ನನ್ನ ಹೆಸರು ಹೇಳದಿದ್ದರೇ ಕೆಲವರಿಗೆ ಹೊಟ್ಟೆ ತುಂಬುವುದಿಲ್ಲ: ಹೆಚ್.ಡಿ.ರೇವಣ್ಣ
ಹಾಸನ

ನನ್ನ ಹೆಸರು ಹೇಳದಿದ್ದರೇ ಕೆಲವರಿಗೆ ಹೊಟ್ಟೆ ತುಂಬುವುದಿಲ್ಲ: ಹೆಚ್.ಡಿ.ರೇವಣ್ಣ

December 7, 2018

ಹಾಸನ: ಕೆಲವರಿಗೆ ಆಗಾಗ್ಗೆ ನನ್ನ ಹೆಸರು ಹೇಳದಿದ್ದರೆ ಹೊಟ್ಟೆ ತುಂಬುವುದಿಲ್ಲ, ನಿದ್ದೆಯೂ ಬರುವುದಿಲ್ಲ ಎಂದು ಲೋಕೋಪಯೋಗಿ ಹಾಗೂ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ನನ್ನನ್ನು ಸೂಪರ್ ಸಿಎಂ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಎಲ್ಲಾ ಇಲಾಖೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ದೂರುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳೂ ಕೂಡ ನನ್ನ ಬಗ್ಗೆಯೇ ಬರೆದುಕೊಳ್ಳುತ್ತಿವೆ. ಬರೆದುಕೊಳ್ಳಲಿ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಿರುವ ಜೆಡಿಎಸ್‍ನವರು, ಇದು ತಮ್ಮ ಯೋಜನೆಯೆಂದು ಬಿಂಬಿಸಿ ಕೊಳ್ಳುತ್ತಿದ್ದಾರೆ ಎಂಬ ಮಾಜಿ ಸಚಿವ ಬಿ.ಶಿವರಾಂ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ. ರೇವಣ್ಣ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗಳ ಮಂಜೂರಾದ ಆದೇಶ ಪತ್ರ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು. ಎಲ್ಲವೂ ಕೇಂದ್ರ ಸರ್ಕಾರದ ಯೋಜನೆಯಾಗಿವೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಈ ಎಲ್ಲಾ ಕಾಮಗಾರಿಗಳು ಮಂಜೂರಾಗಿವೆ. ನಾನು ಕೇಂದ್ರ ಸರ್ಕಾರದೊಂದಿಗೆ ನಾಲ್ಕು ವರ್ಷ ಪ್ರಯತ್ನ ಮಾಡಿದ ಫಲದಿಂದಾಗಿ ಈ ಯೋಜನೆಗಳು ಮಂಜೂರಾಗಿವೆ. ವಿಷಯ ಗೊತ್ತಿದ್ದರೆ ಮಾತನಾಡಲಿ ಎಂದು ಮಾಜಿ ಸಚಿವ ಬಿ.ಶಿವರಾಂಗೆ ಟಾಂಗ್ ನೀಡಿದರು.

ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ರೇವಣ್ಣ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಜಿಲ್ಲೆಗೆ ಏನು ಕೆಲಸ ಆಗಿದೆ ಎಂಬುದನ್ನು ಈ ಎರಡೂ ಪಕ್ಷದ ನಾಯಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಸಮ್ಮಿಶ್ರ ಸರ್ಕಾರದ ಅನೇಕ ಇಲಾಖೆಗಳಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿಲ್ಲ. ಆದರೂ ಕೆಲವರು ನನ್ನ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೇಳಿದರೆ ನಾನು ಕೊಡಲು ಸಿದ್ಧವಿದ್ದೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ರಾಜಕೀಯಕ್ಕೂ ಮೀರಿದ ಸಂಬಂಧ. ಇದನ್ನು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Translate »