ಕಿರುಕುಳದಿಂದ ಆತ್ಮಹತ್ಯೆ ಪ್ರಕರಣ: ನಾಗೇಂದ್ರನ ಮನೆಗೆ ಮಾಜಿ ಶಾಸಕರ ಭೇಟಿ, ಸಾಂತ್ವನ
ಮಂಡ್ಯ

ಕಿರುಕುಳದಿಂದ ಆತ್ಮಹತ್ಯೆ ಪ್ರಕರಣ: ನಾಗೇಂದ್ರನ ಮನೆಗೆ ಮಾಜಿ ಶಾಸಕರ ಭೇಟಿ, ಸಾಂತ್ವನ

August 8, 2018

ಶ್ರೀರಂಗಪಟ್ಟಣ: ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಲೂಕಿನ ಗೊಬ್ಬರಗಾಲ ಗ್ರಾಮದ ನಾಗೇಂದ್ರ ಅವರ ಮನೆಗೆ ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇ ಗೌಡ, ಎಚ್.ಬಿ.ರಾಮು, ಹಾಗೂ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ, ಕಳೆದ ಚುನಾವಣೆ ನಂತರ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಜನರು ಒಂದೇ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಇಲ್ಲಿ ಅಭಿವೃದ್ಧಿಗಿಂತ ದ್ವೇಷದ ರಾಜಕಾರಣವೇ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಕೂಡಲೇ ನಾಗೇಂದ್ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ತಾರತಮ್ಯ ಮಾಡಬಾರದು ಎಂದು ತಿಳಿಸಿದರು.

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಜನತಾ ಪರಿವಾರದಲ್ಲಿದ್ದ ಎಲ್ಲಾ ನಾಯಕರು ಮರಳಿ ಪಕ್ಷಕ್ಕೆ ಬರುವಂತೆ ಕರೆ ನೀಡಿರುವುದು ನನಗೆ ಗೊತ್ತಿಲ್ಲ. ಆದರೆ ಸದ್ಯಕ್ಕೆ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಜೆಡಿಎಸ್ ಸೇರುವ ಉದ್ದೇಶವಿಲ್ಲ. ಬಿಜೆಪಿಗೂ ನಾವು ಸೇರುವುದಿಲ್ಲ, ಇದು ಕೇವಲ ಕಪೋಲಕಲ್ಪಿತ ವಿಚಾರ. ನಾವು 7 ಮಂದಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್‍ನಲ್ಲೇ ಇರುತ್ತೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರ ರಕ್ಷಣೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ನಾವು ಮಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ನಾಗೇಂದ್ರ ಕುಟುಂಬಕ್ಕೆ ಮಾಜಿ ಶಾಸಕರುಗಳು ಆರ್ಥಿಕ ನೆರವು ನೀಡಿದರು.

Translate »