ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 300 ಕೋಟಿ ರೂ.ಗೆ ಕೋರಿಕೆ
ಮೈಸೂರು

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 300 ಕೋಟಿ ರೂ.ಗೆ ಕೋರಿಕೆ

February 27, 2020

ಮೈಸೂರು,ಫೆ.26(ಪಿಎಂ)- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ 300 ಕೋಟಿ ರೂ. ಮೀಸಲಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು.

ಮೈಸೂರಿನ ಕೆಆರ್ ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ನಿವೇಶನ ದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಸಂಘದ ವತಿಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅತಿಥಿಯಾಗಿದ್ದ ಅವರು, ಈಗಾಗಲೇ ಮಂಡಳಿಯ ಕಚೇರಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ 25 ಕೋಟಿ ರೂ. ನೀಡಿದೆ ಎಂದು ಹೇಳಿದರು.

ರಾಜ್ಯದ 21 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದವರೇ ನಿರ್ಣಾಯಕ. ಆದರೆ ಸಮುದಾಯ ಸಂಘಟಿತವಾಗಲು ಗಮನ ನೀಡದೇ ಇರುವುದರಿಂದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಈಗ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿರುವುದರಿಂದ ಅನೇಕ ಯೋಜನೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಜನಗಣತಿ ದಾಖಲಾತಿ ಪ್ರಕಾರ 17 ಲಕ್ಷ ಬ್ರಾಹ್ಮಣರು ರಾಜ್ಯದಲ್ಲಿದ್ದೇವೆ. ಆದರೆ ನಿಜವಾಗಿ ಇರುವುದು 48 ಲಕ್ಷ. ಜನಗಣತಿ ಸಂದರ್ಭದಲ್ಲಿ ಸಮುದಾಯದವರು ಉಪ ಪಂಗಡದ ಹೆಸರು ಹೇಳಿದ ಹಿನ್ನೆಲೆಯಲ್ಲಿ ಈ ರೀತಿ ತಪ್ಪಾಗಿದೆ. ಹೀಗಾಗಿ ಜನಗಣತಿ ವೇಳೆ ಉಪ ಪಂಗಡದ ಹೆಸರು ಹೇಳುವ ಬದಲು `ಬ್ರಾಹ್ಮಣ’ ಎಂದೇ ಬರೆಸಬೇಕು. ಇಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲ ಯಕ್ಕೂ ಮಂಡಳಿಯಿಂದ ಆಗುವ ಎಲ್ಲಾ ಸಹಾಯ ಮಾಡಲಾಗುವುದು. ಜೊತೆಗೆ ಅನೇಕರಿಂದ ಸಹಾಯಧನ ಕೊಡಿಸಲಾ ಗುವುದು. ಸಂಘದ ಹೆಸರಿನಲ್ಲಿ `ಬ್ರಾಹ್ಮಣ’ ಎಂದು ಸೇರ್ಪಡೆಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ವಿಪ್ರ ಮುಖಂಡ ಹೆಚ್.ವಿ. ರಾಜೀವ್ ಮಾತನಾಡಿ, ನಮ್ಮ ಸಮುದಾಯ ದಲ್ಲಿ ಹಲವರು ಉದ್ಯೋಗದಾತರು, ಅನು ಕೂಲಸ್ಥರಿದ್ದು, ವಿದ್ಯಾರ್ಥಿನಿಲಯ ನಿರ್ಮಾಣ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸ ಬೇಕು ಎಂದು ಮನವಿ ಮಾಡಿದರು.

ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿದ್ಯಾರ್ಥಿನಿಲಯದ ಭೂಮಿಪೂಜೆ ನೆರವೇರಿಸಿದರು. ಸಂಘದ ಅಧ್ಯಕ್ಷ ಕೆ.ಆರ್.ಸತ್ಯ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಎಂ.ಸಿ.ರಮೇಶ್, ಮುಡಾ ಕಿರಿಯ ಕಾರ್ಯಪಾಲಕ ಅಭಿಯಂ ತರ ಎಸ್.ಕೆ.ಭಾಸ್ಕರ್ ಇತರರು ಹಾಜರಿದ್ದರು. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ 1,120 ಚದರ ಮೀ. ವಿಸ್ತೀರ್ಣದಲ್ಲಿ 40 ಕೊಠಡಿಗಳ ವಿದ್ಯಾರ್ಥಿನಿಲಯ ನಿರ್ಮಿಸಲಾಗುತ್ತಿದೆ.

Translate »