ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ

October 11, 2018

ಮೈಸೂರು: ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆರಂಭ ವಾಗಿರುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಅ.10ರಿಂದ 15ರವರೆಗೆ ನಡೆಯುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೈಲ್ವಾನರನ್ನು ಅಖಾಡಕ್ಕೆ ಬಿಡುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು.

ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, 1610ರಲ್ಲಿ ಮೈಸೂರು ರಾಜವಂಶಸ್ಥರು ಪ್ರಥಮವಾಗಿ ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಿಸಿದರು. ಮೈಸೂರಿನಲ್ಲೂ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ದಿನಗಳಲ್ಲೂ ದಸರಾ ಮಹೋ ತ್ಸವ ಆಚರಿಸುವ ಜತೆಗೆ ಹಲವು ಕ್ರೀಡೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ನಂತರದಲ್ಲಿ ಸರ್ಕಾರಗಳು ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಕ್ರೀಡೆಗೂ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಹಾಗೆಯೇ ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿಗೆ ಮೈಸೂರಿಗರು ಹೆಚ್ಚು ಒತ್ತು ನೀಡುವ ಮೂಲಕ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕುಸ್ತಿ ಪಂದ್ಯಾವಳಿ ಯಲ್ಲಿ ಭಾಗವಹಿಸಿರುವ ಎಲ್ಲಾ ಕುಸ್ತಿಪಟುಗಳಿಗೂ ಶುಭಕೋರಿದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಸಚಿವರಾದ ಸಾ.ರಾ.ಮಹೇಶ್, ಎನ್.ಮಹೇಶ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ಜ್ಯೋತಿ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಕಾರ್ಯಾಗಾರ: ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಕುಸ್ತಿ ಪಂದ್ಯಾವಳಿ ನಡೆಸಲು ಪಾಯಿಂಟ್ ಕುಸ್ತಿ ತೀರ್ಪು ಗಾರರಿಗೆ ಅ.11ರಂದು ಬೆಳಿಗ್ಗೆ 10.30ಕ್ಕೆ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ಕಾರ್ಯಾಗಾರದಲ್ಲಿ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್.ನರಸಿಂಹ ಹಾಗೂ ಹಿರಿಯ ತರಬೇತುದಾರರು ಮಾಹಿತಿ ನೀಡಲಿದ್ದಾರೆ. ಹಾಗಾಗಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವ ಎಲ್ಲಾ ತೀರ್ಪುಗಾರರು ಹಾಗೂ ಆಸಕ್ತ ಕುಸ್ತಿಪಟುಗಳು ಭಾಗವಹಿಸಬಹುದು.

ಮಾರ್ಫಿಟ್ ಕುಸ್ತಿಯಲ್ಲಿ ಮಥುರ ಉತ್ತರ ಪ್ರದೇಶ ಕೇಸರಿ ಪರಾಕ್ರಮ

ಮೈಸೂರು: ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ದಸರಾ ನಾಡಕುಸ್ತಿ ಪಂದ್ಯಾವಳಿಯ ಮಾರ್ಫಿಟ್ ಕುಸ್ತಿಯಲ್ಲಿ ಉತ್ತಮ ಪಟ್ಟು ಪ್ರದರ್ಶಿಸಿದ ಮಥುರ ಉತ್ತರ ಪ್ರದೇಶ ಕೇಸರಿ ಪೈ.ಉಮೇಶ್ ಗೆಲುವು ಸಾಧಿಸಿದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿ ಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿರುವ ದಸರಾ ನಾಡಕುಸ್ತಿ ಪಂದ್ಯಾವಳಿಯ ಮೊದಲ ದಿನವಾದ ಬುಧವಾರ, ಪೈಲ್ವಾನರು ಮದಗಜಗಳಂತೆ ಕಾದಾಡಿ, ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದರು.

ಮಥುರ ಉತ್ತರ ಪ್ರದೇಶ ಕೇಸರಿ ಪೈ.ಉಮೇಶ್ ಮತ್ತು ಪುಣೆ ಗೋಕುಲ್ ಉಸ್ತಾದ್ ತಾಲೀಮ್ ಪೈ.ಭಾರತ್ ಮದನೆ ಅವರ ನಡುವಿನ ಮಾರ್ಫಿಟ್ ಕುಸ್ತಿ ರೋಚಕವಾಗಿತ್ತು. ಇಬ್ಬರು ಪೈಲ್ವಾನರು ತೊಡೆ ತಟ್ಟಿ ಮೈ ಮೇಲೆ ಮಟ್ಟಿ ಮಣ್ಣು ಎರಚಿಕೊಂಡು ಪಟ್ಟಿಗೆ ಎದುರು ಪಟ್ಟು ನೀಡುವ ಮೂಲಕ ಅಖಾಡದಲ್ಲಿ ಧೂಳೆಬ್ಬಿಸಿದರು. ಅಂತಿಮವಾಗಿ ಮಥುರ ಉತ್ತರ ಪ್ರದೇಶ ಕೇಸರಿ ಪೈ.ಉಮೇಶ್, ಪುಣೆ ಗೋಕುಲ್ ಉಸ್ತಾದ್ ತಾಲೀಮ್ ಪೈ.ಭಾರತ್ ಮದನನನ್ನು ಮಣಿಸಿ ಗೆಲುವಿನ ನಗೆ ಬೀರಿದರು.

30 ನಿಮಿಷ: ಭೂತಪ್ಪನ ಗರಡಿಯ ಪೈ.ಯಶ್ವಂತ್ ಕಾಳಿಂಗ ಮತ್ತು ಬೆಳಗಾಂ ಪೈ.ಶಿವಯ್ಯ ಪೂಜಾರ್ ನಡುವಿನ 30 ನಿಮಿಷದ ಕುಸ್ತಿ ಆರಂಭ ದಿಂದಲೂ ಆಕರ್ಷಕವಾಗಿತ್ತು. ಇಬ್ಬರೂ ಕಾದಾಟ ನಡೆಸಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದರೂ ಕೊನೆಯ ಕ್ಷಣದಲ್ಲಿ ಸಮಬಲದಲ್ಲಿ ಅಂತ್ಯಗೊಂಡು ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿತು. ಹಾಗೆಯೇ ಫಕೀರ ಅಹಮದ್ ಸಾಹೇಬರ ಗರಡಿಯ ಪೈ.ಪ್ರವೀಣ ಚಿಕ್ಕಹಳ್ಳಿ ಮತ್ತು ಬೆಳಗಾಂ ಪೈ.ಸಾಗರ ಎಲಡ್ಕಿ ನಡುವಿನ ಕುಸ್ತಿಯು ಸಮಬಲ ಸಾಧಿಸಿತು.

ಸಮಬಲ: ಹಂಪಾಪುರ ಪೈ.ನಾಗೇಶ್-ಬೆಳಗಾಂ ಪೈ.ನಾಗರಾಜು, ರಮ್ಮನಹಳ್ಳಿ ಪೈ.ರವಿ-ಸಾಂಗ್ಲಿ ಪೈ.ಭಜರಂಗಿ, ಪಾಲಹಳ್ಳಿ ಪೈ. ಗಿರೀಶ್-ಸಾಂಗ್ಲಿ ಪೈ. ಪರಶುರಾಂ, ಪಾಂಡವಪುರ ಪೈ.ಸುಜೇಂದ್ರ -ಉದ್ಬೂರು ಪೈ.ಭರತ್, ಬಾಬುರಾಯನಕೊಪ್ಪಲು ಪೈ.ಕಿರಣ್-ಕ್ಯಾತಮಾರನಹಳ್ಳಿ ಪೈ.ನವೀನ್, ಗಂಜಾಂ ಪೈ.ನಾರಾಯಣ-ಇಟ್ಟಿಗೆಗೂಡು ಪೈ.ಚಂದನ್ ಸಮಬಲ ಸಾಧಿಸಿದರು.

 

Translate »