ಮೈಸೂರು ನಗರ, ವರ್ತುಲ ರಸ್ತೆಯಲ್ಲಿನ್ನು `ವೇಗ ಮಿತಿ’
ಮೈಸೂರು

ಮೈಸೂರು ನಗರ, ವರ್ತುಲ ರಸ್ತೆಯಲ್ಲಿನ್ನು `ವೇಗ ಮಿತಿ’

March 16, 2020

ಹೊಸ ನಿಯಮ ಭಾನುವಾರದಿಂದಲೇ ಜಾರಿಗೆ
ವೇಗದ ಚಾಲನೆಗೆ ದಂಡ
ಮೈಸೂರು,ಮಾ.15(ಎಂಟಿವೈ)- ವಾಹನಗಳ ಅತಿ ವೇಗದ ಚಾಲನೆಯಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ `ವೇಗ ಮಿತಿ’ ನಿಯಮ ಜಾರಿಗೊಳಿಸಿದೆ. ಈ ನಿಯಮ ತಕ್ಷಣದಿಂದಲೇ(ಮಾ.15) ಜಾರಿಗೆ ಬಂದಿದೆ.

ಮೈಸೂರು ನಗರದ ವಿವಿಧ ಬಡಾವಣೆ, ಹೊರವರ್ತುಲ ರಸ್ತೆಯಲ್ಲಿ ಹಾಗೂ ಬೇರೆ ನಗರ, ಪಟ್ಟಣಗಳಿಂದ ಮೈಸೂರಿಗೆ ಬರುವ ವಾಹನಗಳ ವೇಗ ಹೆಚ್ಚಾಗಿದ್ದು, ಅಪಘಾತ ಸಂಭವಿಸಿ ಸಾವು-ನೋವು ಹಾಗೂ ಆಸ್ತಿ ಹಾನಿ ಸಂಭವಿಸುತ್ತಿರುವುದನ್ನು ತಡೆಯಲು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು `ವೇಗ ಮಿತಿ’ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸುವ ಸವಾರರಿಗೆ ಭಾರೀ ದಂಡ ವಿಧಿಸಲು ನಗರ ಸಂಚಾರ ಪೊಲೀಸರೂ ಸಜ್ಜಾಗಿದ್ದಾರೆ.

ಜನರ ಹಿತದೃಷ್ಟಿಯಿಂದಲೇ ಹೊಸ ನಿಯಮ ಜಾರಿಗೆ ತರಲಾಗಿದ್ದು, ವಾಹನ ಸವಾರರು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ರಸ್ತೆ ಸಂಚಾರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದೂ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಹೊರ ವರ್ತುಲ ರಸ್ತೆಯಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗಂಟೆಗೆ ಕಾರು 40 ಕಿ.ಮೀ., ಬಸ್, ದ್ವಿಚಕ್ರ ವಾಹನ, ಆಟೋರಿಕ್ಷಾ ಹಾಗೂ ಎಲ್ಲಾ ಮಾದರಿ ಸರಕು ಸಾಗಣಿ ವಾಹನಗಳು 30 ಕಿ.ಮೀ. ಹಾಗೂ ಟ್ರ್ಯಾಕ್ಟರ್‍ಗೆ 20 ಕಿ.ಮೀ. ವೇಗಮಿತಿ ನಿಗದಿಪಡಿಸಲಾಗಿದೆ. ಮೈಸೂರು-ಹುಣಸೂರು ರಸ್ತೆ, ಗದ್ದಿಗೆ ರಸ್ತೆ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ, ಮಹದೇವಪುರ ರಸ್ತೆ ಹಾಗೂ ಕೆಆರ್‍ಎಸ್ ರಸ್ತೆ ಸಂದಿಸುವ ಹೊರ ವರ್ತುಲ ರಸ್ತೆಯಿಂದ ಮೈಸೂರು ನಗರ ಸರಹದ್ದಿನ ಕೊನೆಯವರೆಗೂ ಇದೇ ವೇಗಮಿತಿ ನಿಯಮ ಅನ್ವಯವಾಗಲಿದೆ.

ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಗರ ಸರಹದ್ದು ಆರಂಭವಾಗುವ ಸ್ಥಳದಿಂದ ಹೊರ ವರ್ತುಲ ರಸ್ತೆವರೆಗೆ ಕಾರು 60 ಕಿ.ಮೀ., ಬಸ್ ಮತ್ತು ದ್ವಿಚಕ್ರ ವಾಹನ 50 ಕಿ.ಮೀ., ಆಟೋರಿಕ್ಷಾ ಹಾಗೂ ಎಲ್ಲಾ ಮಾದರಿ ಸರಕು ಸಾಗಣೆ ವಾಹನ 40 ಕಿ.ಮೀ. ಹಾಗೂ ಟ್ರ್ಯಾಕ್ಟರ್‍ಗೆ 30 ಕಿ.ಮೀ. ವೇಗಮಿತಿ ನಿಗದಿ ಮಾಡಲಾಗಿದೆ.

ನಗರ ಸಂಪರ್ಕಿಸುವ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯಲ್ಲಿ ನಿಗದಿ ಮಾಡಿರುವ ವೇಗಮಿತಿಯಲ್ಲಿ ವ್ಯತ್ಯಾಸವಿದೆ. ಕಾರು 60 ಕಿ.ಮೀ., ಬಸ್ ಮತ್ತು ದ್ವಿಚಕ್ರ ವಾಹನ 50 ಕಿ.ಮೀ., ಆಟೋರಿಕ್ಷಾ ಹಾಗೂ ಎಲ್ಲಾ ಮಾದರಿ ಸರಕು ಸಾಗಣೆ ವಾಹನಗಳು 40 ಕಿ.ಮೀ. ವೇಗದಲ್ಲಿ ಸಂಚರಿಸಬಹುದು. ಆದರೆ ಟ್ರ್ಯಾಕ್ಟರ್ ವೇಗಮಿತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ವೇಗ ಮಿತಿ ನಿಯಮವನ್ನು ಎಲ್ಲಾ ವಾಹನ ಚಾಲಕರೂ ತಪ್ಪದೇ ಪಾಲಿಸಬೇಕು. ಇಲ್ಲವಾದರೆ ನಗರ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Translate »