ಮಡಿಕೇರಿ: ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದಲ್ಲಿ ಜ.11 ರಿಂದ ಮೂರು ದಿನಗಳ ಕಾಲ ‘ಕೊಡಗು ಪ್ರವಾಸಿ ಉತ್ಸವ’ವು ನಗರದ ರಾಜಾಸೀಟು ಮತ್ತು ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಜ.11 ರಂದು ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಬೋಜೇಗೌಡ, ಆಯನೂರು ಮಂಜುನಾಥ್, ಜಿ.ಪಂ.ಉಪಾಧ್ಯಕ್ಷ ರಾದ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.
ಜ.11 ರಂದು ಗಾಂಧಿ ಮೈದಾನದಲ್ಲಿ ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30 ಗಂಟೆಯಿಂದ 6.30 ರವರೆಗೆ ಕೊಡಗು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 6.30 ರಿಂದ 7.30 ರವರೆಗೆ ಎಂ.ಡಿ.ಪಲ್ಲವಿ ಮತ್ತು ತಂಡದವರಿಂದ ಜುಗಲ್ ಬಂದಿ, ಸಂಜೆ 7.30 ರಿಂದ 10 ಗಂಟೆಯವರೆಗೆ ಸರಿಗಮಪ ಲಿಟಲ್ ಚಾಂಪ್ಸ್ ಮಕ್ಕಳಾದ ಅಭಿನವ್, ಸುಪ್ರಿಯಾ ಜೋಷಿ, ಆಧ್ಯ, ಜ್ಞಾನೇಶ್, ಕೀರ್ತನಾ, ಪುಟ್ಟರಾಜು ಹೂಗಾರ್ ಇವರಿಂದ ಸಂಗೀತ ಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮಕ್ಕಳಿಂದ ನೃತ್ಯ ವೈಭವ ನಡೆಯಲಿದೆ.