ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ
ಮಂಡ್ಯ

ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ

March 20, 2019

ಶ್ರೀರಂಗಪಟ್ಟಣ: ನಿರಂತರ ಭಾಗ್ಯಜ್ಯೋತಿ ಹಾಗೂ ರಾಜೀವ್ ಗಾಂಧಿ ಭಾಗ್ಯ ಜ್ಯೋತಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬೆಳಗೊಳ ಗ್ರಾಮಸ್ಥರು ಮಂಗಳವಾರ ಇಲ್ಲಿನ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಎರಡೂ ಯೋಜನೆಗಳಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನು ಭವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ದೊಂದಿಗೆ ಮೀಟರ್ ಅಳವಡಿಸಬೇಕಿದೆ. ಈ ಕಾಮಗಾರಿಯ ಗುತ್ತಿಗೆದಾರ ಮತ್ತು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ 100 ಫಲಾನುಭವಿ ಕುಟಂಬ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 27 ಲಕ್ಷ ರೂ. ಅನುದಾನ ಬಿಡುಗಡೆಯಾ ಗಿದೆ. ಆದರೆ, 100 ಮನೆಗಳ ಮೈಕಿ ಕೇವಲ ಸ್ವೀಪರ್ ಕಾಲೋನಿಯ 11 ಫಲಾನುಭವಿಗಳ ಮನೆಗಳಿಗಷ್ಟೇ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಯೋಜನೆ ಪೂರ್ಣ ಜಾರಿಗೊಳಿಸದೇ ಇದ್ದರೂ ಅನುದಾನದ 27 ಲಕ್ಷ ರೂ.ಗಳ ಬಿಲ್‍ಗೆ ಹಣವನ್ನೂ ಪಡೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬೆಳಗೊಳದಲ್ಲಿ ಕೃಷಿ ಜಮೀನುಗಳಿಗೆ 70 ಐಪಿ ಸೆಟ್‍ಗಳಿದ್ದು, ಅವುಗಳ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಪರ್ಯಾಯ ಮಾರ್ಗ ಕಲ್ಪಿಸದೇ ಸದ್ಯ ಬಳಕೆಯಲ್ಲಿರುವ ಗ್ರಾಮಾಂತರ ಲೈನ್ ಮುಖಾಂತರವೇ ವಿದ್ಯುತ್ ಮಾರ್ಗ ಹರಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಆಕ್ಷೇಪಿಸಿ ದ್ದಾರೆ.

ಟ್ರಾನ್ಸ್‍ಫಾರ್ಮರ್‍ಗಳು ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ವಿನಾ ಕಾರಣ ಬದಲಿಸಲಾಗುತ್ತಿದೆ. ಅವೈಜ್ಞಾನಿಕ ವಾಗಿ ಎಲ್ಲಿ ಬೇಕೆಂದರಲ್ಲಿ, ರಸ್ತೆ ಬದಿಯಲ್ಲೆ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದಾರೆ ಎಂದು ಗಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ರೈತ ಮುಖಂಡ ಸುನೀಲ್, ಗ್ರಾಮದಲ್ಲಿ ಕೆಲವೇ ವಿದ್ಯುತ್ ಕಂಬಗಳನ್ನು ಬದಲಿಸುತ್ತಿದ್ದಾರೆ. ಇದರಿಂದ ಅನಾಹುತ ಸಂಭವಿಸಲಿದೆ. ಕಾಲುವೆ ಏರಿ ಮೇಲೆಯೂ ಕಂಬಗಳನ್ನು ನೆಡುತ್ತಿದ್ದಾರೆ. ಆದರೆ, ಇದಕ್ಕೆ ನೀರಾವರಿ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಇದೆಲ್ಲಾ ನೋಡಿದರೆ ಶ್ರೀರಂಗಪಟ್ಟಣ ಸೆಸ್ಕ್‍ನಲ್ಲಿ ಭಾರಿ ಅವ್ಯವಹಾರ ನಡೆಯು ತ್ತಿದೆ ಎಂಬ ಅನುಮಾನ ಬರುತ್ತದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಇಇ ನಂದೀಶ್, ಗ್ರಾಮಸ್ಥರು ಆರೋಪಿಸುವ ಹಾಗೆ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಸಂಬಂಧ ಎಲ್ಲಾ ದಾಖಲಾತಿಗಳು ಇವೆ. ಹಾಗೇನಾದರು ಅವ್ಯವಹಾರ ನಡೆದಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದೇ ವೇಳೆ ಪಾಲಹಳ್ಳಿ ಶಿವಣ್ಣ ಶ್ರೀರಂಗಪಟ್ಟಣ ಗುರು, ಮೋಹನ್, ವಿಷಕಂಠು, ರಾಮಚಂದ್ರು, ರವಿ, ಕುಮಾರ ಇನ್ನಿತರರು ಇದ್ದರು.

Translate »