ಸತತ ಪರಿಶ್ರಮದಿಂದ ಗೆಲುವು ಸಾಧ್ಯ
ಮೈಸೂರು

ಸತತ ಪರಿಶ್ರಮದಿಂದ ಗೆಲುವು ಸಾಧ್ಯ

January 8, 2019

ಮೈಸೂರು: ಸತತ ಪರಿಶ್ರಮ ಮತ್ತು ಇಚ್ಛಾಶಕ್ತಿ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧ್ಯ. ಜೊತೆಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ನನಸಾಗಲಿದೆ ಎಂದು ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರಾದ ಜಿ.ಎಸ್.ರಘು ಅಭಿಪ್ರಾಯಪಟ್ಟರು.

ನಗರದ ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಪೊಲೀಸ್ ಮತ್ತು ಅಬ್ಕಾರಿ ಸಬ್‍ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರವನ್ನು ಹಣತೆ ಹಚ್ಚುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾನು ಕೂಡ 1998 ರಲ್ಲಿ ಜ್ಞಾನಬುತ್ತಿ ಸಂಸ್ಥೆ ನಡೆಸಿದ ಉಚಿತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತರಬೇತಿ ಶಿಬಿರಕ್ಕೆ ವಿದ್ಯಾರ್ಥಿ ಯಾಗಿ ಆಗಮಿಸಿದ್ದೆ. ನನ್ನ ನೇಮಕಾತಿ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 170 ಹುದ್ದೆಗೆ ಅರ್ಜಿ ಕರೆದಿದ್ದರು. ಆ ಪೈಕಿ ನಮ್ಮ ಜ್ಞಾನಬುತ್ತಿ ಸಂಸ್ಥೆಯೊಂದರಲ್ಲೇ 38 ಅಭ್ಯರ್ಥಿಗಳು ಆಯ್ಕೆಯಾಗಿ ದಾಖಲೆ ನಿರ್ಮಿ ಸಿದ್ದೆವು ಎಂದು ನೆನಪಿಸಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗ ಸ್ವಾಮಿ ಅವರು ಮಾತನಾಡಿ, ಪೊಲೀಸ್ ಅಧಿಕಾರಿ ಆಗಲೇಬೇಕೆಂದು ದೃಢ ವಿಶ್ವಾಸವನ್ನು ಆರಂಭದ ದಿನದಿಂದಲೇ ಹೊಂದಬೇಕು. ಜೊತೆಗೆ ಮಾನಸಿಕವಾಗಿ ಸಿದ್ಧರಾಗಬೇಕೆಂದು ಕರೆಕೊಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತೆಮಾಳ, ಬನ್ನೂರಿನ ಪ್ರಾಚಾರ್ಯರಾದ ಡಾ: ಹೊನ್ನಯ್ಯ, ಗುಂಡ್ಲುಪೇಟೆ ಜೆ.ಎಸ್.ಎಸ್. ಪದವಿ ಕಾಲೇಜು ಪ್ರಾಚಾರ್ಯರಾದ ಡಾ: ಮಹದೇವಸ್ವಾಮಿ, ಎನ್. ತೆರಕಣಾಂಬಿ ಕಾಲೇಜಿನ ಪ್ರೊ: ಗೋವಿಂದ ರಾಜು, ಗುಂಡ್ಲುಪೇಟೆ ಪದವಿ ಕಾಲೇಜಿನ ಪ್ರೊ:ಕೃ.ಪ.ಗಣೇಶ, ವಿದ್ಯಾವರ್ಧಕ ಪದವಿ ಕಾಲೇಜಿನ ಡಾ:ಬಿ.ಟಿ.ರಘು, ಪ್ರೊ: ಕಿರಣ್ ಕೌಶಿಕ್, ಡಾ:ಎಸ್.ಬಿ.ಎಂ. ಪ್ರಸನ್ನ ಹಾಗು ಜ್ಞಾನಬುತ್ತಿ ಪ್ರಧಾನ ಕಾರ್ಯದರ್ಶಿ ಜೈನ ಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿದ್ದರು.

Translate »