ಆರಂಭವಾಗಿದೆ ಮಳೆ: ರಸ್ತೆಯಲ್ಲೂ ನೀರು, ಸೊಳ್ಳೆಗಳ ಹಾವಳಿ
ಮೈಸೂರು

ಆರಂಭವಾಗಿದೆ ಮಳೆ: ರಸ್ತೆಯಲ್ಲೂ ನೀರು, ಸೊಳ್ಳೆಗಳ ಹಾವಳಿ

May 15, 2019

ಮೈಸೂರು: ಮಳೆ ಗಾಲ ಬಂತೆಂದರೆ ಇಲ್ಲಿನ ನಿವಾಸಿಗಳಿಗೆ ನಿತ್ಯ ಜಾಗರಣೆ… ಮನೆಯೊಳಗೆ ಹಾಗೂ ರಸ್ತೆ ಇಕ್ಕೆಲಗಳಲ್ಲೆಲ್ಲಾ ಎಲ್ಲಿ ನೋಡಿದರೂ ಬರೀ ನಿಂತ ನೀರು… ಸೊಳ್ಳೆಗಳ ಹಾವಳಿ ಯೊಂದಿಗೆ ದುರ್ನಾತ…!

ಹೌದು! ಮೈಸೂರಿನ 54ನೇ ವಾರ್ಡ್ ವ್ಯಾಪ್ತಿಯ ಶಾಪಗ್ರಸ್ತ ಕನಕಗಿರಿಯಲ್ಲಿ ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿ ಗಳು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ. ನಿನ್ನೆ ಸುರಿದ ಕೇವಲ ಅರ್ಧಗಂಟೆಯ ಮಳೆಗೆ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ನೀರೆಲ್ಲಾ ರಸ್ತೆಯಲ್ಲಿ ಹರಿದು ಕೆರೆಯಂತಾಗಿರುವುದೇ ನಿದರ್ಶನವಾಗಿದೆ.
ನಗರದ ತಗ್ಗು ಪ್ರದೇಶದಲ್ಲಿರುವ ಕನಕಗಿರಿಯಲ್ಲಿ ನಗರಪಾಲಿಕೆ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತೆ ಯಿಂದ ಈ ವರ್ಷವೂ ಮಳೆಯಿಂದಾಗುವ ಸಮಸ್ಯೆಗಳು ಎದುರಾಗುತ್ತಿವೆ. ಗುಂಡಿ ಬಿದ್ದ ರಸ್ತೆಗಳು, ಸಂಪರ್ಕ ಕಳೆದುಕೊಂಡಿ ರುವ ಚರಂಡಿಗಳು, ತುಂಬಿ ತುಳುಕುತ್ತಿರುವ ಕಸದ ರಾಸಿಯಿಂದಾಗಿ ಹೆಮ್ಮೆಯ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿನ ಕುಗ್ರಾಮವಾಗಿ ಕನಕಗಿರಿ ಬಿಂಬಿತವಾಗಿದೆ.

ಕಳೆದ ಒಂದು ತಿಂಗಳಿಂದ ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕನಕಗಿರಿ ಯಲ್ಲಿನ ಹಲವಾರು ರಸ್ತೆಗಳಲ್ಲಿ ನೀರು ನಿಂತಿದ್ದು, ಓಡಾಡಲು ಸಾಧ್ಯವಾಗದೆ ಪರಿ ತಪಿಸುವಂತಾಗಿದೆ. ಅಲ್ಲಲ್ಲಿ ಹೊಸ ಮನೆಗಳನ್ನು ಕಟ್ಟುತ್ತಿರುವುದರಿಂದ ವಾಹನ ಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ಗುಂಡಿ ಬಿದ್ದ ರಸ್ತೆಗಳು: ನಗರ ಪಾಲಿಕೆ ಮಾಡುವ ಯಡವಟ್ಟುಗಳಿಗೆ ಇಲ್ಲಿನ ಕಾಂಕ್ರಿಟ್ ರಸ್ತೆಗಳು ಗುಂಡಿ ಬಿದ್ದಿವೆ. ಕಿರಿ ದಾಗಿರುವ ಹಲವಾರು ರಸ್ತೆಗಳಿಗೆ ಈಗಾ ಗಲೇ ಕಾಂಕ್ರಿಟ್ ಮಾಡಲಾಗಿತ್ತು. ಆದರೆ, ನೀರಿನ ಪೂರೈಕೆ ಉದ್ದೇಶದಿಂದ ಚೆನ್ನಾಗಿದ್ದ ರಸ್ತೆಯನ್ನು ಅಗೆಸಿ ಪೈಪ್‍ಗಳನ್ನು ಅಳವಡಿ ಸಲಾಗಿದೆ. ಆದರೆ, ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ನೂರಾರು ಕೋಟಿ ರೂ. ಖರ್ಚುಮಾಡಿ ಮಾಡಿದ ಕಾಂಕ್ರಿಟ್ ರಸ್ತೆಗಳು ಗುಂಡಿಬಿದ್ದಿವೆ.

ಸಂಪರ್ಕವಿಲ್ಲದ ಚರಂಡಿಗಳು: ಕನಕಗಿರಿಯಲ್ಲಿನ ಕೆಲವು ರಸ್ತೆಗಳಿಗೆ ಹೊಸ ದಾಗಿ ಚರಂಡಿ ವ್ಯವಸ್ಥೆಯನ್ನು ಮಾಡಲಾ ಗಿದ್ದರೂ ಸರಿಯಾದ ರೀತಿಯಲ್ಲಿ ಸಂಪರ್ಕವಿಲ್ಲದೆ ಮಳೆಯ ನೀರು ರಸ್ತೆಯ ಲ್ಲಿಯೇ ನಿಲ್ಲುವಂತಾಗಿದೆ. ಚರಂಡಿ ಇಲ್ಲದೆ ಇರುವಲ್ಲಿ ರಸ್ತೆಯೇ ಚರಂಡಿಯಾಗಿದ್ದು, ಸೊಳ್ಳೆಗಳ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಅಲ್ಲದೆ ರಾಜ ಕಾಲುವೆಯು ಒತ್ತುವರಿಯಾಗಿದ್ದು, ಚರಂಡಿ ನೀರು ಹರಿಯಲು ಸ್ಥಳವಿಲ್ಲದಂತಾಗಿದೆ.

ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಮೈಸೂ ರಿನ ತಗ್ಗು ಪ್ರದೇಶಗಳಲ್ಲಿ ಕನಕಗಿರಿಯು ಒಂದಾಗಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬುದರ ಅರಿವಿದ್ದರೂ ಸಮರ್ಪಕವಾದ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಪ್ರಮುಖ ಕಾರಣವಾಗಿದೆ. ಮಳೆಯಿಂದಾಗುವ ತೊಂದರೆಗಳನ್ನು ನಿರ್ವಹಿಸಲು ನಗರ ಪಾಲಿಕೆ ‘ಕ್ಷೇತ್ರವಾರು ಜಾಗೃತಿದಳ(ಟಾಸ್ಕ್ ಫೋರ್ಸ್) ಎಂದು 9 ತಂಡಗಳನ್ನು ರಚನೆ ಮಾಡಿದೆ ವಿನಃ ಸಮಸ್ಯೆಗಳು ಎದುರಾಗ ದಂತೆ ನಿರ್ವಹಿಸಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ.

ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು: ನಿತ್ಯ ಸಮಸ್ಯೆಗಳ ತಾಣವಾಗಿರುವ ಕನಕಗಿರಿಗೆ ಜನಪ್ರತಿನಿಧಿಗಳು ತಿರುಗಿ ನೋಡುವುದಿಲ್ಲ. ಏನಾದರೂ ಸಮಸ್ಯೆ ಹೇಳಿದರೆ ಸಬೂಬು ಹೇಳಿಕೊಂಡು ತಿರುಗಾಡುತ್ತಾರೆ. ಕಳೆದ ವರ್ಷ ಸುರಿದ ಜೋರು ಮಳೆಯಿಂದ ಹಲವಾರು ಮನೆಗಳಿಗೆ ನೀರು ನುಗ್ಗಿತ್ತು. ಶಾಸಕರು ಬಂದು ನೋಡಿಕೊಂಡು ಹೋದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Translate »