ಮೈಸೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ
ಮೈಸೂರು

ಮೈಸೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ

September 13, 2019

 ಮಕ್ಕಳಿಂದ ಕಿಕ್ಕಿರಿದು ತುಂಬಿದ್ದ ಕಲಾಮಂದಿರ
 ಸಡಗರ ಸಂಭ್ರಮದಿಂದ ನಲಿದ ಮಕ್ಕಳು
ಮೈಸೂರು, ಸೆ.12(ಆರ್‍ಕೆಬಿ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಸಾಹಿತ್ಯ, ಸಂಸ್ಕøತಿ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಉಂಟು ಮಾಡಿತು.

ಇಡೀ ಕಲಾಮಂದಿರದ ಎಲ್ಲಾ ಆಸನಗಳು ಮಕ್ಕಳಿಂದ ಭರ್ತಿಯಾಗಿತ್ತು. ಕಲಾಮಂದಿ ರದ ಮಹಡಿಯಲ್ಲಿದ್ದ ಆಸನಗಳಲ್ಲಿಯೂ ಮಕ್ಕಳ ಕಲರವ. ಕಲಾಮಂದಿರದ ಆವರಣದಲ್ಲೂ ಮಕ್ಕಳ ಓಡಾಟವಿತ್ತು. ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಮೂರು ವಿಚಾರಗೋಷ್ಠಿಗಳಲ್ಲಿ `ಕನ್ನಡದ ಅರಿವು ಮತ್ತು ಅಭಿಯಾನ’, `ನನ್ನ ದೇಶ ನನ್ನ ನಾಡು’, `ನನ್ನ ನಾಳೆ ನನ್ನ ಕನಸು’, `ನನ್ನ ಶಾಲೆ ನನ್ನ ಕಲ್ಪನೆ’, `ನನ್ನ ಓದು ನನ್ನ ಭಾಷೆ’, `ನನ್ನ ಕನ್ನಡ ನನ್ನ ಉಸಿರು’, `ನನ್ನ ಊರು ನನ್ನ ಕಲ್ಪನೆ’, `ಕನ್ನಡಕ್ಕೆ ಸಾವಿಲ್ಲ-ಸವಾಲುಗಳಿವೆ’ ವಿಚಾರಗಳ ಕುರಿತು ಚರ್ಚೆಗಳು ನಡೆದವು.

ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಸಾಹಿತ್ಯ, ಮಕ್ಕಳು ಸಾಹಿತ್ಯ-ಆಧುನಿಕತೆಯ ಸವಾಲುಗಳು, ಮಕ್ಕಳು ಮತ್ತು ಸಾಮಾಜಿಕ ಜಾಲತಾಣ, ಮಕ್ಕಳು ಮತ್ತು ಪರಿಸರ ಪ್ರಜ್ಞೆ, ವಿಶ್ವ ಜಲ ದಿನಾಚರಣೆ ವಿಚಾರಗಳ ಕುರಿತು ಚಿಂತನ ಮಂಥನ ನಡೆಯಿತು. ಮಕ್ಕಳ ಸಾಹಿತ್ಯ ನಡೆದುಬಂದ ದಾರಿ, ಮಕ್ಕಳ ಹಕ್ಕುಗಳು ಹಾಗೂ ಸಮಸ್ಯೆಗಳು ಕುರಿತು ವಿಚಾರ ಮಂಡನೆಗಳು ನಡೆದವು. ವಿದ್ಯಾರ್ಥಿ ಕವಿಗೋಷ್ಠಿ ಯಲ್ಲಿ ವಿದ್ಯಾರ್ಥಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಬಳಿಕ ಸಾಧಕ ಮಕ್ಕಳಾದ ಮೈಸೂರು ಹೆಚ್.ಖುಷಿ (ಯೋಗ), ನಂಜನಗೂಡಿನ ಎಸ್.ಶಶಾಂಕ (ಕ್ರೀಡೆ), ಹುಣಸೂರಿನ ಎಂ.ಸಾಹಿತ್ಯ (ಪ್ರಬಂಧ), ಮೈಸೂರಿನ ಋತ್ವಿಕ್ ಸಿ.ರಾಜ್ (ಸಂಗೀತ), ಕೆ.ಆರ್.ನಗರದ ಜಿ.ದರ್ಶನ್ (ಕರಾಟೆ), ಪಿರಿಯಾ ಪಟ್ಟಣದ ನೂರ್ ಸುಹಾನಿ (ಶಿಕ್ಷಣ), ಹೆಚ್.ಡಿ.ಕೋಟೆಯ ಕೆ.ದೀಪಿಕಾ (ಕಲೆ), ತಿ.ನರಸೀಪುರದ ಕೆಂಪರಾಜು (ನೃತ್ಯ) ಹಾಗೂ ಮಕ್ಕಳ ಸೇವಾ ಕ್ಷೇತ್ರದ ಸಾಧಕರಾದ ಜ್ಯೋತಿ, ಹೆಚ್.ಕೆ.ರಾಮನಾಥ್, ಕೆ.ವಿ.ಸೌಮ್ಯ, ಎನ್.ವೆಂಕೋಬರಾವ್, ಫಜಿಲ್ಹಾತ್, ಜಮುನಾ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕøತಿಕ ಸಂಭ್ರಮದಲ್ಲಿ ಭರತನಾಟ್ಯ, ಭಾವಗೀತೆ, ಜಾನಪದ ನೃತ್ಯ, ಕಂಸಾಳೆ, ಸಮೂಹ ನೃತ್ಯ ಹಾಗೂ ಪ್ಲಾಸ್ಟಿಕ್ ಭೂತ ಕುರಿತ ನಾಟಕಗಳು ಮಕ್ಕಳನ್ನು ರಂಜಿಸಿದವು.

Translate »