿ ಅವರನ್ನು `ತಳ ಸಮು ದಾಯದ ತಂದೆ’ ಎಂದು ಕರೆದರೂ ತಪ್ಪಾಗ ಲಾರದು ಎಂದು ಕರ್ನಾಟಕ ಸಾಹಿತ್ಯ ಅಕಾ ಡೆಮಿ ನಿಕಟಪೂರ್ವ ಅಧ್ಯಕ್ಷ ಪ್ರೊ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಕಲಾಮಂದಿರದ ಮನೆಯಂಗಳದಲ್ಲಿ ಜಿಲ್ಲಾ ಕಸಾಪ, ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಸಹಯೋಗ ದೊಂದಿಗೆ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ, ವಿವಿಧ ಕ್ಷೇತ್ರದ ಸಾಧಕರು ಹಾಗೂ ರಾಷ್ಟ್ರಪತಿ ಪದಕ ಪಡೆದ ಪೊಲೀಸ್ ಸಿಬ್ಬಂದಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿ.ದೇವರಾಜು ಅರಸು ಅವರ ಕಾಲ ಘಟ್ಟದ ರಾಜಕೀಯ ವಾತಾವರಣಕ್ಕೂ ಈಗಿನ ರಾಜಕೀಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅರಸು ಕಾಲ ಘಟ್ಟದಲ್ಲಿ ತಳ ಸಮುದಾಯಗಳ ಏಳಿಗೆಗೆ ಕಾನೂನು ಹಾಗೂ ಕಾರ್ಯಾಂಗದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಮೂಲಕ ಈ ಸಮುದಾಯಕ್ಕೆ ದನಿ ನೀಡಿ ದ್ದರು. ಇಂದು ಅದಕ್ಕಾಗಿಯೇ ಅವರ ಹೆಸರು ಮತ್ತೆ ಮತ್ತೆ ಚರ್ಚೆಯಾಗುತ್ತಿದೆ. ರಾಜಕಾರಣದಲ್ಲಿ ಅಪ್ಪಟ `ಭಾರತೀಯ ಸಮಾಜವಾದಿ’ ಸಿದ್ಧಾಂತವನ್ನು ಅನುಸರಿ ಸಿದವರು ಎಂದರು.
ಭಾವನಾತ್ಮಕವಾಗಿ ಚುನಾವಣೆಗಳನ್ನು ಗೆಲ್ಲಬಹುದು. ಆದರೆ, ವಾಸ್ತವ ನೆಲೆಗಟ್ಟಿ ನಲ್ಲಿ ಜನರ ಮನಸು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಆದರೂ ಅರಸು ಅವರು, ವಾಸ್ತವ ನೆಲೆಗಟ್ಟಿನಲ್ಲಿ ಚುನಾ ವಣೆಗಳನ್ನು ಎದುರಿಸಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ದ್ದಾರೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ತಂದು ಆ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.

ಅರಸು ಅವರ ಸಾರ್ವಜನಿಕ ಭಾಷಣ ಗಳನ್ನು ತಳ ಸಮುದಾಯದ ಯುವಕರು ಅಧ್ಯಯನ ಮಾಡಬೇಕು. ಅವರ ಭಾಷಣ ಗಳಲ್ಲಿ ವೈಜ್ಞಾನಿಕ ಹಾಗೂ ಭಾರತೀಯ ರಾಜಕಾರಣಕ್ಕೆ ಹೊಂದುವಂತಹ ಪದ ಗಳನ್ನು ಬಳಸಿದ್ದಾರೆ. ಅವರ ಒಂದೊಂದು ಮಾತು ಸಮಾಜದಲ್ಲಿರುವ ಸಮಸ್ಯೆಗಳನ್ನು ಅಂಕಿ-ಸಂಖ್ಯೆಗಳ ಸಮೇತ ತೋರಿಸಿಕೊಡು ವಂತಿವೆ. ಅವರ ಭಾಷಣ ಓರ್ವ ವಿಶ್ವ ವಿದ್ಯಾನಿಲಯ ಪ್ರಾಧ್ಯಾಪಕ ತನ್ನ ಗಂಟೆ ಪಾಠಕ್ಕೆ ಎಷ್ಟು ಅಧ್ಯಯನ ನಡೆಸಬೇಕೋ ಅದಕ್ಕೆ ಹತ್ತು ಪಟ್ಟು ಅಧ್ಯಯನ ಮಾಡಿ ಭಾಷಣ ಮಾಡಿರುವ ಬಗ್ಗೆ ಪ್ರೊ.ಹಾ. ಮಾ.ನಾಯಕರು ಬರೆದಿರುವ `ಕರ್ನಾಟಕ ಕಣ್ಮಣಿ’ಗಳು ಪುಸ್ತಕದಲ್ಲಿ ಕಾಣಬಹುದು ಎಂದು ತಿಳಿಸಿದರು.

ವೀರಶೈವ ಧರ್ಮದಲ್ಲಿ ಒಡಕು ಉಂಟು ಮಾಡಿ ಸ್ವತಂತ್ರ ಲಿಂಗಾಯಿತ ಧರ್ಮ ಸ್ಥಾಪನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂಬ ಅಂಶ ಇತ್ತೀಚೆ ಗಿನ ಕೆಲವು ಸಾರ್ವಜನಿಕ ಸಭೆಗಳಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಈ ಮಾತು ಮುಂದೆಯೂ ಚರ್ಚೆಯಾಗುತ್ತದೆ. ಆದರೆ, ನನ್ನ ಪ್ರಕಾರ ಈ ಧರ್ಮ ಸ್ಥಾಪನೆ ಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತೀರ್ಮಾನ ಸರಿಯಾಗಿದೆ. ಇದರ ಮಹತ್ವ ಮುಂದಿನ ದಿನಗಳಲ್ಲಿ ಎಲ್ಲಾ ಬಸವ ಅಭಿ ಮಾನಿಗಳಿಗೆ ಗೊತ್ತಾಗಲಿದೆ ಎಂದು ಪ್ರತಿಪಾದಿಸಿದರು.

ದೇಶಕ್ಕೇ ಮಾದರಿ:ಕರ್ನಾಟಕ ಪೊಲೀಸ್ ಇಲಾಖೆ ದೇಶಕ್ಕೆ ಮಾದರಿ ಯಾಗಿದೆ. ಪ್ರೊ.ಎಂ.ಎಂ.ಕಲ್ಬುರ್ಗಿ ಹಾಗೂ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ವನ್ನು ಕ್ಲಿಷ್ಟ ಪರಿಸ್ಥಿತಿಯಲ್ಲೂ ಭೇದಿಸಿರುವ ಕರ್ನಾಟಕ ಪೊಲೀಸರು, ಮಹಾರಾಷ್ಟ್ರ ಪೊಲೀಸರಿಗೆ ಮಾದರಿಯಾಗಬೇಕೆಂದು ಮಹಾರಾಷ್ಟ್ರ ಪ್ರಗತಿಪರ ಚಿಂತಕರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಮೂರ್ತಿಗಳು ಉದಾಹರಣೆ ನೀಡಿ, ಅಲ್ಲಿನ ಪೊಲೀಸರಿಗೆ ತಪರಾಕಿ ಹಾಕಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ `ಕರ್ನಾಟಕ ಪೊಲೀಸ್’ ದೇಶಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ: ಇದೇ ವೇಳೆ ಮೈಸೂರು ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾ ಖೆಯ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮ ಶೇಖರ್, ಇತ್ತೀಚೆಗೆ ರಾಷ್ಟ್ರಪತಿ ಪದಕ ಪ್ರಶಸ್ತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳ ಮೈಸೂರು ಘಟಕದ ಮುಖ್ಯ ಪೇದೆ ಎನ್.ಮಂಜುನಾಥ್ ರಾವ್, ಕೆಎಸ್‍ಆರ್‍ಪಿ ಮುಖ್ಯ ಪೇದೆ ರಮೇಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಚಂದ್ರ ಶೇಖರ್, ಮಡ್ಡೀಕೆರೆ ಗೋಪಾಲ್, ವಿಪ್ರ ಮುಖಂಡ ಕೆ.ರಘುರಾಂ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಡಾ.ಸಿ.ವೆಂಕಟೇಶ್, ಕೆ.ಎಸ್.ಶಿವರಾಂ ಉಪಸ್ಥಿತರಿದ್ದರು.

Translate »