ಮೈಸೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ 
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ 

January 20, 2020

ಮೈಸೂರು, ಜ.19(ಪಿಎಂ)- ಮೈಸೂರು ಜಿಲ್ಲೆ ಯಲ್ಲಿ ಐದು ವರ್ಷದೊಳಗಿನ 2,43,951 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯೊಂದಿಗೆ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಅಭಿ ಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ನೂತನ ಮೇಯರ್ ತಸ್ನೀಂ, ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಿದರು.

ಮೊದಲ ದಿನದಂದೇ 2,31,994 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ್ದು, ಶೇ.95ರಷ್ಟು ಯಶಸ್ವಿ ಯಾಗಿದೆ ಎಂದು ಜಿಲ್ಲಾ

ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ. ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,621 ಲಸಿಕಾ ಬೂತ್‍ಗಳನ್ನು ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗಿತ್ತು.

ಇದರ ಜೊತೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಯಿತು. ಲಸಿಕಾ ಕಾರ್ಯಕ್ರಮಕ್ಕಾಗಿ 338 ಮೇಲ್ವಿಚಾರಕರು ಹಾಗೂ 6,484 ವ್ಯಾಕ್ಸಿನೇಟರ್‍ಗಳನ್ನು ನಿಯೋಜಿಸಲಾಗಿತ್ತು. ಮೈಸೂರು ನಗರಕ್ಕೆ 2 ಮೊಬೈಲ್ ತಂಡಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 742 ಪ್ರದೇಶಗಳನ್ನು ಹೈರಿಸ್ಕ್ ಏರಿಯಾ ಎಂದು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಒಟ್ಟು 72 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಮೈಸೂರು ನಗರದಲ್ಲಿ 97, ಮೈಸೂರು ಗ್ರಾಮೀಣ ಪ್ರದೇಶದಲ್ಲಿ 38, ತಿ.ನರಸೀಪುರ ತಾಲೂಕಿನಲ್ಲಿ 62, ನಂಜನಗೂಡು ತಾಲೂಕಿನಲ್ಲಿ 189, ಹುಣಸೂರು ತಾಲೂಕಿನಲ್ಲಿ 107, ಹೆಚ್‍ಡಿ ಕೋಟೆ ತಾಲೂಕಿನಲ್ಲಿ 160, ಪಿರಿಯಾಪಟ್ಟಣ ತಾಲೂಕಿನಲ್ಲಿ 48, ಹಾಗೂ ಕೆಆರ್ ನಗರ ತಾಲೂಕಿನಲ್ಲಿ 41 ಹೈರಿಸ್ಕ್ ಏರಿಯಾ ಸೇರಿದಂತೆ ಒಟ್ಟು 742 ಪ್ರದೇಶಗಳನ್ನು ಜಿಲ್ಲೆಯಲ್ಲಿ ಹೈರಿಸ್ಕ್ ಎಂದು ಗುರುತಿಸಲಾಗಿದೆ. ಇಂದು ಲಸಿಕೆಯಿಂದ ವಂಚಿತ ಮಕ್ಕಳಿ ಗಾಗಿ ಮೈಸೂರು ನಗರದಲ್ಲಿ ಜ.20ರಿಂದ 23ರವರೆಗೆ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜ.20ರಿಂದ 22ರವರೆಗೆ ನರ್ಸ್‍ಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್,  ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ.ಎಲ್.ರವಿ, ಜಿಲ್ಲಾ ಕುಟುಂಬ ಕಲ್ಯಾ ಣಾಧಿಕಾರಿ ಡಾ.ಸಿರಾಜ್ ಅಹಮ್ಮದ್, ವಿಶ್ವ ಆರೋಗ್ಯ ಸಂಸ್ಥೆಯ ಮೈಸೂರು ಘಟಕದ ವೈದ್ಯಕೀಯ ಅಧಿಕಾರಿ ಡಾ.ಸುದೀರ್ ನಾಯಕ್, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಆರೋಗ್ಯ ಇಲಾಖೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರಸಾದ್ ಮತ್ತಿತರರು ಹಾಜರಿದ್ದರು.

 

Translate »