ಕತೆಗಿತೆ ಹೇಳ್ಬೇಡಿ ಬೀದಿದೀಪಗಳು ಉರಿಯಬೇಕಷ್ಟೇ….
ಮೈಸೂರು

ಕತೆಗಿತೆ ಹೇಳ್ಬೇಡಿ ಬೀದಿದೀಪಗಳು ಉರಿಯಬೇಕಷ್ಟೇ….

September 13, 2019

ಮೈಸೂರು,ಸೆ.12(ವೈಡಿಎಸ್)- ರಸ್ತೆಗಳಲ್ಲಿ ಬೀದಿದೀಪಗಳೇ ಇಲ್ವಲ್ರಿ, ಪಾದ ಚಾರಿ ಮಾರ್ಗದ ಚರಂಡಿ ಬಾಯ್ತೆರೆ ದಿದ್ದು ಜನರು ಹೇಗ್ರಿ ತಿರುಗಾಡುತ್ತಾರೆ. ನೋಡ್ರಿ, ಕತೆಗಿತೆ ಹೇಳ್ಬೇಡಿ. ನಾಳೆಯಿಂದ ಎಲ್ಲ ಬೀದಿದೀಪಗಳೂ ಉರಿಯಬೇಕು…

ಬುಧವಾರ ಸಂಜೆ ಅರಮನೆ ಸುತ್ತ ಮುತ್ತಲ ರಾಜಮಾರ್ಗದ ಬೀದಿ ದೀಪ ಗಳ ಸ್ಥಿತಿಗತಿಯನ್ನು ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು. ಈ ವೇಳೆ ದೀಪ ಗಳು ಕೆಟ್ಟುಹೋಗಿರುವುದು, ಪಾದಚಾರಿ ಮಾರ್ಗದಲ್ಲಿ ಚರಂಡಿ ಬಾಯ್ತೆರೆದಿರುವುದನ್ನು ಕಂಡ ಸಚಿವರು ಪಾಲಿಕೆ, ಸೆಸ್ಕ್ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಬೀದಿದೀಪಗಳ ಅಳವಡಿಕೆ, ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ಆರಂಭಿಸುವಂತೆ ತಾಕೀತು ಮಾಡಿದರು.

ಮೊದಲಿಗೆ ಪಾಲಿಕೆ ಮುಂಭಾಗದ ರಾಜ ಮಾರ್ಗದ ದೀಪಗಳು ಉರಿಯದಿರುವುದನ್ನು ಕಂಡ ಸಚಿವರು, ಇದೇ ಏನ್ರೀ ಬೀದಿ ದೀಪಗಳ ನಿರ್ವಹಣೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸೆಸ್ಕ್ ಮತ್ತು ಪಾಲಿಕೆ ಅಧಿಕಾರಿಗಳು, ಪಾರಂಪರಿಕ ದೀಪಗಳಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ದುರಸ್ತಿಗೊಳಿಸಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು. ಈ ವೇಳೆ ಸಚಿವರು ಏನ್ ಮಾಡ್ತೀರೋ ನನಗೆ ಗೊತ್ತಿಲ್ಲ. ನಾಳೆಯಿಂದ ದೀಪಗಳು ಉರಿಯಬೇಕು ಎಂದರು.

ಪಾಲಿಕೆ ಅವಲಂಬಿಸಬೇಡಿ: ಕೆಟ್ಟು ಹೋದ ದೀಪಗಳನ್ನು ಬದಲಿಸಲು ಪಾಲಿಕೆಯನ್ನು ಅವಲಂಬಿಸಬೇಡಿ. ನೀವೇ ಸರಿ ಪಡಿಸಿ. ಇದಕ್ಕೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಬಿಡುಗಡೆ ಮಾಡಿಸುತ್ತೇನೆ ಎಂದು ಸೆಸ್ಕ್ ನಿರ್ದೇಶಕರಿಗೆ ಸೂಚಿಸಿದರು.

ಪಾದಚಾರಿ ಮಾರ್ಗ ದುರಸ್ತಿ ಮತ್ತು ದಸರಾ ವಸ್ತು ಪ್ರದರ್ಶನ ಆವರಣದ ಬಳಿಯ ಪಾದಚಾರಿ ಸುರಂಗ ಮಾರ್ಗ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನು ಕೂಲ ಮಾಡಿಕೊಡುವಂತೆ ಪಾಲಿಕೆ ಅಧಿ ಕಾರಿಗಳಿಗೆ ಸೂಚಿಸಿದರು.

ನಂತರ ಸಚಿವ ವಿ.ಸೋಮಣ್ಣ ಮಾಧ್ಯಮದೊಂದಿಗೆ ಮಾತನಾಡಿ, ನಾಡಹಬ್ಬ ದಸರಾ ಪ್ರಾರಂಭವಾಗುವ ಮುನ್ನ ಅರಮನೆ ಸುತ್ತಲ ರಾಜಮಾರ್ಗ ಸೇರಿದಂತೆ ನಗರದ 65 ವಾರ್ಡುಗಳಲ್ಲಿ ಬೀದಿದೀಪಗಳ ನಿರ್ವಹಣೆಯನ್ನು ಸುಸ್ಥಿತಿಗೆ ತರಲಾಗುವುದು. ಇದಕ್ಕಾಗಿಯೇ 5 ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಪ್ರತಿ ವಾರ್ಡಿನಲ್ಲಿ ಸಂಚರಿಸಿ, ಬೀದಿದೀಪಗಳನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ರಾಜಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಿರುವ ಪಾರಂಪರಿಕ ಶೈಲಿಯ ಬೀದಿದೀಪ ಗಳಲ್ಲಿ ಬಹುತೇಕ ದೀಪಗಳು ಕೆಟ್ಟು ಹೋಗಿದ್ದು, ಈ ಕೂಡಲೇ ಬದಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಸೆಸ್ಕ್ ಅಧಿ ಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಶಾಸಕ ರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಸಂಸದ ಪ್ರತಾಪಸಿಂಹ, ಮೇಯರ್ ಪುಷ್ಪ ಲತಾ ಜಗನ್ನಾಥ್, ಡಿಸಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಪಾಲಿಕೆ ಉಪ ಆಯುಕ್ತ ಶಶಿ ಕುಮಾರ್, ಸೆಸ್ಕಾಂ ವ್ಯವಸ್ಥಾಪಕ ನಿರ್ದೇ ಶಕ ಗೋಪಾಲಕೃಷ್ಣ ಮತ್ತಿತರರಿದ್ದರು.

Translate »