ಮಾಧ್ಯಮಗಳ ಹತ್ತಿಕ್ಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ
ಮೈಸೂರು

ಮಾಧ್ಯಮಗಳ ಹತ್ತಿಕ್ಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ

July 14, 2019

ಮೈಸೂರು, ಜು.13(ವೈಡಿಎಸ್)-ಮಾಧ್ಯಮ ಗಳನ್ನು ಆಳುವ ವರ್ಗದ ಪ್ರಚಾರಕರನ್ನಾಗಿ ಮಾಡುವ ಅಥವಾ ಬಾಯಿ ಮುಚ್ಚಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಶಾಂತಕುಮಾರ್ ಮತ್ತು ಎನ್‍ಡಿಟಿವಿ ವ್ಯವಸ್ಥಾಪಕ ಸಂಪಾದಕ ಶ್ರೀನಿವಾಸನ್ ಜೈನ್ ಅಭಿಪ್ರಾಯಪಟ್ಟರು.

ಖಾಸಗಿ ಹೋಟೆಲ್ ಸದರನ್ ಸ್ಟಾರ್‍ನ ಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ `ಇಸ್ ದಿ ಫೋರ್ತ್ ಪಿಲ್ಲರ್ ಆಫ್ ಡೆಮಾಕ್ರಸಿ ಸ್ಟಿಲ್ ಸ್ಟ್ರಾಂಗ್’? ವಿಷಯ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಇತ್ತು. ಆದರೆ, ಇಂದು ಆ ಪ್ರಮಾಣ ಹೆಚ್ಚಾಗಿದೆ. ಮಾಧ್ಯಮಗಳನ್ನು ವ್ಯವಸ್ಥಿತ ವಾಗಿ, ಯಶಸ್ವಿಯಾಗಿ ನಿರ್ವಹಣೆ ಮಾಡುವ ತಂತ್ರಗಾರಿಕೆ ಹಿಂದಿಗಿಂತಲೂ ಹೆಚ್ಚಾಗಿದೆ ಎಂದರು.

`ಸ್ಟಾರ್ ಆಫ್ ಮೈಸೂರ್’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ, ಮಾಧ್ಯಮಗಳ ಕಾರ್ಯವೈಖರಿ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಎನ್‍ಡಿಟಿವಿ ವ್ಯವಸ್ಥಾಪಕ ಸಂಪಾದಕ ಶ್ರೀನಿವಾಸನ್ ಜೈನ್ ಮಾತನಾಡಿ, ಚಮಚಾಗಿರಿ ವಾತಾವರಣ ಮಾಧ್ಯಮ ಕ್ಷೇತ್ರದಲ್ಲಿ ನೆಲೆಸಿದೆ. ಹಿಂದಿಗಿಂತಲೂ ಇಂದು ಮಾಧ್ಯಮದ ಪರಿಸ್ಥಿತಿ ಹದಗೆಟ್ಟಿದೆ. ಕಾರಣ, ದೇಶದಲ್ಲಿ 400 ಚಾನಲ್‍ಗಳು, 1 ಲಕ್ಷ ನ್ಯೂಸ್ ಪೇಪರ್‍ಗಳಿದ್ದು, ನನ್ನ 25 ವರ್ಷಗಳ ಪತ್ರಿಕೋದ್ಯಮದಲ್ಲಿ ಇಂಥ ಪರಿಸ್ಥಿತಿಯನ್ನು ನೋಡಿರಲಿಲ್ಲ ಎಂದು ಅವರು ಹೇಳಿದರು.

ಪತ್ರಕರ್ತ ಶಾಂತಕುಮಾರ್ ಮಾತನಾಡಿ, 4ನೇ ಸ್ತಂಭ ಮಾಧ್ಯಮ ದುರ್ಬಲಗೊಂಡಿರುವುದು ನಿಜ. ಕೆಲವು ಹಿರಿಯ ಪತ್ರಕರ್ತರು ಸ್ತಂಭ ಮುರಿದೇ ಹೋಗಿದೆ ಎಂದು ಹೇಳುತ್ತಾರೆ. ಉತ್ತಮ ಸ್ಥಿತಿಯಲ್ಲಿದೆ ಎಂದು ಯಾರೂ ಹೇಳು ವುದಿಲ್ಲ. ಎಲ್ಲದಕ್ಕೂ ಸರ್ಕಾರವನ್ನು ದೂರುವುದು ಸರಿಯಲ್ಲ. ಹಿಂದಿನ ಸರ್ಕಾರಗಳಿಗೆ ಹೋಲಿಸಿ ದರೆ ಮಾಧ್ಯಮಗಳನ್ನು ಒಂದೆಡೆ ಸೆಳೆಯುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದರು.

ಕಳೆದ ಕೆಲವು ದಶಕಗಳಲ್ಲಿ ಮುದ್ರಣ ಮಾಧ್ಯಮದ ಆರ್ಥಿಕ ಸ್ವರೂಪ ಬದಲಾಗಿದೆ. ಜಾಹೀರಾತು ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ರಿಕೆಗಳ ದÀರ ಕಡಿಮೆ ಇದೆ. ಶೇ.80ರಷ್ಟು ಆದಾಯ ಜಾಹೀರಾತಿನಿಂದಲೇ ಬರುತ್ತದೆ. ಸರ್ಕಾರಗಳೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಜಾಹೀರಾತು ನೀಡುತ್ತಿವೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳು ಅದರಲ್ಲೂ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಧ್ಯಮ ಗಳನ್ನು ಹತ್ತಿಕ್ಕಲು ಪ್ರಯತ್ನ ನಡೆಸಿತಲ್ಲವೇ? ಎಂಬ `ಸ್ಟಾರ್ ಆಫ್ ಮೈಸೂರ್’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅವರ ಪ್ರಶ್ನೆಗೆ ಶ್ರೀನಿವಾಸನ್ ಜೈನ್ ಪ್ರತಿಕ್ರಿಯಿಸಿ, ಈಗಿರುವ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು. ಕಾಂಗ್ರೆಸ್ ಈ ಹಿಂದೆ ಮಾಧ್ಯಮಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿತ್ತು ನಿಜ. ಆದರೆ, ಇಂದಿನಷ್ಟು ಒತ್ತಡ, ಬೆದರಿಕೆ ಇರಲಿಲ್ಲ. ಈಗ ಮತ್ತೊಂದು ಸ್ವರೂಪದ ತುರ್ತು ಪರಿಸ್ಥಿತಿ ನೆಲೆಸಿದೆ ಎಂದು ಹೇಳಿದರು.

ಮಾಧ್ಯಮದಲ್ಲಿನ ಭ್ರಷ್ಟಾಚಾರ ಕುರಿತ ವಿಕ್ರಂ ಮುತ್ತಣ್ಣರವರ ಪ್ರಶ್ನೆಗೆ ಶ್ರೀನಿವಾಸನ್ ಪ್ರತಿಕ್ರಿಯಿಸಿ, ಹಣ್ಣಿನ ಬುಟ್ಟಿಯಲ್ಲಿ ಕೊಳೆತ ಹಣ್ಣುಗಳೂ ಇರುತ್ತವೆ. ಹಾಗಾಗಿ ಎಲ್ಲರನ್ನು ಒಂದೇ ರೀತಿ ಅಳೆಯಲು ಸಾಧ್ಯವಿಲ್ಲ ಎಂದರು.

ಪತ್ರಕರ್ತ ಶಾಂತಕುಮಾರ್ ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳಿಗೆ ಬರುತ್ತಿದ್ದ ಜಾಹೀರಾತು ಆದಾಯ ಡಿಜಿಟಲ್ ಮಾಧ್ಯಮಕ್ಕೆ ಹೋಗುತ್ತಿದೆ. ಆದರೆ, ಡಿಜಿಟಲ್ ಮಾಧ್ಯಮ ದಿಂದ ಮಾಹಿತಿ ನೀಡಲು ಯಾವುದೇ ಹಣ ನೀಡಬೇಕಿಲ್ಲ. ಹೀಗಾಗಿ ಜಾಹೀರಾತು ಆದಾಯ ಪಡೆಯಲು ನಮ್ಮ ಮುಂದೆ ದೊಡ್ಡ ಸವಾಲಿದೆ. ಉತ್ತಮ ಪತ್ರಿಕೋದ್ಯಮ ದುಬಾರಿಯಾಗಿದೆ ಎಂದು ಹೇಳಿದರು. ನಂತರ ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಮತ್ತೊಂದು ಗೋಷ್ಠಿಯಲ್ಲಿ ಪುಸ್ತಕ ಕುರಿತು ಚರ್ಚೆ: ಲೇಖಕ, 29 ವರ್ಷದ ಮನುಪಿಲ್ಲಾಯ್ ಬರೆದಿರುವ `ದಿ ಕರ್ಟಸನ್, ದಿ ಮಹಾತ್ಮ ಅಂಡ್ ದಿ ಇಟಾಲಿಯನ್ ಬ್ರಾಹ್ಮಣ ಟಾಲ್ಸ್ ಫ್ರಂ ಇಂಡಿ ಯನ್ ಹಿಸ್ಟರಿ’ ಪುಸ್ತಕ ಕುರಿತು ಚರ್ಚಿಸಲಾಯಿತು.

ಈ ವೇಳೆ ಪುಸ್ತಕದಲ್ಲಿ ಅಮ್ಮಾಚಿ ಪದ ಬಳಕೆ ಕುರಿತ ಪ್ರೀತಿ ಮರೋಲಿ ಅವರ ಪ್ರಶ್ನೆಗೆ ಲೇಖಕ ಮನು ಪಿಲ್ಲಾಯ್ ಪ್ರತಿಕ್ರಿಯಿಸಿ, ಕೇರಳದಲ್ಲಿ ಮಹಿಳೆಯರು ಗರ್ಭಿಣಿಯಾದರೆ, ಗರ್ಭಿಣಿಯಾ ದರೆಂದು ಹೇಳುತ್ತಿರಲಿಲ್ಲ. ಬದಲಾಗಿ ಹೊಟ್ಟೆ ಯಲ್ಲಿ ಏನೋ ಇದೆ ಎಂದು ಹೇಳುತ್ತಿದ್ದರಂತೆ. ಜನ್ಮ ನೀಡಿದಾಗ ಹೊಟ್ಟೆ ಖಾಲಿಯಾಯಿತು ಎನ್ನುತ್ತಿದ್ದರು. ಕೇರಳದ ರಾಜ-ರಾಣಿಯ ಪದ್ಧತಿ ಹೀಗಿತ್ತು. ವಿಜಯನಗರ ಆಳ್ವಿಕೆ ಕುರಿತು ವಿವರಿಸಿದರು.

ಕಾಳಿದಾಸನ ಶಾಕುಂತಲೆಗೂ ನಿಜವಾದ ಶಾಕುಂತಲೆಗೂ ತುಂಬಾ ವ್ಯತ್ಯಾಸವಿದೆ. ಇತಿಹಾಸ ಬರೆಯುವವರು ನಮ್ಮದೇ ಸರಿ ಎಂದು ಹೇಳಲಾಗುವುದಿಲ್ಲ. ಲೇಖಕರು ಬರೆಯುವ ವೇಳೆ ಅಂದಿನ ಸನ್ನಿವೇಶವನ್ನು ಗಮನಿಸಿ ಬರೆಯುತ್ತಾರೆ ಎಂದರು.