ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆಯಲ್ಲಿ ವ್ಯತ್ಯಯ: ಸಾರ್ವಜನಿಕರ ಪರದಾಟ
ಮೈಸೂರು

ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆಯಲ್ಲಿ ವ್ಯತ್ಯಯ: ಸಾರ್ವಜನಿಕರ ಪರದಾಟ

April 21, 2019

ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತ
ಮೈಸೂರು: ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ಸಾರ್ವಜನಿಕ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಏ.22ರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು, ದಾಖಲೆಗಳನ್ನು ಗಣಕೀಕೃತವಾಗಿ ನೋಂದಣಿ ಮಾಡಲು ಹೆಚ್‍ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಕರಾರು, ಕಳೆದ ಮಾ.31ಕ್ಕೆ ಅಂತ್ಯವಾಗಿರುವ ಕಾರಣ, ಪೇಪರ್, ಕಾಟ್ರೇಜ್ ಸರಬರಾಜು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗಣಕಯಂತ್ರ ನಿರ್ವಾ ಹಕರೂ(ಡಾಟಾ ಎಂಟ್ರಿ ಆಪರೇಟರ್ಸ್) ಕರ್ತವ್ಯದಲ್ಲಿ ಮುಂದು ವರೆಯುವ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ.

ಹೆಚ್‍ಸಿಎಲ್ ಸಂಸ್ಥೆಯೊಂದಿಗಿನ ಕರಾರು ಕಳೆದ ಫೆಬ್ರವರಿ ತಿಂಗಳಿಗೆ ಅಂತ್ಯವಾಗಿತ್ತಾದರೂ ಒಂದು ತಿಂಗಳ ಕಾಲ ವಿಸ್ತರಿಸ ಲಾಗಿತ್ತು. ಆದರೆ ಅಗತ್ಯ ವಸ್ತುಗಳ ಪೂರೈಕೆ ಮಾ.31ಕ್ಕೆ ಸಂಪೂರ್ಣ ವಾಗಿ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಆರಂಭವಾಯಿತು. ಇಲಾಖೆ ಮೇಲಧಿಕಾರಿಗಳ ಸೂಚನೆಯಂತೆ ಕಳೆದ 20 ದಿನಗಳು ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲೇ ಪೇಪರ್, ಕಾಟ್ರೇಜ್ ಇನ್ನಿತರ ವಸ್ತುಗಳನ್ನು ಖರೀದಿಸಿ, ಕಾರ್ಯ ನಿರ್ವಹಿಸ ಲಾಗಿದೆ. ತುರ್ತಾಗಿ ನೋಂದಣಿ ಮಾಡಿಸುವ ಪರಿಸ್ಥಿತಿಯಲ್ಲಿರುವ ಅದೆಷ್ಟೋ ಮಂದಿ ತಾವೇ ಅಗತ್ಯ ವಸ್ತುಗಳನ್ನು ಪೂರೈಸಿರುವ ಸಂಗತಿಯೂ ನಡೆದಿದೆ. ಆದರೀಗ ಸಮಸ್ಯೆ ಮತ್ತಷ್ಟು ಗಂಭೀರವಾಗಿರುವ ಹಿನ್ನೆಲೆ ಯಲ್ಲಿ ಏ.22ರಿಂದ ಸಾರ್ವಜನಿಕ ಸೇವೆಗಳಲ್ಲಿ ಭಾರೀ ವ್ಯತ್ಯಯ ವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್ ಕರೆಯಲು ಸಾಧ್ಯ ವಾಗುವುದಿಲ್ಲ. ಚುನಾವಣೆ ಮುಗಿಯುವವರೆಗೆ ತಮ್ಮ ಕಚೇರಿ ವ್ಯಾಪ್ತಿಯಲ್ಲೇ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವಂತೆ ಇಲಾಖೆ ಸೂಚಿಸಿದ್ದರಿಂದ ಹೇಗೋ 20 ದಿನಗಳ ಕಾಲ ನಿಭಾಯಿಸಿರುವ ಅಧಿಕಾರಿಗಳು, ಮುಂದಿನ ದಿನಗಳ ದುಸ್ಥಿತಿ ನೆನೆದು ಕಂಗಾಲಾಗಿದ್ದಾರೆ. ಹೊಸದಾಗಿ ಗುತ್ತಿಗೆ ನೀಡುತ್ತಾರೋ? ಅಥವಾ ಇಲಾಖೆ ಮೂಲಕವೇ ಅಗತ್ಯ ವಸ್ತುಗಳನ್ನು ಪೂರೈಸುತ್ತಾರೋ? ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಕರಾರಿನಂತೆ ಅಗತ್ಯ ವಸ್ತುಗಳ ಪೂರೈಕೆ ಜೊತೆಗೆ ಡಾಟಾ ಆಪರೇಟರ್ಸ್ ನಿಯೋಜನೆ, ಕಂಪ್ಯೂಟರ್, ಪ್ರಿಂಟರ್ ಇನ್ನಿತರ ಯಂತ್ರೋಪಕರಣಗಳ ನಿರ್ವಹಣೆಯನ್ನೂ ಹೆಚ್‍ಸಿಎಲ್ ಸಂಸ್ಥೆಯೇ ನಿರ್ವಹಿಸುತ್ತಿತ್ತು. ಇದೀಗ ಕರಾರು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಡಾಟಾ ಆಪರೇಟರ್ಸ್‍ಗಳಿಗೆ ಕಳೆದ ತಿಂಗಳ ವೇತನ ಸಂದಾಯವಾಗಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಕರ್ತವ್ಯದಲ್ಲಿ ಮುಂದುವರೆಯುವುದರ ಬಗ್ಗೆ ಗೊಂದಲವಿದೆ. ಒಂದು ತಿಂಗಳಿಂದ ನಿರ್ವಹಣೆ ಇಲ್ಲದೆ ಅದೆಷ್ಟೋ ಕಂಪ್ಯೂಟರ್, ಪ್ರಿಂಟರ್‍ಗಳು ದುರಸ್ಥಿಯಲ್ಲಿವೆ. ಪ್ರತಿಯೊಂದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನಕ್ಕೆ ಏಳೆಂಟು ಬಾಕ್ಸ್ ಪೇಪರ್ ಅಗತ್ಯವಿದೆ. ಪೇಪರ್ ಹಾಗೂ ಕಾಟ್ರೇಜ್ ಕೊರತೆಯಿಂದಾಗಿ ಸಾರ್ವಜನಿಕರಿಗೆ ಋಣಭಾರ ಪ್ರಮಾಣ ಪತ್ರ ವಿತರಿಸಲು ಸಾಧ್ಯ ವಾಗುತ್ತಿಲ್ಲ. ದಾಖಲೆಗಳ ದೃಢೀಕೃತ ನಕಲು ಪ್ರತಿ ನೀಡಲಾಗುತ್ತಿಲ್ಲ. ಕಂಪ್ಯೂಟರ್ ದುರಸ್ತಿಯಿಂದಾಗಿ ಆಸ್ತಿ ನೋಂದಣಿ ಹಾಗೂ ವಿವಾಹ ನೋಂದಣಿಗೂ ಅಡ್ಡಿಯಾಗಿದೆ. ಆಸ್ತಿ ಮಾರುಕಟ್ಟೆ ಮೌಲ್ಯ, ಮುದ್ರಾಂಕ ಶುಲ್ಕ ಇನ್ನಿತರ ಮಾಹಿತಿಯನ್ನು ನಿಖರವಾಗಿ ತಿಳಿಸುವುದಕ್ಕೂ ಹೆಣಗಾಡುವಂತಾಗಿದೆ. ಮೈಸೂರಿನ ಉಪ ನೋಂದಾಣಾಧಿಕಾರಿ ಕಚೇರಿಯ ಸೂಚನಾ ಫಲಕದಲ್ಲಿ `ಏ.22ರಿಂದ ಯಾವುದೇ ನೋಂದಣಿ ಕಾರ್ಯ ಸಾಧ್ಯ ವಾಗುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು’ ಎಂಬ ಚೀಟಿ ಅಂಟಿಸಿರು ವುದು ಸಮಸ್ಯೆಯ ಗಂಭೀರತೆಯನ್ನು ತಿಳಿಸುವಂತಿದೆ. ಇದು ಮೈಸೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಸಮಸ್ಯೆಯಾಗಿದ್ದು, ಸಾರ್ವಜನಿಕರು ಸಕಾಲದಲ್ಲಿ ಯಾವುದೇ ಕೆಲಸ ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ ಉಪ ನೋಂದಣಾಧಿಕಾರಿಗಳ ಕಚೇರಿಯ ಕಾರ್ಯ ಚಟುವಟಿಕೆ ಸ್ಥಗಿತಗೊಳ್ಳಬಹುದು.

Translate »