ಸಾಕ್ಷರರಾಗುತ್ತಿದ್ದೇವೆ ಮಾನವರಾಗುತ್ತಿಲ್ಲ… ಪದವೀಧರರಾಗುತ್ತಿದ್ದೇವೆ ಆದರ್ಶಗಳಿಲ್ಲ..
ಮೈಸೂರು

ಸಾಕ್ಷರರಾಗುತ್ತಿದ್ದೇವೆ ಮಾನವರಾಗುತ್ತಿಲ್ಲ… ಪದವೀಧರರಾಗುತ್ತಿದ್ದೇವೆ ಆದರ್ಶಗಳಿಲ್ಲ..

September 13, 2019

ಮೈಸೂರು: ಯಾವುದೇ ತಿರುಳಿಲ್ಲದ ನಮ್ಮ ಬದುಕಿನಲ್ಲಿ ಮಾನವೀ ಯತೆ ಮರೆತು ಹೆಸರಿಗಷ್ಟೇ ಮಾನವರಾಗಿ ಉಳಿದಿದ್ದೇವೆ. ಸಾಕ್ಷರರಾಗುತ್ತಿದ್ದೇವೆಯೇ ಹೊರತು ಮಾನವರಾಗುತ್ತಿಲ್ಲ. ಪದವೀ ಧರರಾಗುತ್ತಿದ್ದರೂ ಆದರ್ಶಗಳಿಲ್ಲ…

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗುರುವಾರ ಮೈಸೂರಿನ ಕಲಾಮಂದಿರದ ಎಂ.ಎಸ್. ಪುಟ್ಟಣ್ಣ ವೇದಿಕೆಯಲ್ಲಿ ನಡೆದ ಮೈಸೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇ ಳನದಲ್ಲಿ ಸಮ್ಮೇಳನಾಧ್ಯಕ್ಷ ಎಂ.ಎಸ್. ಅರ್ಜುನ್ ಬೇಸರದ ನುಡಿಗಳಿವು.

ಮನುಷ್ಯ-ಮನುಷ್ಯನ ನಡುವೆ ಗೋಡೆ ಬಂದಿದೆ. ಗೋಡೆಯ ಬದಲಿಗೆ ಸೇತುವೆ ಇರಬೇಕಿತ್ತು. ಹಿರಿಯರು ಹೇಳಿದ ಸಂದೇಶ ಗಳನ್ನು ನಮ್ಮ ವ್ಯಾಪ್ತಿಯಿಂದಾಚೆಗೆ ಎಸೆದು ಜೀವನ ಮಾಡುತ್ತಿದ್ದೇವೆ. ಜಾತಿ, ಮತ, ಧರ್ಮ ತಾರತಮ್ಯ, ಯುದ್ಧ ಎಂಬಿತ್ಯಾದಿ ಸಾಮಾಜಿಕ ಪಿಡುಗುಗಳನ್ನು ಹೊತ್ತು ಕೊಂಡು ಮೆರೆಸುತ್ತಿದ್ದೇವೆ ಎಂದರು.

ಭಾಗಶಃ ಮೊಬೈಲ್ ಒಳಗೇ ನಮ್ಮ ಅರ್ಧ ಜೀವನ ಕಳೆಯುತ್ತಿರುವ ನಾವು ಮೌಲ್ಯರಹಿತ, ಅರ್ಥಹೀನವಾಗಿ ಇಡೀ ಜೀವನ ಕಳೆಯುತ್ತಿದ್ದೇವೆ. ನಾವು ಮಕ್ಕಳು ಅಜ್ಜಿ, ತಾತ, ಊರು ಎಂಬ ಸಣ್ಣ ಖುಷಿ ಯನ್ನೂ ಕಳೆದುಕೊಂಡಿದ್ದೇವೆ. ಕೇವಲ ಪಠ್ಯ ಪುಸ್ತಕಗಳ ಕೀಟಗಳಾಗುತ್ತಿದ್ದೇವೆ. ನನ್ನೂರಿ ನಲ್ಲಿ ನನ್ನ ವಯಸ್ಸಿನ ಮಕ್ಕಳು ಮನೆಗೆ ಬಂದು ಸೇರೋದೇ ಕಷ್ಟ. ಅವರಿಗೆ ಹೊರಗಿನ ಪರಿಸರವೇ ಪ್ರಪಂಚವಾಗಿದೆ. ಆದರೆ ಇಲ್ಲಿ ನನ್ನಂತಹವರು, ನನ್ನ ಸ್ನೇಹಿತರನ್ನು ಮನೆ ಯಿಂದ ಆಚೆಗೆ ಕಳಿಸುವುದೇ ಕಷ್ಟ ಎಂಬಂ ತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕøತಿ, ವಿಚಾರ, ಸಂಗೀತದ ಅವಶ್ಯಕತೆ, ಅಳಿವು-ಉಳಿವಿನ ಬಗ್ಗೆ ಚಿಂತಿಸುವುದು ಅಗತ್ಯವಿದೆ. ನಾವೆಲ್ಲರೂ ಸಮಾಜವನ್ನು ಕಣ್ಣು ಬಿಟ್ಟು ನಿರ್ಮಲ ಮನಸ್ಸಿನಿಂದ ಕಾಣುವಂತಾಗಬೇಕು ಎಂದ ಅವರು, ನಮ್ಮಂತಹ ಮಕ್ಕಳಿಗೆ ಕನ್ನಡದ ಅಸ್ಮಿತೆ ಯನ್ನು ಎತ್ತಿ ಹಿಡಿಯಲು ಕುವೆಂಪು ಅವರು ಕವಿತೆಯಲ್ಲಿ ನೀಡಿದ `ಸಿರಿ ಗನ್ನಡಂ ಗೆಲ್ಗೆ- ಸಿರಿಗನ್ನಡಂ ಬಾಳ್ಗೆ’ ಯಂತೆ ಕನ್ನಡ ನುಡಿ ನದಿಯಂತೆ ಸದಾ ಹರಿಯುತ್ತಿರಲಿ ಎಂದು ಆಶಿಸಿದರು.

Translate »