ಮೈಸೂರಲ್ಲಿ ನಮೋ ಯೋಗ ಭವನ ಆರಂಭ
ಮೈಸೂರು

ಮೈಸೂರಲ್ಲಿ ನಮೋ ಯೋಗ ಭವನ ಆರಂಭ

July 8, 2019

ಮೈಸೂರು,ಜು.7-ಹತ್ತು ಹಲವು ವೈಶಿಷ್ಟ್ಯಗಳ ತಾಣ `ಮೈಸೂರು ನಗರ’ ಯೋಗ ಪರಂಪರೆಗೂ ಹೆಸರಾಗಿದ್ದು, ಇದೀಗ ಮೈಸೂರು ನಗರದಲ್ಲಿ ಮಹಾ ನಗರ ಪಾಲಿಕೆ ವತಿಯಿಂದ ನಿರ್ಮಾಣ ವಾಗಿರುವ ಮೊಟ್ಟ ಮೊದಲ ಯೋಗಾ ಭ್ಯಾಸ ಕೇಂದ್ರವಾದ `ನಮೋ ಯೋಗ ಭವನ’ದಲ್ಲಿ 50ಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನಮೋ ಯೋಗ ಭವನ ಹಲವು ವಿಶೇಷತೆಗಳನ್ನು ಮೈದಳೆಯಲಿದೆ. ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯ 25 ಲಕ್ಷ ರೂ. ವೆಚ್ಚದಲ್ಲಿ 51ನೇ ವಾರ್ಡಿನ ರಾಮಾನುಜ ರಸ್ತೆಯಲ್ಲಿ `ನಮೋ ಯೋಗ ಭವನ’ ನಿರ್ಮಾಣಗೊಂಡು ಕಳೆದ ಜೂ.21ರ ಅಂತಾ ರಾಷ್ಟ್ರೀಯ ಯೋಗ ದಿನದಂದೇ ಲೋಕಾ ರ್ಪಣೆಗೊಂಡಿತು. ಜು.1ರಿಂದ ಉಚಿತ ಸರಳೀಕೃತ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ತರಬೇತಿಯು ಇಲ್ಲಿ ಆರಂಭಗೊಂಡಿದೆ.

ಕೆಲವೇ ದಿನಗಳಲ್ಲಿ ಯೋಗ ಭವನದ ಆವರಣ ಹಲವು ವಿಶೇಷತೆಗಳನ್ನು ಒಳಗೊಳ್ಳಲಿದ್ದು, ಭವನದ ಎದುರು ಯೋಗ ಗುರು `ಮಹರ್ಷಿ ಪತಂಜಲಿ’ ಪ್ರತಿಮೆ ಸ್ಥಾಪನೆಗೆ ಸಿದ್ಧತೆಗಳು ನಡೆದಿವೆ. `ಮಹರ್ಷಿ ಪತಂಜಲಿ ಯೋಗ ಉದ್ಯಾನ’ ಹಾಗೂ ಉದ್ಯಾನದಲ್ಲಿ ಪತಂಜಲಿ ಮಹರ್ಷಿಗಳ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಉದ್ಯಾನವನ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಪಾಲಿಕೆ 30 ಲಕ್ಷ ರೂ. ವಿನಿಯೋಗಿಸುತ್ತಿದ್ದರೆ, ಪ್ರಾಯೋ ಜಕತ್ವದಲ್ಲಿ ಪತಂಜಲಿ ಮಹರ್ಷಿಗಳ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಇಲ್ಲಿ ತರಬೇತಿ ಪಡೆಯಲಿಚ್ಛಿಸುವವರು ಎರಡು ಪಾಸ್‍ಪೋರ್ಟ್ ಅಳತೆಯ ಭಾವ ಚಿತ್ರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳ ಬೇಕು. ತರಬೇತಿಗೆ ಬರುವಾಗ ಶ್ವೇತ ವರ್ಣದ ಟಿ-ಶರ್ಟ್ ಹಾಗೂ ಸ್ಪೋಟ್ರ್ಸ್ ಪ್ಯಾಂಟ್ ಧರಿಸಿ ಬರಬೇಕಿರುತ್ತದೆ. ಅಲ್ಲದೆ, ಯೋಗಾ ಸನ ಮಾಡಲು ಯೋಗ ಮ್ಯಾಟ್‍ವೊಂದು ಜೊತೆಯಲ್ಲಿ ತರುವುದು ಅಗತ್ಯವಾಗಿದೆ. `ರಾಷ್ಟ್ರೀಯ ಯೋಗ ಚಾಂಪಿಯನ್’ ಯೋಗ ಪ್ರಕಾಶ ಅವರ ನೇತೃತ್ವದಲ್ಲಿ ಯೋಗಾಭ್ಯಾಸದ ತರಬೇತಿಗಳು ನಡೆಯುತ್ತಿದ್ದು, ಮತ್ತೊಬ್ಬ ಯೋಗ ಶಿಕ್ಷಕರನ್ನು ನಿಯೋಜಿಸಲು ಮುಂದಾಗಲಾಗಿದೆ. `ಕಾಮನ ಬಿಲ್ಲು’ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಅವರ ಯೋಗ ಭಂಗಿ ಕಂಡು ಪ್ರೇರಿತರಾಗಿ ಯೋಗ ಪ್ರಕಾಶ್ ತಮ್ಮ 45 ವರ್ಷ ವಯೋಮಾನ ದಲ್ಲಿ ಯೋಗಾಭ್ಯಾಸ ಕಲಿತವರು. ಆ ಬಳಿಕ ಯೋಗದಲ್ಲಿ ಅನೇಕ ಸಾಧನೆ ಗಳನ್ನು ಮೆರೆದ ಯೋಗ ಪ್ರಕಾಶರು ಇದೀಗ ತಮ್ಮ 59 ವರ್ಷ ವಯೋಮಾನದಲ್ಲಿ ಯೋಗ ಭವನಕ್ಕೆ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ. ಮಾತ್ರವಲ್ಲದೆ, ಯೋಗ ಭವನದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಉತ್ಸುಕರಾಗಿದ್ದಾರೆ. ಯೋಗ ಭವನದ ಆವರಣದಲ್ಲಿ ಉದ್ಯಾನ ಹಾಗೂ ಮಹರ್ಷಿ ಪತಂಜಲಿ ಪ್ರತಿಮೆ ನಿರ್ಮಾಣದ ತವಕದಲ್ಲಿರುವ ಯೋಗ ಪ್ರಕಾಶ, ಆ ನಂತರ ಇಲ್ಲಿ ಯೋಗ ಗ್ರಂಥಾ ಲಯ ತೆರೆ ಯಲು ಚಿಂತನೆ ನಡೆಸಿದ್ದಾರೆ.

`ಯೋಗ ಭವನದಲ್ಲಿ ಯೋಗ ಗ್ರಂಥಾ ಲಯ ತೆರೆಯಲು ಉದ್ದೇಶಿಸಲಾಗಿದೆ. ಜೊತೆಗೆ ಯೋಗಕ್ಕೆ ಸಂಬಂಧಿಸಿದಂತೆ ಇರುವ ಕೋರ್ಸ್‍ಗಳು ಹಾಗೂ ಈ ಕೋರ್ಸ್ ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳ ಪರಿಚ ಯದ ಸಮಗ್ರ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಮೈಸೂರಿನ ಯೋಗ ಸಂಸ್ಥೆಗಳು ಮತ್ತು ಅವುಗಳ ದೂರವಾಣಿ ಸಂಪರ್ಕ ಹೊಂದಿರುವ `ಯೋಗ ಡೈರೆಕ್ಟರಿ’ ಯೋಗ ಭವನದಲ್ಲಿ ಲಭ್ಯವಿರುವಂತೆ ಮಾಡಲು ಚಿಂತನೆ ನಡೆಸಿದ್ದೇನೆ ಎನ್ನುತ್ತಾರೆ ಯೋಗ ಪ್ರಕಾಶ್ ಅವರು.

ಯೋಗ ಭವನ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ 51ನೇ ವಾರ್ಡಿನ ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್, ಪಾಲಿಕೆ ವತಿಯಿಂದ ನಮೋ ಯೋಗ ಭವನ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕೆಆರ್ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡಿಗೊಂದು ಯೋಗ ಭವನ ನಿರ್ಮಿಸಲು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಉದ್ದೇಶಿಸಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಈ ಉದ್ದೇಶಿತ ಯೋಜನೆಯನ್ನು ಶಾಸಕರು ಹಾಕಿಕೊಂಡಿದ್ದಾರೆ. ನಮೋ ಯೋಗ ಭವನದ ಎರಡನೇ ಅಂತಸ್ತು ನಿರ್ಮಿಸಲು ಉದ್ದೇಶ ಹೊಂದಿದ್ದು, ಇದಕ್ಕಾಗಿ ಶಾಸಕರಿಗೆ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಂ.ಬಿ.ಪವನ್‍ಮೂರ್ತಿ

Translate »