ಮೈಸೂರು,ಆ.17(ಎಸ್‍ಪಿಎನ್)-ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆ.22ರಂದು ಗಜಪಯಣ ಕಾರ್ಯ ಕ್ರಮವನ್ನು ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
`ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಆ.22ರಂದು ಬೆಳಿಗ್ಗೆ 10.30ಕ್ಕೆ ವೀರನಹೊಸಹಳ್ಳಿಯಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಮೈಸೂರು ಕಡೆಗೆ ಪಯಣ ಆರಂಭಿಸಿ, ಆ.26ರಂದು ಅರಮನೆಯಲ್ಲಿ ಸ್ವಾಗತಿಸುವ ಕಾರ್ಯಕ್ರಮವಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ 2ನೇ ತಂಡ ಆಗಮಿಸಲಿವೆ ಎಂದರು. ಈ ಬಾರಿ ಜಂಬೂ ಸವಾರಿ ಯಲ್ಲಿ 14 ಆನೆಗಳು ಪಾಲ್ಗೊಳ್ಳಲಿದ್ದು, ಜಂಬೂ ಪಡೆ ನಾಯಕ ಅರ್ಜುನ ಬಳ್ಳೆ ಶಿಬಿರ ದಿಂದ ಬರಲಿದೆ. ಮತ್ತಿಗೋಡು, ದುಬಾರೆ, ಕೆ.ಗುಡಿ ಶಿಬಿರದಿಂದ ಇತರೆ ಆನೆಗಳನ್ನು ಕರೆತರಲಾಗುತ್ತಿದೆ. ಒಟ್ಟು 9 ಗಂಡಾನೆ, 5 ಹೆಣ್ಣಾನೆಗಳಿರುತ್ತವೆ ಎಂದು ಡಿಸಿ ತಿಳಿಸಿದ್ದಾರೆ.