ಮಹಿಳಾ ಸ್ವಸಹಾಯ ಸಂಘಗಳು ಸಾವಲಂಬನೆ ಸಾಧಿಸಿ: ಶ್ರೀಗುರುಸಿದ್ದೇಶ್ವರ ಸ್ವಾಮೀಜಿ
ಮಂಡ್ಯ

ಮಹಿಳಾ ಸ್ವಸಹಾಯ ಸಂಘಗಳು ಸಾವಲಂಬನೆ ಸಾಧಿಸಿ: ಶ್ರೀಗುರುಸಿದ್ದೇಶ್ವರ ಸ್ವಾಮೀಜಿ

December 18, 2019

ಕೆ.ಆರ್.ಪೇಟೆ, ಡಿ.17- ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಗೃಹ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಬೇಬಿಬೆಟ್ಟ ಶ್ರೀರಾಮೇಶ್ವರ ಮಠದ ಪೀಠಾಧ್ಯಕ್ಷ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸದೆ ಜಯಶ್ರೀ ರಂಗಮಂಟಪದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರಸ್ತುತ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಮ್ಮ ಸಂಸ್ಕøತಿ ಮತ್ತು ಪರಂಪರೆ ಬಗ್ಗೆ ಜಾಗೃತಿ ಮೂಡಿಸಿ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.

ಡಾ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದ್ದು, ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆಯಾಗಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯ ವಿಷಯಗಳಾಗಿದೆ ಎಂದರು.

ವೇದಬ್ರಹ್ಮ ಶ್ರೀಗೋಪಾಲಕೃಷ್ಣ ಅವದಾನಿಗಳು ಮಾತನಾಡಿದರು. ಜಿಪಂ ಸದಸ್ಯ ಬಿ.ಎಲ್.ದೇವರಾಜು, ತಾಪಂ ಸದಸ್ಯೆ ವಿನೂತ, ಗ್ರಾಪಂ ಅಧ್ಯಕ್ಷೆ ಸುಕನ್ಯ, ಉಪಾಧ್ಯಕ್ಷ ಎ.ಜೆ.ಕುಮಾರ್, ಮುಖಂಡರಾದ ಎ.ಆರ್.ರಘು, ಸುಬ್ಬೇಗೌಡ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಪಿಡಿಓ ವಿ.ಎಂ.ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಹೈನುಗಾರಿಕೆ ಅಧಿಕಾರಿ ನಿಂಗಪ್ಪ ಅಗಸರ್ ಸೇರಿದಂತೆ ಸಾವಿರಾರು ಮಹಿಳೆಯರು ಹಾಗೂ ಪ್ರಗತಿಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದರು.

Translate »