`ಮೈಸೂರು ಸಾಹಿತ್ಯ ಸಂಭ್ರಮ’ ಮೂರನೇ ಆವೃತ್ತಿಗೆ ಚಾಲನೆ
ಮೈಸೂರು

`ಮೈಸೂರು ಸಾಹಿತ್ಯ ಸಂಭ್ರಮ’ ಮೂರನೇ ಆವೃತ್ತಿಗೆ ಚಾಲನೆ

July 14, 2019

ಮೈಸೂರು,ಜು.13-ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್-2015 ಸಹಯೋಗ ದೊಂದಿಗೆ ಆಯೋಜಿಸಿರುವ ಎರಡು ದಿನಗಳ `ಮೈಸೂರು ಸಾಹಿತ್ಯ ಸಂಭ್ರಮ’ ಮೂರನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಿತು.

ಮೈಸೂರಿನ ಸದರನ್ ಸ್ಟಾರ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯ ಕ್ರಮವನ್ನು ಉದ್ಘಾಟಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ದೂರದೃಷ್ಟಿತ್ವದ ಜೊತೆಗೆ ಕಠಿಣ ಪರಿಶ್ರಮ ಹಾಗೂ ಒಗ್ಗಟ್ಟಿರುವ ಯಾವುದೇ ಸಂಸ್ಥೆ ಅಥವಾ ಸಂಘಟನೆ ಯಶಸ್ಸು ಕಾಣುತ್ತದೆ. ಹೀಗೆಯೇ ಮೈಸೂರು ಲಿಟರರಿ ಫೆÇೀರಂ ಚಾರಿಟಬಲ್ ಟ್ರಸ್ಟ್ ಕಾರ್ಯ ನಿರ್ವಹಿ ಸುತ್ತಾ ಬಂದಿದೆ. ಕೆಲ ವರ್ಷಗಳಿಂದ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ಆಯೋಜಿಸುವ ಮೂಲಕ ಮಾದರಿ ಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದೊಂದಿಗೆ ಟ್ರಸ್ಟ್ ವತಿಯಿಂದ ಆರಂಭಿಸಿರುವ ‘ಎನೇಬಲ್ ಹರ್’ ಮಹ ತ್ವದ ಯೋಜನೆಗೆ ಇದೇ ವೇಳೆ ಅವರು ಚಾಲನೆ ನೀಡಿ, ಶುಭ ಕೋರಿದರು.

‘ದಿ ಬುಕ್ ಲೀಫ್’ ಕೈಪಿಡಿ ಬಿಡುಗಡೆ ಗೊಳಿಸಿ ಮಾತನಾಡಿದ ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಸಮಾಜದಲ್ಲಿ ಎಡ-ಬಲ ಎಂಬ ಭಿನ್ನತೆ ಸೃಷ್ಟಿಯಾಗಿದೆ. ಈ ರೀತಿ ಎಡ-ಬಲ ಎಂಬ ವೈರುಧ್ಯವನ್ನು ದೂರ ವಿಟ್ಟು ಮಧ್ಯಮ ಮಾರ್ಗದ ಧೋರಣೆ ಯೊಂದಿಗೆ ಬದುಕು ನಡೆಸುವುದು ಒಳ್ಳೆ ಯದು. ನಾವು ನಮ್ಮ ಧರ್ಮ, ಆಚಾರ, ವಿಚಾರಗಳೊಂದಿಗೆ ಪರ ಧರ್ಮ, ಪರ ವಿಚಾರಗಳನ್ನು ಸ್ವೀಕರಿಸಿ, ಅವುಗಳನ್ನು ನಮ್ಮದಾಗಿಸಿಕೊಂಡು ಬಂದಿದ್ದೇವೆ. ನಮ್ಮ ಸಂಸ್ಕೃತಿಯೇ ಈ ಸಂಸ್ಕಾರ ಕಲಿಸಿದೆ. ಸಾವಿ ರಾರು ವರ್ಷಗಳ ಪರಂಪರೆ ಗಮನಿಸಿದರೆ ಕನ್ನಡಿಗರ ಹೃದಯ ವೈಶಾಲ್ಯತೆ ತಿಳಿಯುತ್ತದೆ. ಹಾಗಾಗಿ ಎಲ್ಲಾದರೂ ನಮ್ಮ ಭಾಷೆ, ಜನ, ಸಂಸ್ಕೃತಿಯ ಬಗ್ಗೆ ಹೇಳಿಕೊಳ್ಳುವಾಗ ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.

ಸಾಹಿತಿಗಳಲ್ಲಿ ಬುದ್ಧಿವಂತಿಕೆಗಿಂತ ಮುಖ್ಯವಾಗಿ ಹೃದಯವಂತಿಕೆ ಇರಬೇಕು. ಬುದ್ಧಿ ವಿವಿಧ ರೀತಿಯ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಅನೇಕ ಕಾರಣಗಳಿಗಾಗಿ ಕಸರತ್ತು ನಡೆಸುತ್ತದೆ. ಮನಸ್ಸಿನಲ್ಲಿ ತಲ್ಲಣ ವನ್ನೂ ಸೃಷ್ಟಿಸುತ್ತದೆ. ಆದರೆ ಹೃದಯ ಮಾತ್ರ ಮನುಷ್ಯನನ್ನು ಮನುಷ್ಯನ ಹಾಗೆ ಕಾಣುತ್ತದೆ. `ಅವಿದ್ಯಾವಂತರು ಕತ್ತಲು ಪ್ರವೇಶಿಸಿದರೆ, ವಿದ್ಯಾವಂತರು ಕಗ್ಗತ್ತಲೆಯನ್ನೇ ಪ್ರವೇಶಿ ಸುತ್ತಾರೆ’ ಎಂಬ ವಾಕ್ಯ ಉಪನಿಷತ್ತಿನಲ್ಲಿದೆ. ಇದು ಜವಾಬ್ದಾರಿ ಮೀರಿದ ಸಾಹಿತಿಗಳ ಸ್ಥಿತಿ, ಇದರಿಂದ ಸಮಾಜದ ಮೇಲಾಗುವ ಪರಿಣಾಮವನ್ನು ಸೂಚ್ಯವಾಗಿ ತಿಳಿಸುತ್ತದೆ ಎಂದು ತಿಳಿಸಿದ ಟಿ.ಎಸ್.ನಾಗಾಭರಣ, ಸಾಹಿತ್ಯ ಕ್ಷೇತ್ರ ಹಾಗೂ ಸಾಹಿತಿಗಳ ವಲಯ ದಲ್ಲಿ ಇತ್ತೀಚಿನ ಕ್ಷೋಭೆ ಗಮನಿಸಿದರೆ ಇಂತಹ ಸಾಹಿತ್ಯ ಸಂಭ್ರಮಗಳ ಮೇಲೆ ಮಹತ್ವದ ಜವಾಬ್ದಾರಿ ಇದೆ. ಸಾಹಿತ್ಯ ಸಂಭ್ರಮದ ಇರುವಿಕೆ ತಿಳಿಸುವುದರ ಜೊತೆಗೆ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮುಂದುವರೆಸಬೇಕು. ಸದ್ಯ ಮೈಸೂರಿನಲ್ಲಿ ಅಚ್ಚುಕಟ್ಟಾಗಿ ನಿರಂತರವಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ಟ್ರಸ್ಟ್‍ಗೆ ಅಭಿನಂದನೆ ತಿಳಿಸುತ್ತೇನೆ ಎಂದ ಅವರು, ಸಾಹಿತ್ಯ ಸಂಭ್ರಮದಲ್ಲಿ ಗುರುಗಳಾದ ಗಿರೀಶ್ ಕಾರ್ನಾಡ್ ಅವರನ್ನು ಸ್ಮರಿಸಿಕೊ ಳ್ಳುತ್ತೇನೆ. ನನ್ನ 30 ಸಿನಿಮಾಗಳನ್ನು ಅವರಿಗೆ ಸಮರ್ಪಿಸುತ್ತೇನೆಂದು ನುಡಿದರು.

ಪುರಾಣಶಾಸ್ತ್ರಜ್ಞ ಹಾಗೂ ಬರಹಗಾರ ದೇವದತ್ ಪಟ್ನಾಯಕ್ ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ `ರಾಮಾಯಣ ವರ್ಸಸ್ ಮಹಾಭಾರತ ಕುರಿತು ಮಾತ ನಾಡಿ, ಭಾರತೀಯ ಗ್ರಂಥಗಳನ್ನು ಸರಿ-ತಪ್ಪು, ಒಳ್ಳೆಯದು-ಕೆಟ್ಟದು ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಅರ್ಥೈಸಿ ಕೊಳ್ಳುವ ಬದಲು, ಧರ್ಮ, ಕರ್ಮ ಆಧಾರದ ಮೇಲೆ ಸರಳ ಹಾಗೂ ಸೂಕ್ಷ್ಮ ವಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ರಾಮಾಯಣ ಮಹಾಭಾರತವೂ ಸಹ ಧರ್ಮ, ಕರ್ಮ ಆಧಾರಿತ ಅಂಶಗಳನ್ನೆ ಒಳಗೊಂಡಿದೆ. ಅಲ್ಲದೆ ಈ ಎರಡೂ ಗ್ರಂಥಗಳಲ್ಲಿನ ವಿಚಾರಗಳಲ್ಲಿ ಸಾಮ್ಯತೆಯೂ ಕಂಡುಬರುತ್ತವೆ. ಗ್ರಂಥ ಕರ್ತೃಗಳು ಮಹಾ ಕಾವ್ಯಗಳ ಒಂದು ಭಾಗವಾಗಿ ಕಾಣಿಸು ತ್ತಾರೆ. ಹಾಗಾಗಿ ಮಹಾಕಾವ್ಯಗಳು ಇತಿಹಾಸ ವಾಗಿವೆ. ಪುರಾಣಗಳಂತೆ ಒಬ್ಬರಿಂದ ಒಬ್ಬರಿಗೆ ಪಸರಿಸಿದ್ದಲ್ಲ ಎಂದು ಅಭಿಪ್ರಾಯಿಸಿದರು.

ಸಂವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಕೇಳಿದ ಪುರಾಣ ಗಳಲ್ಲಿ ದೇವತೆಗಳ ವಿಚಾರದಲ್ಲಿ ಶ್ವೇತ ವರ್ಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎನ್ನಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಟ್ನಾ ಯಕ್, ದೇವತೆಗಳಲ್ಲಿಯೂ ಕಪ್ಪು ವರ್ಣದವರಿದ್ದಾರೆ. ಆದರೆ ನಾವು ಬದಲಿಸಿಕೊಂಡಿದ್ದೇವೆ. ಉದಾಹರಣೆಗೆ ಕಪ್ಪು ವರ್ಣದವನಾದರೂ ಕೃಷ್ಣನಿಗೆ ನೀಲಿ ಬಣ್ಣ ನೀಡಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಮೈಸೂರು ಲಿಟರರಿ ಫೋರಂ ಚಾರಿ ಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್-2015 ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಉಪಾಧ್ಯಕ್ಷರಾದ ಸಾಮ್ ಚೆರಿಯನ್ ಮತ್ತಿತರರು ಉಪಸ್ಥಿತರಿದ್ದರು.