ಸುಳವಾಡಿ ವಿಷ ಪ್ರಸಾದ ಪ್ರಕರಣ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಚಾಮರಾಜನಗರ

ಸುಳವಾಡಿ ವಿಷ ಪ್ರಸಾದ ಪ್ರಕರಣ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

January 29, 2019

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳಿಗೆ ಫೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ ಹಾಗೂ ದೊಡ್ಡಯ್ಯ ನ್ಯಾಯಾಂಗ ಬಂಧನದ ಅವಧಿ ಮಂಗಳವಾರಕ್ಕೆ ಮುಕ್ತಾಯವಾದ ಹಿನ್ನೆಲೆ ಪೊಲೀಸರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಬೆಳಿಗ್ಗೆ 11.30ಕ್ಕೆ ನಗರದ ಜಿಲ್ಲಾ ಪ್ರಧಾನ ಮತ್ತು ಸೆÉಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಬಸವರಾಜ ಎದುರು ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಫೆ.12ರವರೆಗೆ ವಿಸ್ತರಿಸಿ, ಆದೇಶ ನೀಡಿದರು. ವಿಚಾರಣೆ ಕೈಗೆತ್ತಿ ಕೊಂಡ ನ್ಯಾಯಾಧೀಶರು ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರಾ ಎಂದು ಪ್ರಶ್ನಿಸಿದರು. ಆರೋಪಿಗಳು ಹಾಜರಾಗಿರುವುದಾಗಿ ತಿಳಿಸಿದಾಗ, ನಿಮ್ಮ ಪರ ವಕಾಲತ್ತು ವಹಿಸಲು ವಕೀಲರು ಬಂದಿದ್ದಾರೆಯೇ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ, ವಕೀಲರು ಹಾಜರಾಗಿದ್ದಾರೆ ಎಂದರು.

ಈ ವೇಳೆ ನ್ಯಾಯಾಧೀಶರು, ಇಮ್ಮಡಿ ಮಹದೇವಸ್ವಾಮಿ ಪರ ವಕೀಲ ಅಪ್ಪಣ್ಣ, ಸುದೀಶ್ ಮತ್ತು ಲೋಹಿತ್ ಅವರ ಹೆಸರನ್ನು ಸಿಬ್ಬಂದಿ ಮೂಲಕ ಕೂಗಿಸಿದರು. ಆದರೆ ಈ ವೇಳೆ ಯಾವೊಬ್ಬ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಧೀಶರು, ಆಕ್ಷೇಪಣೆ ಸಲ್ಲಿಸುತ್ತೀರಾ ಎಂದು ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ಅಭಿಯೋಜಕಿ ಲೋಲಾಕ್ಷಿ ಅವರು, ಮೂರು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ವಕೀಲರು ಮೊದಲ ಆರೋಪಿಗೆ (ಇಮ್ಮಡಿ ಮಹದೇವಸ್ವಾಮಿ) ಮಾತ್ರ ವಕಾಲತ್ತು ಸಲ್ಲಿಸಿದ್ದಾರೆ. ಉಳಿದ ಂ-2, ಂ-3, ಂ-4 ಆರೋಪಿಗಳಿಗೆ ವಕಾಲತ್ತು ಹಾಕಿಲ್ಲ. ಹೀಗಾಗಿ ನೀವು ವಕೀಲರನ್ನು ನೇಮಿಸಿಕೊಳ್ಳಿ ಎಂದರು. ಇದಕ್ಕೆ ಉತ್ತರಿಸಿದ ಮಾದೇಶ್, ವಕೀಲರು ನಮ್ಮಗಳ ಸಹಿ ಪಡೆದು ಹೋಗಿದ್ದಾರೆ ಎಂದರು. ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ಕೋರಿ ಸಲ್ಲಿಕೆ ಆಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಫೆ.5ರವರೆಗೆ ಕಾಲಾವಕಾಶ ನೀಡಿದರು. ಅಲ್ಲದೆ ಆರೋಪಿಗಳನ್ನು ಫೆ.12ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು.

ಭದ್ರತೆ ದೃಷ್ಟಿಯಿಂದ ಆರೋಪಿಗಳನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸದೇ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದರು. ಸುಳವಾಡಿ ವಿಷ ಪ್ರಸಾದ ಪ್ರಕರಣದಲ್ಲಿ 17 ಮಂದಿ ಮೃತಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

Translate »