ನರೇಂದ್ರ ಮೋದಿ ನಾಯಕತ್ವ,ಬಿ.ಎಸ್.ಯಡಿಯೂರಪ್ಪ ವರ್ಚಸ್ಸು,ಅಭಿವೃದ್ಧಿ ಆದ್ಯತೆ  ನನ್ನ ಗೆಲುವಿಗೆ ಸೋಪಾನ
ಮೈಸೂರು

ನರೇಂದ್ರ ಮೋದಿ ನಾಯಕತ್ವ,ಬಿ.ಎಸ್.ಯಡಿಯೂರಪ್ಪ ವರ್ಚಸ್ಸು,ಅಭಿವೃದ್ಧಿ ಆದ್ಯತೆ ನನ್ನ ಗೆಲುವಿಗೆ ಸೋಪಾನ

April 17, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಹಾಗೂ ನನ್ನ 42 ವರ್ಷದ ರಾಜಕಾರಣದಲ್ಲಿ ಅಭಿವೃದ್ಧಿಗೆ ನೀಡಿರುವ ಆದ್ಯತೆ ನನ್ನ ಗೆಲುವಿಗೆ ಸೋಪಾನವಾಗಲಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾ ಸಂವಾದದಲ್ಲಿ ಮಾತ ನಾಡಿದ ಅವರು, ನಾನು 42 ವರ್ಷದಿಂದ ರಾಜಕಾರಣದಲ್ಲಿದ್ದೇನೆ. 5 ಬಾರಿ ಸಂಸದನಾಗಿ, ಎರಡು ಬಾರಿ ಶಾಸಕನಾಗಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಾವಧಿಯಲ್ಲಿ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗಳಿಸಿ ಎಲ್ಲರ ಹಿತ ಕಾಯುವ ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ನಂಜನಗೂಡು ಉಪ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ, ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೆ. ದೇಹ ಬಳಲಿರುವುದರಿಂದ ವಿಶ್ರಾಂತಿ ಅಗತ್ಯವಾಗಿತ್ತು. ಆದರೆ ಚಾಮರಾಜನಗರ ಜಿಲ್ಲೆಯಿಂದ ನೂರಾರು ಮುಖಂಡರು, ಪಕ್ಷದ ಕಾರ್ಯಕರ್ತರು ನನ್ನ ಮನೆಗೆ ಬಂದು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಾಯಿಸಿದ್ದರಿಂದ, ಕಾರ್ಯಕರ್ತರ ಪ್ರೀತಿ-ವಿಶ್ವಾಸಕ್ಕೆ ಮಣಿದು ಸ್ಪರ್ಧಿಸಲು ಒಪ್ಪಿಕೊಂಡೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದೇನೆ. ಗೆಲುವಿಗೆ ಪೂರಕವಾದ ವಾತಾವರಣ ಕಂಡು ಬಂದಿದೆ ಎಂದರು.

ಸ್ಥಿರ ಸರ್ಕಾರ: ಕೇಂದ್ರದಲ್ಲಿ 25 ವರ್ಷದ ನಂತರ ಮೋದಿ ನೇತೃತ್ವದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಬಾರಿಯೂ ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ದೇಶದ ಜನರಲ್ಲಿದೆ. ಎಲ್ಲೆಡೆ ಮೋದಿ ಪರ ಅಲೆಯಿದೆ. ರಾಜ್ಯದಲ್ಲಿ ಬಿ.ಎಸ್.ಯಡಿ ಯೂರಪ್ಪ ವರ್ಚಸ್ಸು ಹೆಚ್ಚಾಗಿರುವುದರಿಂದ ಬಿಜೆಪಿ ಅಭ್ಯರ್ಥಿ ಗಳ ಗೆಲುವಿಗೆ ಸಹಕಾರಿಯಾಗಲಿದೆ. ಮತ್ತೊಮ್ಮೆ ದೇಶಕ್ಕೆ ಸ್ಥಿರ ಸರ್ಕಾರದ ಅವಶ್ಯಕತೆಯಿದ್ದು, ಬಿಜೆಪಿಗೆ ಬೆಂಬಲ ನೀಡಲು ದೇಶದ ಜನತೆ ಉತ್ಸುಕರಾಗಿದ್ದಾರೆ ಎಂದರು.

ಸಿದ್ದರಾಮಯ್ಯರನ್ನು ನಿಂದಿಸಿದ್ದ ಸಿಎಂ: ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕುಮಾರ ಪರ್ವ ಆರಂಭಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇಂದು ದೋಸ್ತಿಗಳಾಗಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದು ಬಿಜೆಪಿಗೆ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ದೋಸ್ತಿ ವರ್ಸಸ್ ದೋಸ್ತಿ: ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ವರ್ಸಸ್ ಬಿಜೆಪಿ ನಡುವೆ ಹೋರಾಟ ನಡೆಯುತ್ತಿಲ್ಲ. ದೋಸ್ತಿ ವರ್ಸಸ್ ದೋಸ್ತಿ ನಡುವೆ ಕುಸ್ತಿ ನಡೆಯುತ್ತಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಮನ್ವಯತೆ ಇಲ್ಲ. ಈ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಿದೆ. ರಾಜ್ಯದ 27 ಕ್ಷೇತ್ರಗಳಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಈ ದೋಸ್ತಿಗಳ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಿ.

ದಾವೂದ್ ಇಬ್ರಾಹಿಂ-ಸಿಎಂ ಇಬ್ರಾಹಿಂ ಒಂದೇ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ, ಮಾಜಿ ಸಚಿವ ಸಿಎಂ ಇಬ್ರಾಹಿಂಗೂ ಯಾವುದೇ ವ್ಯತ್ಯಾಸವಿಲ್ಲ. ಅವರೊಬ್ಬ ಸಿದ್ದರಾಮಯ್ಯ ಆಸ್ಥಾನದ ವಿದೂಷಕ. ಸಿದ್ದರಾಮಯ್ಯ ಜತೆ ಇದ್ದಾಗ ಹೆಚ್.ಡಿ.ದೇವೇಗೌಡರ ವಿರುದ್ಧ ಬೇಕಾಬಿಟ್ಟಿಯಾಗಿ ಮಾತನಾಡಿದವರು. ಈಗ ಸಮಯ ಸಾಧಕತನ ತೋರುತ್ತಿರುವ ಪುಂಗಿದಾಸ ಎಂದು ಇಬ್ರಾಹಿಂ ವಿರುದ್ಧ ಹರಿಹಾಯ್ದರು.

ರಾಜಭವನ ವಿಶ್ರಾಂತಿಭವನವಾಗಬಾರದು…: ಬಿಜೆಪಿಯಿಂದ ನನಗೆ ರಾಜ್ಯಪಾಲರ ಹುದ್ದೆ ನೀಡುವ ಆಫರ್ ಬಂದಿತ್ತು. 42 ವರ್ಷ ರಾಜಕಾರಣದಿಂದ ನಾನು ಬಳಲಿದ್ದೇನೆ. ದೈಹಿಕ ವಿಶ್ರಾಂತಿ ಅಗತ್ಯವಾಗಿದೆ. ಈ ವೇಳೆ ರಾಜ್ಯಪಾಲ ಹುದ್ದೆ ಪಡೆದು, ರಾಜಭವನವನ್ನು ವಿಶ್ರಾಂತಿ ಭವನ ಮಾಡಿಕೊಂಡರು ಎಂಬ ಆರೋಪ ಕೇಳಿ ಬರುತ್ತದೆ ಎಂದು ನಿರಾಕರಿಸಿದೆ. ನಾನು ಹೋರಾಟದಿಂದ ಬಂದವನು. ಅತೀ ಚಿಕ್ಕ ವಯಸ್ಸಿನಲ್ಲಿ ಸಂಸದ ಸ್ಥಾನಕ್ಕೇರಿದವನು. ನನಗೆ ಆಸೆ, ಆಕಾಂಕ್ಷೆ ಯಾವುದು ಇಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

Translate »