ಮೈಸೂರು,ಜು.8(ಆರ್‍ಕೆಬಿ)- ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಹೆಚ್‍ಎಐ) ಕರ್ನಾಟಕ ರಾಜ್ಯ ಘಟಕ ಮತ್ತು ಮೈಸೂರು ಘಟಕದ ವತಿಯಿಂದ ಜು.20ರಿಂದ 2 ದಿನಗಳ ರಾಜ್ಯ ಮಟ್ಟದ ಸಮ್ಮೇಳನವನ್ನು ಮೈಸೂರಿನ ಗೋಕುಲಂನ 2ನೇ ಹಂತದಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್‍ನಲ್ಲಿ ಆಯೋಜಿಸಿದೆ.
ಸಮ್ಮೇಳನದ ಅಂಗವಾಗಿ ವಿಚಾರ ಗೋಷ್ಠಿ, ವಿವಿಧ ಸ್ಪರ್ಧೆಗಳು, ಪರಸ್ಪರ ಪರಿ ಚಯ, ಚಾರಣ ಹಾಗೂ ಸಾಹಸ ಕ್ರೀಡಾ ಚಟುವಟಿಕೆಗಳ ಕುರಿತ ಪ್ರಾತ್ಯಕ್ಷಿಕೆ, ಯುವ ಬಿಡಾರ ಪದ್ಧತಿಯನ್ನು ಜನಪ್ರಿಯಗೊಳಿ ಸುವ ಮತ್ತು ಯುವ ಜನತೆಯನ್ನು ಸಾಹಸ ಕ್ರೀಡೆಗಳತ್ತ ಸೆಳೆಯುವ, ತಿರುಗಾಟದ ಮೂಲಕ ಕಲಿಕೆ, ಚಾರಣ, ಆಟೋಟಗಳ ಮೂಲಕ ದೈಹಿಕ ದೃಢತೆ, ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಮೂಲಕ ಸಮರ್ಥ ರಾಷ್ಟ್ರ ನಿರ್ಮಾಣದ ಕುರಿತು ಚರ್ಚಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇ ಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಗೋಕುಲಂ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಮ್ಮೇಳನ ದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ದಂತೆ 500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 150ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿ ಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಯೂತ್ ಹಾಸ್ಟೆಲ್‍ನಲ್ಲಿ 200 ಮಂದಿ ಉಳಿದು ಕೊಳ್ಳಲು ಅವಕಾಶವಿದೆ. 150 ಮಂದಿಗೆ ಟೆಂಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ ಹಲವು ಶಾಲಾ ಕಾಲೇಜುಗಳಲ್ಲಿಯೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಪ್ರತಿನಿಧಿ ಶುಲ್ಕ ರೂ.200 ಹಾಗೂ 8 ವರ್ಷದೊಳಗಿನ ಮಕ್ಕಳಿಗೆ ರೂ. 100 ನಿಗದಿಪಡಿಸಲಾಗಿದೆ. ಆಸಕ್ತರು ಜು.10 ರೊಳಗೆ ಹೆಚ್.ರವಿಕುಮಾರ್, ಮೊ- 9900152042, ಎಸ್ ವರುಣ್ ಕಾರ್ತಿಕ್, ಮೊ- 9036667999 ಹೆಸರು ನೋಂದಾ ಯಿಸಿಕೊಳ್ಳಬಹುದು ಎಂದು ಹೇಳಿದರು.
ಸಮ್ಮೇಳನದಲ್ಲಿ ವಿಶ್ರಾಂತ ಕುಲಪತಿ ಗಳು, ಹಾಲಿ ಪ್ರೊಫೆಸರ್‍ಗಳು, ಯುವ ಕ್ರೀಡಾ ಸಂಯೋಜಕರು, ಕ್ರೀಡಾ ಪಟು ಗಳು, ತರಬೇತುದಾರರು ಮತ್ತು ವಿದ್ಯಾರ್ಥಿ ಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷರಾದ ಮಾಜಿ ಎಂಎಲ್‍ಸಿ ಡಿ.ಮಾದೇಗೌಡ ಮಾತನಾಡಿ, ಯುವ ಶಕ್ತಿಯ ಸಂಘಟನೆ ಹಾಗೂ ಬಲವರ್ಧ ನೆಗೆ ಶ್ರಮಿಸಿದ ಸಾಧಕರು ಮತ್ತು ಯುವ ಜನ ಕ್ರೀಡೆ ಹಾಗೂ ಸಾಮಾಜಿಕ ಬದ್ಧತೆ ಯೊಂದಿಗೆ ಉತ್ತಮ ಕಾರ್ಯ ನಿರ್ವಹಿ ಸಿದ ಯೂತ್ ಹಾಸ್ಟೆಲ್ ಘಟಕಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿದ್ಯಾರ್ಥಿ ಗಳಿಗೆ ಬಹುಮಾನಗಳನ್ನು ವಿತರಿಸಲಾಗು ವುದು. ಅಲ್ಲದೆ ವಿವಿಧೆಡೆಯಿಂದ ಮೈಸೂ ರಿಗೆ ಪ್ರತಿನಿಧಿಗಳಾಗಿ ಆಗಮಿಸುವ ಯುವ ಮಿತ್ರರಿಗೆ ಮೈಸೂರಿನ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸಾಂಸ್ಕøತಿಕ ಕಾರ್ಯ ಕ್ರಮಗಳು ಇರುತ್ತವೆ ಎಂದು ಹೇಳಿದರು.
ಜು.20ರಂದು ಸಮ್ಮೇಳನದ ಉದ್ಘಾಟನೆ ಮತ್ತು 21ರಂದು ಸಮಾರೋಪ ಸಮಾ ರಂಭಗಳಿಗೆ ಮುಖ್ಯ ಅತಿಥಿಗಳ ಆಯ್ಕೆ ಇನ್ನೆ ರಡು ದಿನಗಳಲ್ಲಿ ಅಂತಿಮಗೊಳಿಸಲಾಗು ವುದು. ವೈಹೆಚ್‍ಎಐ ರಾಷ್ಟ್ರೀಯ ಕಾರ್ಯಾ ಧ್ಯಕ್ಷ ಎಸ್.ವೆಂಕಟನಾರಾಯಣನ್, ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಪುರುಷೋ ತ್ತಮ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್, ವೈಹೆಚ್‍ಎಐ ರಾಜ್ಯ ಘಟಕದ ಕಾರ್ಯಾ ಧ್ಯಕ್ಷ ಕೆ.ಪುರುಷೋತ್ತಮ್ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸಭೆ: ಸುದ್ದಿ ಗೋಷ್ಠಿಗೂ ಮೊದಲು ಸಮ್ಮೇಳನದ ಅಧ್ಯಕ್ಷರಾದ ಡಿ.ಮಾದೇಗೌಡರ ಅಧ್ಯಕ್ಷತೆ ಯಲ್ಲಿ ನಡೆದ ಸಮ್ಮೇಳನದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗೆ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆ ಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್, ರಾಜ್ಯ ಘಟಕದ ಅಧ್ಯಕ್ಷ ಕೆ.ಪುರುಷೋ ತ್ತಮ್, ಲೇಖಕಿ ಬಿ.ಎಸ್.ಮೀನಾಕ್ಷಿ, ವಕೀಲ ಕೆ.ಎಂ.ಸತೀಶ್‍ಕುಮಾರ್, ಡಾ. ವಸಂತ ಕುಮಾರ್ ತಿಮ್ಕಾಪುರ, ರೊ. ಹರೀಶ್, ಉದ್ಯಮಿಗಳಾದ ಕೆ.ಬಿ.ಲಿಂಗರಾಜು, ಎ.ಎಸ್. ಸತೀಶ್, ಎನ್.ಜಿ.ನಾರಾಯಣ, ಕ್ರೆಡಿಟ್ ಐ ಸಸ್ಥೆಯ ಸಿಇಓ ಡಾ.ಎಂ.ಪಿ.ವರ್ಷ, ಕಾರ್ಯಕ್ರಮ ಸಂಯೋಜಕಿ ಎಸ್.ಪವಿತ್ರಾ, ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಬಸವೇಗೌಡ, ವಿದ್ಯಾವರ್ಧಕ ಸಂಸ್ಥೆಯ ಪಿ.ವಿಶ್ವನಾಥ್, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಇನ್ನಿತರರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷ ಡಿ.ಮಾದೇಗೌಡರ ಪರಿಚಯ
ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಮಾದೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರು. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಜನಿಸಿ, ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೈಸೂರು ನಗರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಅತ್ಯಂತ ಸಾಮಾಜಿಕ ಕಳಕಳಿಯುಳ್ಳ ವರು ಹಾಗೂ ಮನೆ ಮನೆ ಮಾದೇ ಗೌಡ ಎಂದೇ ಕರೆಯಲ್ಪಡುವ ಇವರು ತಮ್ಮೂರ ಪರಿಸರದಲ್ಲಿ ಬೆಳೆದು, ಯುವಕ ಸಂಘದಿಂದ ಆರಂಭ ವಾದ ಅವರ ಸೇವೆ ಇಂದು ಯೂತ್ ಹಾಸ್ಟೆಲ್ ಅಸೋಸಿ ಯೇಷನ್ ಆಫ್ ಇಂಡಿಯಾವರೆಗೆ ವಿಸ್ತಾರಗೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‍ರ `ಸರ್ವರಿಗೂ ಸಮಪಾಲು -ಸರ್ವ ರಿಗೂ ಸಮಬಾಳು’ ನೀತಿಯನ್ನು ಜಾರಿಗೆ ತಂದು ಯಶಸ್ವಿ ಯಾದವರು. ನಾಲ್ವಡಿಯವರೇ ಸ್ಥಾಪಿಸಿದ ಮೈಸೂರು ನಗರಾ ಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಮನೆಯಿಲ್ಲದವರಿಗೆ ಮನೆ, ನಿವೇಶನ ಇಲ್ಲದವರಿಗೆ ನಿವೇಶನ, ಆರ್ಥಿಕವಾಗಿ ಹಿಂದುಳಿ ದವರಿಗೆ ನೆರವು, ಹೀಗೆ ನಿರಂತರ ಸೇವೆಯಿಂದ ಮನೆ ಮನೆ ಮಾದೇಗೌಡ ಎಂದು ಕರೆಸಿಕೊಳ್ಳಲು ಕಾರಣವಾಯಿತು. ನಿರ್ಮಲ ನಗರ ಯೋಜನೆಯನ್ನು ತಮ್ಮೂರಲ್ಲಿಯೇ ಆರಂಭಿಸಿ, ಮುನ್ನುಡಿ ಬರೆದು ಪ್ರಶಸ್ತಿ ಪಡೆದರು. ಸ್ವಚ್ಛ ಭಾರತ ಮಹಾ ಯೋಜನೆಯನ್ನು ಯೋಚಿಸಿ `ಕಸವಲ್ಲ ಇದು ರಸ’ವೆಂದು ತಿಳಿದು ತಮ್ಮೂರಿನ ವಾರ್ಡ್‍ನಲ್ಲೇ ಪ್ರಯೋಗ ಮಾಡಿ, ದೇಶದ ಹೊರ ದೇಶದ ತಜ್ಞರಿಗೆ ಬೆರಗು ಮೂಡಿಸಿ ರಾಷ್ಟ್ರಪ್ರಶಸ್ತಿ ತಂದವರು ಮಾದೇಗೌಡರು. ಸೇವಾದಳದ ಅಧ್ಯಕ್ಷರಾಗಿ ಇಡೀ ರಾಜ್ಯದಲ್ಲಿ ಸಂಚರಿಸಿ, ಗಾಂಧಿ ಮಾರ್ಗಕ್ಕೆ ಗೌರವ ತಂದವರು. ಕಳೆದ 50 ವರ್ಷಗಳ ಹಿಂದೆ, ಯುವಕರಾಗಿದ್ದಾಗ, ದೇಶದ ಯುವ ಜನತೆಗಾಗಿ ಪ್ರಚಲಿತವಾಗಿದ್ದ ವೈಹೆಚ್‍ಎಐಗಾಗಿ ಈಗಿನ ನಿವೇಶನವನ್ನು ಪಡೆಯಲು ಪ್ರಮುಖ ಪಾತ್ರ ವಹಿಸಿದವರು.