ರಾಜ್ಯ ಬಜೆಟ್‍ನಿಂದ ರೈತರಿಗೆ ಏನೇನೂ ಉಪಯೋಗ ಇಲ್ಲ
ಚಾಮರಾಜನಗರ

ರಾಜ್ಯ ಬಜೆಟ್‍ನಿಂದ ರೈತರಿಗೆ ಏನೇನೂ ಉಪಯೋಗ ಇಲ್ಲ

February 9, 2019

ಚಾಮರಾಜನಗರ: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿ ಸಿದ ರಾಜ್ಯ ಬಜೆಟ್ ಚುನಾವಣಾ ದೃಷ್ಟಿಯಿಂದ ಕೂಡಿದೆ. ರೈತರ ಓಟು ಪಡೆಯಲು ರೈತರ ಬಜೆಟ್ ಎಂದು ಬಿಂಬಿಸುವ ಸಲುವಾಗಿ ಹಲವಾರು ಬಾರಿ ರೈತರ ಹೆಸರನ್ನು ಬಳಸಲಾಗಿದೆ. ಈ ಬಜೆಟ್‍ನಿಂದ ರೈತ ಸಮುದಾಯಕ್ಕೆ ಏನೇನೂ ಉಪಯೋಗ ಇಲ್ಲ ಎಂದು ರೈತ ಸಂಘದ ನೂತನ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಗಾತ್ರ ದೊಡ್ಡದು. ಆದರೆ ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ. ಎಷ್ಟೋ ಬಜೆಟ್‍ನಲ್ಲಿ ಯೋಜನೇತರ ವೆಚ್ಚಕ್ಕೆ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಅದೇ ರೀತಿ ಈ ಬಜೆಟ್‍ನಲ್ಲೂ ಸಹ ಪುನರಾವರ್ತನೆ ಆಗಿದೆ ಎಂದರು.

ಫೆ.13, ವೈಚಾರಿಕಾ ಸಮಾವೇಶ: ಫೆ.13 ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 82ನೇ ವರ್ಷದ ನೆನಪಿನ ದಿನ. ಆ ದಿನದಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವೈಚಾರಿಕಾ ಸಮಾವೇಶ ನಡೆಸಲಾ ಗುವುದು. ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರದಿಂದ 5 ಯುವಕರು, 5 ಯುವತಿಯರು ಮತ್ತು ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿ ದ್ದಾರೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಫೆ.18, ಪುಟ್ಟಣ್ಣಯ್ಯ ಪ್ರತಿಮೆ ಅನಾವರಣ: ರೈತ ನಾಯಕರಾಗಿದ್ದ, ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣವು ಅವರ ಹುಟ್ಟೂರು ಪಾಂಡ ವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಫೆ.18ರಂದು ನಡೆಯಲಿದೆ. ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಪ್ರತಿಮೆ ಸ್ಥಾಪಿಸಿದ್ದಾರೆ. ನಂತರ ಅದೇ ದಿನ ಅಲ್ಲಿನ ಕ್ರೀಡಾಂಗಣದಲ್ಲಿ ರೈತರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದರು.
ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಎಂ.ಮಹೇಶ್‍ಪ್ರಭು, ರಾಜ್ಯ ಸಮಿತಿ ಮುಖಂಡ ಎಂ.ಎಸ್. ಅಶ್ವಥ್ ನಾರಾಯಣ ಅರಸ್, ಜಿಲ್ಲಾ ಉಪಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಮುಖಂಡ ಹೊಸಕೋಟೆ ಬಸವರಾಜು ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.

Translate »