ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದು: ಶಾಸಕ ಎಸ್.ಎ.ರಾಮದಾಸ್
ಮೈಸೂರು

ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದು: ಶಾಸಕ ಎಸ್.ಎ.ರಾಮದಾಸ್

July 8, 2019

ಮೈಸೂರು,ಜು.7(ಎಂಕೆ)- ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದಿದ್ದು, ಉತ್ತಮ ಶಿಕ್ಷಣ ನೀಡುವುದರಿಂದ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರಿನ ಗೌರಿಶಂಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ವತಿಯಿಂದ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಹಾ ಸಂಘ(ಪಿಆರ್‍ಸಿಐ), ಯುವ ಸಂವಾಹಕರ ಒಕ್ಕೂಟ(ವೈಸಿಸಿ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜನ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿ ಕೊಳ್ಳಲಾಗಿದ್ದ ‘ಹೆಣ್ಣುಮಗು ರಕ್ಷಿಸಿ: ಶಿಕ್ಷಣ ಕೊಡಿಸಿ’ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿನಂತೆ ಹೆಣ್ಣು ತಾನು ಕಲಿತದ್ದನ್ನು ಇತರರಿಗೆ ಕಲಿಸುತ್ತಾಳೆ. ಸಮಾಜದಲ್ಲಿ ಪುರುಷನಷ್ಟೇ ಮಹಿಳೆಯು ಸಮಾನಳಾಗಿದ್ದು, ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವು ದರಿಂದ ಬಾಹ್ಯಾಕಾಶಕ್ಕೆ ಹಾರುವ ಮಟ್ಟಕ್ಕೆ ಮಹಿಳೆಯರು ಬೆಳೆದಿದ್ದಾರೆ ಎಂದರು.

2022ರ ವೇಳೆಗೆ ಕೆ.ಆರ್.ಕ್ಷೇತ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸೂರು ಕಲ್ಪಿಸುವ ಸಂಕಲ್ಪ ಮಾಡಲಾಗಿದೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಯರು ಉತ್ತಮ ಅಂಕಗಳನ್ನು ಗಳಿಸಿದರೆ, ಅವರನ್ನು ಗುರುತಿಸಿ, ಮನೆ ಇಲ್ಲದಿದ್ದರೇ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿನಿಯರೊಂದಿಗೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಕುರಿತು ಸಂವಹನ ನಡೆಸುವ ಮೂಲಕ ಪ್ರಶ್ನೆಗಳನ್ನು ಕೇಳಿದರು. ಸರಿಯಾದ ಉತ್ತರಗಳನ್ನು ನೀಡಿದ ವಿದ್ಯಾರ್ಥಿನಿಗೆ 2 ಸಾವಿರ ಹಣವನ್ನು ನೀಡಿ ಚೆನ್ನಾಗಿ ಓದಬೇಕು ಎಂದರು.

ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಹಾಸಂಘ(ಪಿಆರ್‍ಸಿಐ) ಸಂಸ್ಥಾಪಕ ಎಂ.ಬಿ.ಜಯರಾಮ್ ಮಾತನಾಡಿ, ಕಲ್ಪನಾ ಚಾವ್ಲಾ ಅವರ ನೆನಪಾರ್ಥ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳ ಲಾಗುತ್ತಿದೆ. ಇದೊಂದು ಉತ್ತಮ ಕಾರ್ಯಕ್ರಮ ವಾಗಿದ್ದು, ಮಕ್ಕಳ ಅಭಿವೃದ್ಧಿಗೆ ಸಹಕಾರಿ ಯಾಗುತ್ತದೆ ಎಂದರು.

ಟಿವಿ ಮುಂದೆ ಕೂತು ಪ್ರಯೋಜನ ವಿಲ್ಲದ ವಿಚಾರಗಳನ್ನು ಚರ್ಚಿಸುವ ಬದಲು ಸದಾ ಓದಿನಲ್ಲಿ ತೊಡಗಿಕೊಳ್ಳ ಬೇಕು. ಇದರಿಂದ ಏಕಾಗ್ರತೆಯೂ ಹೆಚ್ಚು ತ್ತದೆ. ಅಲ್ಲದೆ ಮುಂದಿನ ಕಲ್ಪನಾ ಚಾವ್ಲಾ ನೀವೇ ಆಗಬಹುದು ಎಂದು ಹೇಳಿದರು.

ಜಾಗೃತಿ ನಾಟಕ ಪ್ರದರ್ಶನ: ಮಂಡ್ಯದ ಅರುಣೋದಯ ಹಾಗೂ ರಾಗರಂಜನಿ ಕಲಾ ತಂಡದಿಂದ ಬೀದಿ ನಾಟಕ ಮತ್ತು ರಂಗಗೀತೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಕಲಾವಿದರು ಹೆಣ್ಣು ಮಕ್ಕಳು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಂಕಷ್ಟ ಗಳು, ಮಹಿಳೆ ಹುಟ್ಟಿನಿಂದ ಸಾಯು ವವರೆಗೆ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಪುರುಷ ರಂತೆ ಮಹಿಳೆಯರನ್ನು ಸಮಾನವಾಗಿ ಕಾಣಬೇಕು ಎಂಬುದನ್ನು ಮನ ಮುಟ್ಟು ವಂತೆ ಅಭಿನಯದ ಮೂಲಕ ತೋರಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ವೈಸಿಸಿ ಅಧ್ಯಕ್ಷೆ ಗೀತಾ ಶಂಕರ್, ಪಿಆರ್‍ಸಿಐ ಮೈಸೂರು ಘಟಕದ ಅಧ್ಯಕ್ಷೆ ಡಾ.ಎಂ.ಎಸ್.ಸಪ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಆರ್.ರಾಧಾ ರಾಣಿ, ಜನ ಶಿಕ್ಷಣ ಸಂಸ್ಥೆ ನಿರ್ದೇಶಕ ಎ.ಪಿ.ರಮೇಶ್, ಮುಖ್ಯೋಪಾಧ್ಯಾಯ ಪಿ.ಸಂಪತ್ತು, ಪಿಆರ್‍ಸಿಐ ಕಾರ್ಯದರ್ಶಿ ಹೆಚ್.ಎಂ.ರೇಣುಕಾನಂದ, ಸಿ.ವಿ.ಲಕ್ಷ್ಮೀ ಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Translate »