ಮೈಸೂರು, ಸೆ.12(ಆರ್‍ಕೆ)- ಮೈಸೂ ರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೀವು ವಾಕ್ ಮಾಡಬೇಕೆಂದರೆ ಸ್ಪೋಟ್ರ್ಸ್ ಷೂ ಬದಲಾಗಿ ಗಮ್ ಬೂಟ್ ಧರಿಸಿ ಹೋಗ ಬೇಕು. ಏಕೆಂದರೆ ಕುಕ್ಕರಹಳ್ಳಿ ಕೆರೆ ಏರಿ ರಸ್ತೆಗೆ ಮಣ್ಣು ಹಾಕಿರುವುದರಿಂದ ಇದೀಗ ವಾಕಿಂಗ್ ಪಾತ್ ಕೆಸರುಮಯವಾಗಿದೆ. ಈ ಬಗ್ಗೆ ಇಂದು ‘ಮೈಸೂರು ಮಿತ್ರ’ ಕಚೇ ರಿಗೆ ದೂರವಾಣಿ ಮೂಲಕ ದೂರಿದ ಹಲವು ವಾಯುವಿಹಾರಿಗಳು, ದಸರಾ ಸಮೀಪಿ ಸುತ್ತಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿ ಕರು ಕುಕ್ಕರಹಳ್ಳಿ ಕೆರೆಯತ್ತ ಬರುತ್ತಿರುವಾಗ ಪಾದಚಾರಿ ಮಾರ್ಗದಲ್ಲಿ ಮಣ್ಣು ಸುರಿ ದಿರುವ ಮೈಸೂರು ವಿಶ್ವವಿದ್ಯಾನಿಲಯದ ಕ್ರಮ ಅವೈಜ್ಞಾನಿಕ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆರೆ ಏರಿಯ ಕಾಲುದಾರಿಗೆ ಮಣ್ಣು ಹಾಕಿ ರುವುದರಿಂದ ಪ್ರತೀ ದಿನ ಸುರಿಯುತ್ತಿ ರುವ ಮಳೆಗೆ ವಾಕಿಂಗ್‍ಪಾತ್ ಕೆಸರು ಗದ್ದೆಯಂತಾಗಿದೆ. ಇಲ್ಲಿ ನಡೆಯುವುದಾ ದರೂ ಹೇಗೆ? ಎಂದೂ ಪ್ರಶ್ನಿಸಿದರು.
ಕಾಲು ದಾರಿಯುದ್ದಕ್ಕೂ ಮಣ್ಣು ಸುರಿದು, ಅಲ್ಲಲ್ಲಿ ಅರ್ಧ ಟ್ರಕ್ ಲೋಡ್‍ನಷ್ಟು ಮಣ್ಣಿನ ಗುಡ್ಡೆಗಳಿವೆ. ಮಳೆ ಬಿದ್ದು ಕೆಸರಿನಂತಾಗಿ ರುವ ಇಲ್ಲಿ ವಾಕ್ ಮಾಡುವುದಾದರೂ ಹೇಗೆ? ಹೀಗೆ ಮಾಡಲು ಹೇಳಿದವರ್ಯಾರು ಎಂದೂ ವಾಯುವಿಹಾರಿಗಳು ಪ್ರಶ್ನಿಸತೊಡಗಿದ್ದಾರೆ.
ಈ ಕೆಸರು ರಸ್ತೆಯಲ್ಲಿ ವಾಕ್ ಮಾಡಿದರೆ ಮಧ್ಯಮ ವಯಸ್ಸಿನ ಹಾಗೂ ವಯಸ್ಸಾದ ಹಿರಿಯ ನಾಗರಿಕರು ಜಾರಿಬಿದ್ದು ಗಾಯ ವಾಗುವುದು ಖಚಿತ. ಅಧಿಕಾರಿಗಳಿಗೇಕೆ ಇದು ತಿಳಿಯುತ್ತಿಲ್ಲ ಎಂದೂ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮುಂಜಾಗ್ರತೆಗಾಗಿ ಸ್ಥಳ ದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಕುಲಪತಿಗಳ ಪ್ರತಿಕ್ರಿಯೆ: ಕಳೆದ ವಾರ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಕೆರೆ ಏರಿ ಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತು ವಾಯುವಿಹಾರಿಗಳಿಗೆ ತೊಂದರೆಯಾಗು ತ್ತಿರುವುದನ್ನು ಗಮನಿಸಿ, ತಕ್ಷಣ ಮಣ್ಣು ತುಂಬಿ ಸುಗಮ ರೀತಿ ಓಡಾಡಲು ಅನುಕೂಲ ಮಾಡಿ ಎಂದು ಸೂಚನೆ ನೀಡಿದ್ದರಿಂದ ಅವರ ಆದೇಶ ಪಾಲನೆ ಮಾಡಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಗುಂಡಿಯಲ್ಲಿ ನೀರು ನಿಂತು ಕೆರೆ ಏರಿಗೂ ಅಪಾಯವಿತ್ತು. ವಾಯುವಿಹಾರಿಗಳಿಂ ದಲೂ ಗುಂಡಿ ಮುಚ್ಚಬೇಕೆಂಬ ಒತ್ತಾಯ ವಿತ್ತು. ಆ ಹಿನ್ನೆಲೆಯಲ್ಲಿ ಮಂತ್ರಿಗಳು ಸೂಚನೆ ನೀಡಿದ್ದರು. ಅವರ ಸಲಹೆಯಂತೆ ಶೌಚಾ ಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸಿ ದ್ದೇವೆ. ನಿರ್ವಹಣೆಗೆ ಸಿಬ್ಬಂದಿಗಳನ್ನೂ ನೇಮಿಸಿದ್ದೇವೆ ಎಂದೂ ತಿಳಿಸಿದರು.
ಕುಡುಕರ ಹಾವಳಿ, ನಾಯಿಗಳ ಕಾಟ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ಸಚಿವರಿಗೆ ದೂರಿದ ಹಿನ್ನೆಲೆಯಲ್ಲಿ ಕುಕ್ಕರ ಹಳ್ಳಿ ಕೆರೆ ಪೂರ್ವ ಭಾಗದ ದ್ವಾರದ ಬಳಿ ಇದ್ದ ಮೀನು ಮಾರಾಟ ಕೇಂದ್ರವನ್ನು ಬಂದ್ ಮಾಡಿಸಲಾಗಿದೆ. ಇಂದೂ ಸಹ ಸಚಿವ ಸೋಮಣ್ಣ ಅವರು ನನ್ನೊಂದಿಗೆ ಬಂದು ವಾಯುವಿಹಾರ ಮಾಡಿ ಪರಿಶೀಲಿಸಿ ಕೈಗೊಂಡ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕುಲಪತಿಗಳು ತಿಳಿಸಿದರು. ಕೆರೆ ಏರಿ ಮೇಲೆ ಸ್ಟ್ರೀಟ್ ಲೈಟ್ ಹಾಕಿಸಲಾಗಿದೆ. ಕೆಲವರು ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದು ಅದಕ್ಕೂ ಆಕ್ಷೇಪಿಸಿದ್ದಾರೆ. ನಾಯಿಗಳನ್ನು ಹಿಡಿಸಿ ಎಂದು ಕೆಲವರು ಹೇಳಿದರೆ, ಬಿಸ್ಕತ್ ಹಾಕುವವರು ಅವುಗಳಿಗೆ ತೊಂದರೆ ಕೊಡಬೇಡಿ ಎನ್ನುತ್ತಾರೆ. ಇಲ್ಲಿ ಎಲ್ಲದಕ್ಕೂ ಪರ-ವಿರೋಧಗಳು ಬರುವುದರಿಂದ ಯಾವುದೇ ಅಭಿವೃದ್ಧಿ ಯೋಜನೆ ಮಾಡಲು ತೊಂದರೆಯಾಗುತ್ತದೆ ಎಂದೂ ಪ್ರೊ. ಹೇಮಂತ್ ಕುಮಾರ್ ನುಡಿದರು