ಪ್ರಚಾರಕ್ಕಿಳಿದ ಶ್ರೀನಿವಾಸ್‍ಪ್ರಸಾದ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಚಾಮರಾಜನಗರ

ಪ್ರಚಾರಕ್ಕಿಳಿದ ಶ್ರೀನಿವಾಸ್‍ಪ್ರಸಾದ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

March 23, 2019

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‍ಪ್ರಸಾದ್, ಪಕ್ಷದ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಕೊಳ್ಳೇಗಾಲಕ್ಕೆ ಶುಕ್ರವಾರ ಆಗಮಿಸಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಈ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿ ಕೃತವಾಗಿ ಚಾಲನೆ ನೀಡಿದರು.

ಚಾಮರಾಜನಗರದಲ್ಲಿ ನಡೆದ ಸಭೆ ಯಲ್ಲಿ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, ನೂರಾರು ವರ್ಷಗಳ ಇತಿ ಹಾಸ ಇರುವ ಕಾಂಗ್ರೆಸ್ ಪಕ್ಷ ಇಂದು ದುರ್ಬಲ ಆಗಿದೆ. ಬಹುತೇಕ ರಾಜ್ಯ ಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿ ಕೊಳ್ಳಲು ಇತರ ಪಕ್ಷಗಳು ಒಪ್ಪಿಲ್ಲ. ಕರ್ನಾಟಕ ರಾಜ್ಯ ದಲ್ಲಿ ಮಾತ್ರ ಕಾಂಗ್ರೆಸ್‍ಗೆ ನೆಲೆ ಇತ್ತು. ಆದರೆ ಆ ಪಕ್ಷ ಇಂದು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ತರಿಸಿದೆ. ಈ ಮೂಲಕ ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಆಗುತ್ತಿದೆ ಎಂದು ಜರಿದರು.

ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎನ್ನು ತ್ತಿದ್ದರು. ಹೆಚ್.ಡಿ.ಕುಮಾರಸ್ವಾಮಿ ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗೊಲ್ಲ ಎನ್ನುತ್ತಿದ್ದರು. ಅವರ ಸ್ಥಿತಿ ಈಗ ಹೇಗಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ವಾಗಿ ಸೋತು, ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆದ್ದ. ಆದರೂ ಆತ ಇನ್ನೂ ಅಹಂ ಬಿಟ್ಟಿಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್ ಏಕವಚನದಲ್ಲಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಕ್ಷೇತ್ರದಲ್ಲಿ ಗುರು ಶಿಷ್ಯರಲ್ಲಿ ಕದನ ಎಂಬ ಪ್ರಶ್ನೆ ಎದ್ದಿದೆ. ನಾನು ಬಿಜೆಪಿ ಅಭ್ಯರ್ಥಿ. ಆತ ಕಾಂಗ್ರೆಸ್ ಅಭ್ಯರ್ಥಿ. ರಾಜಕೀಯದಲ್ಲಿ ಗುರು-ಶಿಷ್ಯ ಎಂಬ ಪ್ರಶ್ನೆ ಇಲ್ಲ. ಧ್ರುವನಾರಾಯಣ್ ತನ್ನ ರಾಜಕೀಯ ಗುರು ರಾಜಶೇಖರಮೂರ್ತಿ ಎಂದಿದ್ದಾರೆ. ರಾಜಶೇಖರಮೂರ್ತಿ ಅವರ ಬಗ್ಗೆ ನಮಗೂ ಗೌರವ ಇದೆ. ಒಂದು ಮತದಿಂದ ಗೆದ್ದ ಸಂತೇಮರಹಳ್ಳಿ ಕ್ಷೇತ್ರ ರದ್ದಾದಾಗ ನಿನಗೆ ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಕೊಡಿಸಿದ್ದು ಯಾರು? ಕೊಳ್ಳೇಗಾಲ ಕ್ಷೇತ್ರದ ಶಾಸಕನಾಗಿದ್ದ ನಿನಗೆ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಸಲಹೆ ನೀಡಿದ್ದು ಯಾರು? ಆ ವೇಳೆ ನನ್ನನ್ನು ಕೇಳದೆ ಯಾರು ಟಿಕೆಟ್ ಕೊಡುತ್ತಿದ್ದರು? ಈಗ ಇದೆಲ್ಲಾ ಮರೆತು ಸಿದ್ದರಾಮಯ್ಯ ಅವರು ಟಿಕೆಟ್ ಕೊಡಿಸಿದರು ಎಂದು ಹೇಳಿಕೆ ನೀಡಿದ್ದಾರೆ ಎಂದು ಧ್ರುವನಾರಾಯಣ್‍ರನ್ನು ಪ್ರಶ್ನಿಸಿದರಲ್ಲದೆ, ಆ ಸಂದರ್ಭದಲ್ಲಿ ಸಿದ್ದರಾಮಯ್ಯನಿಗೆ ಮೂರು ಕಾಸಿನ ಬೆಲೆ ಇರಲಿಲ್ಲ ಎಂದು ಕುಟುಕಿದರು.
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಮೈತ್ರಿ ಸರ್ಕಾರ ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತಿದೆ ಎಂಬುದನ್ನು ಜನರು ಗಮನಿಸ ಬೇಕು. ಈ ಎರಡೂ ಪಕ್ಷಗಳ ಸಮನ್ವಯ ಸಮಿತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರದಲ್ಲಿ ಸಮರ ನಡೆ ಯುತ್ತಿದೆ ಎಂದರು. ಧ್ರುವನಾರಾಯಣ್‍ಗೆ ತಕ್ಕ ಪಾಠ ಕಲಿಸಬೇಕು ಎಂದು ಪಕ್ಷದ ಕ್ಷೇತ್ರದ ಮುಖಂಡರು ನನಗೆ ಒತ್ತಡ ತಂದು ಅಭ್ಯರ್ಥಿ ಆಗುವಂತೆ ಮಾಡಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ತಲೆಬಾಗಿ ಅಭ್ಯರ್ಥಿಯಾಗಿದ್ದೇನೆ ಎಂದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ, ಪಕ್ಷದ ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿ ಕಾರ್ಜುನಪ್ಪ, ಮೈಸೂರು ಗ್ರಾಮಾಂತರ ಅಧ್ಯಕ್ಷ ಹೆಚ್.ಡಿ.ಕೋಟೆ ಶಿವಣ್ಣ, ಶಾಸಕರಾದ ಸಿ.ಎಸ್.ನಿರಂಜನ್‍ಕುಮಾರ್, ಹರ್ಷ ವರ್ಧನ್, ಮಾಜಿ ಶಾಸಕ ಸಿದ್ದರಾಜು, ಜಿಪಂ ಸದಸ್ಯ ಸಿ.ಎನ್.ಬಾಲರಾಜು, ಮಾಜಿ ಅಧ್ಯಕ್ಷರಾದ ಎಸ್.ಮಹದೇವಯ್ಯ, ನಾಗಶ್ರೀ, ನಟರಾಜು, ತಾಪಂ ಉಪಾಧ್ಯಕ್ಷ ಬಸವಣ್ಣ, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯ್ಕ, ಹನುಮಂತ ಶೆಟ್ಟಿ, ಮಂಗಲ ಶಿವಕುಮಾರ್, ಪಾಪು, ರಾಜೇಂದ್ರ, ಅಪ್ಪಣ್ಣ, ಡಾ.ಭಾರತೀ ಶಂಕರ್, ಮಂಜುನಾಥ್‍ಗೌಡ, ಸುಂದರ, ಮಹದೇವಪ್ಪ, ಸಿ.ಬಸವೇಗೌಡ, ಪ್ರಭು ಸ್ವಾಮಿ, ಅಯ್ಯಪ್ಪನಪುರ ಶಿವಕುಮಾರ್, ಬಸವಣ್ಣ, ಸುಂದರ್‍ರಾಜು ಇತರರಿದ್ದರು.

Translate »