ನಾಪೋಕ್ಲು: ಕೊಡಗಿನ ವಿದ್ಯಾರ್ಥಿಯೊಬ್ಬ ಸುಳ್ಯದ ಪಯಸ್ವಿನಿ ನದಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸುಳ್ಯದ ಖಾಸಗಿ ತರಬೇತಿ ಕೇಂದ್ರವೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಕ್ಕಬ್ಬೆ- ಮರಂದೋಡ ಗ್ರಾಮದ ಸುದೀಪ್ (18) ಮೃತಪಟ್ಟ ವಿದ್ಯಾರ್ಥಿ. ಡಿ.10 ರಂದು ಸೋಮವಾರ ಮೊಬೈಲ್ ರಿಪೇರಿಗೆಂದು ತೆರಳಿದ ಸುದೀಪ್ ಸಂಜೆಯಾದರೂ ಹಾಸ್ಟೆಲ್‍ಗೆ ಬಾರದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಸುಳ್ಯ ಸಮೀಪದ ಪಯಸ್ವಿನಿ ನದಿಯಲ್ಲಿ ಮೃತ ದೇಹ ಪತ್ತೆಯಾಯಿತು. ಈಜಲು ತೆರಳಿದ್ದ ಸುದೀಪ್ ಆಕಸ್ಮಿಕವಾಗಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ದೂರಿನ ಮೇರೆಗೆ ಸಿಐ ಸತೀಶ್, ಠಾಣಾಧಿಕಾರಿ ಮಂಜುನಾಥ್ ಕಾನೂನು ಕ್ರಮಕೈಗೊಂಡು ಸುದೀಪ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
