ಸ್ವಚ್ಛ ಸರ್ವೇಕ್ಷಣೆಯಲ್ಲಿ ವಿದ್ಯಾರ್ಥಿ ಸಮೂಹ ಹೆಚ್ಚಾಗಿ ಪಾಲ್ಗೊಳ್ಳುವುದು ಅವಶ್ಯ: ಪಾಲಿಕೆ ಎಡಿಸಿ ಅಭಿಮತ
ಮೈಸೂರು

ಸ್ವಚ್ಛ ಸರ್ವೇಕ್ಷಣೆಯಲ್ಲಿ ವಿದ್ಯಾರ್ಥಿ ಸಮೂಹ ಹೆಚ್ಚಾಗಿ ಪಾಲ್ಗೊಳ್ಳುವುದು ಅವಶ್ಯ: ಪಾಲಿಕೆ ಎಡಿಸಿ ಅಭಿಮತ

January 14, 2020

ಪುರಭವನದಲ್ಲಿ ವಿದ್ಯಾರ್ಥಿ ಹಾಗೂ ಸಂಘ-ಸಂಸ್ಥೆಗಳ ಮುಖಂಡರಿಗೆ ಜಾಗೃತಿ ಕಾರ್ಯಕ್ರಮ
ಮೈಸೂರು,ಜ.13(ಎಂಟಿವೈ)- ಸ್ವಚ್ಛ ಸರ್ವೇ ಕ್ಷಣೆ ಸರ್ವೇ ಆರಂಭವಾಗಿದ್ದು, ಸಾಂಸ್ಕøತಿಕ ನಗರಿ ಮೈಸೂರಿಗೆ ದೇಶದಲ್ಲೇ ಸ್ವಚ್ಛ ನಗರ ಕೀರ್ತಿ ದೊರಕಿಸಿಕೊಡಲು ವಿದ್ಯಾರ್ಥಿ ಸಮು ದಾಯ ಹಾಗೂ ಯುವಜನತೆ ಫೀಡ್ ಬ್ಯಾಕ್ ನೀಡುವುದು ಅನಿವಾರ್ಯ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಕೆ.ಎನ್.ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಪುರಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ಸ್ವಚ್ಛ ಸರ್ವೇಕ್ಷಣ್ ಜಾಗೃತಿ ಅಭಿ ಯಾನದಲ್ಲಿ ಮಾತನಾಡಿದ ಅವರು, ದೇಶ ದಾದ್ಯಂತ ಹಲವು ನಗರಗಳು ಈ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಿದ್ದು, ದೇಶದ ಸ್ವಚ್ಛ ನಗರಿ ಪಟ್ಟ ಪಡೆದುಕೊಳ್ಳಲು ಹವಣಿಸುತ್ತಿವೆ. ಈ ಹಿಂದೆ ಸ್ವಚ್ಛ ನಗರ ಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿ ಕೊಂಡಿದ್ದ ಮೈಸೂರು, ಕಳೆದ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪೌರ ಕಾರ್ಮಿಕರು, ಪಾಲಿಕೆ ಸಿಬ್ಬಂದಿ ಅವಿರತ ಶ್ರಮಿಸಿದ್ದರೂ ಸಾರ್ವಜನಿಕ ಸಹಭಾಗಿ ತ್ವದ ಕೊರತೆಯಿಂದಾಗಿ ಮೂರನೇ ಸ್ಥಾನ ದೊರೆತಿತ್ತು. ಆದರೆ ಈ ಬಾರಿ ಮತ್ತೆ `ಸ್ವಚ್ಛ ನಗರಿ’ ಗರಿ ಮೈಸೂರಿಗೆ ದೊರಕಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ವೆಯಲ್ಲಿ ಮೈಸೂರಿನ ನಿವಾಸಿಗಳು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.

ಸ್ವಚ್ಛತಾ ಆ್ಯಪ್ ಅಥವಾ 1969 ಸಂಖ್ಯೆ ಉಚಿತವಾಗಿ ಕರೆ ಮಾಡಿ ಆರು ಪ್ರಶ್ನೆಗಳಿಗೆ ಉತ್ತರಿಸಬೇಕು. ಗರಿಷ್ಠ 10 ಅಂಕ ನೀಡ ಬೇಕು. ಅಂತಿಮವಾಗಿ ಬರುವ ಓಟಿಪಿ ಸಂಖ್ಯೆಯನ್ನು ದಾಖಲಿಸಿದಾಗ ಮಾತ್ರ ನೀವು ಓಟ್ ಹಾಕಿದಂತಾಗುತ್ತದೆ. ಸಾರ್ವ ಜನಿಕರಿಂದ 1500 ಅಂಕ ಬರಲೇಬೇಕಾ ಗಿದೆ. ಇಷ್ಟು ಅಂಕ ಬಂದರೆ ಮೈಸೂರು ಸ್ವಚ್ಛ ನಗರಿ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ, ಯುವ ಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೊದಲು ನೀವು ಸರ್ವೇಕ್ಷಣೆಯಲ್ಲಿ ಪಾಲ್ಗೊ ಳ್ಳುವ ಬಗೆಯನ್ನು ಅರಿತರೆ, ಸ್ನೇಹಿತರು, ಸಂಬಂಧಿಗಳಿಂದಲೂ ಮತ ಹಾಕಿಸ ಬಹುದು. ಇದರೊಂದಿಗೆ ಸಂಘ-ಸಂಸ್ಥೆ ಗಳ ಮುಖಂಡರಿಗೂ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ಹೇಳಿದರು.

ದೇಶದ ಯಾವುದೇ ನಗರಗಳಿಗೆ ಹೋಲಿಸಿದರೆ ಮೈಸೂರಿನ ವಾತಾವರಣ ಅತ್ಯಂತ ಸುಂದರವಾಗಿದೆ. ನೈಸರ್ಗಿಕ ಸೊಬ ಗನ್ನು ಹೊಂದಿರುವ ನಗರವೂ ಆಗಿದೆ. ವಾಸ ಮಾಡಲು ಯೋಗ್ಯ, ಸುರಕ್ಷಿತವೂ ಆದ ವಾತಾ ವರಣ ಮೈಸೂರಿನಲ್ಲಿದೆ. ಹಲವು ಪ್ರವಾಸಿ ತಾಣವನ್ನೂ ಒಳಗೊಂಡಿರುವ ಮೈಸೂರಿನ ಲ್ಲಿರುವುದೇ ನಮ್ಮ ಸೌಭಾಗ್ಯ. ಈ ಹಿನ್ನೆಲೆ ಯಲ್ಲಿ ಸರ್ವೇಕ್ಷಣೆಯಲ್ಲಿ ಪಾಲ್ಗೊಂಡು ಹೆಮ್ಮೆಯ ನಗರಕ್ಕೆ ಸ್ವಚ್ಛತೆ ಮುಕುಟ ದೊರಕಿಸಿ ಕೊಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಜಯಂತ್ ಸ್ವಚ್ಛ ಸರ್ವೇಕ್ಷಣೆ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ವಲಯ 6ರ ಎಸಿ ಗೀತಾ ಉಡೇದ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಗುರುಮೂರ್ತಿ, ಮಹದೇವಪ್ಪ, ದಿವಾಕರ್ ಚಂಡಿ, ಪಾಲಿಕೆ ಪರಿಸರ ಅಭಿಯಂತರರಾದ ಎಸ್.ಮೈತ್ರಿ ಹಾಗೂ ಇನ್ನಿತರರು ಇದ್ದರು.