ದಾರಿ ಯಾವುದಯ್ಯ ಅಬ್ಬಿಫಾಲ್ಸ್‍ಗೆ…? ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪುತ್ತಿರುವ ಪ್ರವಾಸಿಗರು
ಕೊಡಗು

ದಾರಿ ಯಾವುದಯ್ಯ ಅಬ್ಬಿಫಾಲ್ಸ್‍ಗೆ…? ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪುತ್ತಿರುವ ಪ್ರವಾಸಿಗರು

January 29, 2019

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ಗ್ರಾಮಗಳು ಭೌಗೋಳಿಕವಾಗಿ ಕಣ್ಮರೆಯಾಗಿವೆ. ಬೆಟ್ಟ ಶ್ರೇಣಿಗಳು ಕುಸಿದು ನದಿಗಳು ಹರಿಯುವ ದಿಕ್ಕನ್ನೇ ಬದಲಿಸಿವೆ. ಬೆಟ್ಟಗಳಿಂದ ತೊರೆಯಾಗಿ ಹರಿಯುತ್ತಿದ್ದ ಜಲಧಾರೆಗಳು ಭೂ ಕುಸಿತಕ್ಕೆ ಸಿಲುಕಿ ಜಲಪಾತಗಳಾಗಿ ಮಾರ್ಪಟ್ಟಿವೆ. ಇವು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಕೆಲವು ಗ್ರಾಮಗಳ ವಾಸ್ತವ ಸ್ಥಿತಿ.

ಆದರೆ ಮಡಿಕೇರಿಯಿಂದ 18ಕಿ.ಮೀ. ದೂರದಲ್ಲಿರುವ ಮರಗೋಡು ಹೊಸ್ಕೇರಿ ಗ್ರಾಮದಲ್ಲಿ ಯಾವುದೇ ಪ್ರಕೃತಿ ವಿಕೋಪ ಘಟಿಸಿಲ್ಲ. ಯಾವುದೇ ಬೆಟ್ಟ ಶ್ರೇಣಿಗಳೂ ಕುಸಿದು ಬಿದ್ದಿಲ್ಲ. ಹೀಗಿದ್ದರೂ ಕೂಡ ಹೊಸ್ಕೇರಿ ಗ್ರಾಮದಲ್ಲಿ ಅಬ್ಬಿಫಾಲ್ಸ್ ಸೃಷ್ಟಿಯಾಗಿದೆ. ಹೊಸದಾಗಿ ಸೃಷ್ಟಿಯಾದ ಅಬ್ಬಿ ಫಾಲ್ಸ್‍ನ್ನು ನೋಡಲು ನೂರಾರು ವಾಹನಗಳಲ್ಲಿ ಸಹಸ್ರ ಸಂಖ್ಯೆಯ ಪ್ರವಾಸಿಗರು ಈ ಗ್ರಾಮಕ್ಕೆ ಬರುತ್ತಿದ್ದಾರೆ.

ಮಡಿಕೇರಿಯಿಂದ ಗೂಗಲ್ ಮ್ಯಾಪ್ ನೋಡಿಕೊಂಡು ಅಬ್ಬಿಫಾಲ್ಸ್‍ಗೆ ತೆರಳುವ ಪ್ರವಾಸಿಗರು ನೇರವಾಗಿ ಹೊಸ್ಕೇರಿ ಗ್ರಾಮದ ವಿಷ್ಣುಮೂರ್ತಿ ಕುಟ್ಟಿಚಾತನ್ ದೇವಾಲಯದ ಕಮಾನಿನವರೆಗೆ ಬಂದು ಅಬ್ಬಿಫಾಲ್ಸ್‍ಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಗ್ರಾಮದಲ್ಲಿ ಯಾವುದೇ ಜಲಪಾತ ಇಲ್ಲ ಎಂದು ಗ್ರಾಮಸ್ಥರು ಹೇಳಿದ ಬಳಿಕ ನಿರಾಶೆಯಿಂದ ಮತ್ತೆ ಮಡಿಕೇರಿ ಕಡೆಗೆ ಮರಳುತ್ತಾರೆ. ಹಾಗಾದರೆ ಇದು ಹೊಸ್ಕೇ ರಿಯ ಕುಟ್ಟಿಚಾತನ್ ದೇವರು ಮಾಡಿದ ಚಮತ್ಕಾರವೇ ಅಂದರೆ, ಖಂಡಿತ ಅಲ್ಲ. ಇದು ಗೂಗಲ್ ಮ್ಯಾಪ್‍ನಲ್ಲಿ ಕಂಡು ಬಂದಿರುವ ಪ್ರಮಾದ. ಗೂಗಲ್ ಮ್ಯಾಪ್‍ನಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷದಿಂದ ಪ್ರವಾಸಿಗರು ದಿಕ್ಕು ತಪ್ಪಿ, ಹೊಸ್ಕೇರಿ ಗ್ರಾಮದ ಕಡೆ ತೆರಳುವಂತಾಗಿದೆ.

ಮಡಿಕೇರಿಯಿಂದ 8 ಕಿ.ಮೀ. ದೂರ ದಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿಸರ್ಗ ಸೊಬಗಿನ ಅಬ್ಬಿಫಾಲ್ಸ್ ಇದೆ. ಈ ಜಲ ಪಾತ ಪ್ರಕೃತಿ ದತ್ತವಾಗಿ ಮೈದಳೆದು ಯುಗ ಗಳೇ ಕಳೆದಿದೆ. ಈ ಜಲಪಾತವನ್ನು ಬ್ರಿಟಿ ಷರ ಕಾಲದಲ್ಲಿಯೇ ಕಂಡು ಹಿಡಿದಿರು ವುದು ಇತಿಹಾಸ ಪುಟಗಳಲ್ಲಿ ದಾಖಲಾ ಗಿದೆ. ಆದರೆ ಮೊದಲ ಬಾರಿಗೆ ಅಬ್ಬಿ ಫಾಲ್ಸ್ ನೋಡಲು ಬರುವ ಪ್ರವಾಸಿಗರು ಕಳೆದ ತಿಂಗಳಿಂದ ನಿಡುಗಣೆ ಗ್ರಾಮದ ಕಡೆ ಬರುವ ಬದಲು, ಮರಗೋಡು ಹೊಸ್ಕೇರಿ ಗ್ರಾಮದ ಕಡೆಗೆ ತೆರಳುತ್ತಿದ್ದಾರೆ.

ಹೊರ ಊರುಗಳಿಂದ ಬರುವ ಪ್ರವಾಸಿ ಗರು ತಮ್ಮ ಮೊಬೈಲ್‍ನಲ್ಲಿ ಗೂಗಲ್ ಮ್ಯಾಪ್ ಮೂಲಕ ಅಬ್ಬಿಫಾಲ್ಸ್‍ಗೆ ದಾರಿ ಹುಡುಕಿ ಕೊಂಡು ವಾಹನ ಸವಾರಿ ಮಾಡುತ್ತಾರೆ. ಆದರೆ ಗೂಗಲ್ ಮ್ಯಾಪ್‍ನಲ್ಲಿ ಮಡಿ ಕೇರಿಯವರೆಗೆ ಬರುವ ಪ್ರವಾಸಿಗರು ಬಳಿಕ ಸಿದ್ದಾಪುರ ರಸ್ತೆ-ಕಡಗದಾಳು-ಹುಲಿತಾಳ ಮಾರ್ಗವಾಗಿ ಹೊಸ್ಕೇರಿ ಕಡೆ ತೆರಳಿ ಅಲ್ಲಿನ ವಿಷ್ಣು ಮೂರ್ತಿ ಕುಟ್ಟಿಚಾತನ್ ದೇವಾಲಯದ ಪ್ರವೇಶ ದ್ವಾರದಲ್ಲಿ ನಿಂತು ಅಬ್ಬಿಫಾಲ್ಸ್‍ಗಾಗಿ ಹುಡುಕಾಡುತ್ತಿದ್ದಾರೆ. ಗೂಗಲ್ ಮ್ಯಾಪ್‍ನ ತಾಂತ್ರಿಕ ದೋಷವೋ ಅಥವಾ ಯಾರಾದರು ಕಿಡಿಗೇಡಿಗಳು ಅಬ್ಬಿಫಾಲ್ಸ್ ರಸ್ತೆಯ ನಕ್ಷೆಯನ್ನು ಗೂಗಲ್ ನಲ್ಲಿ ಹ್ಯಾಕ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಮಡಿಕೇರಿಯಿಂದ ಗೂಗಲ್ ಮ್ಯಾಪ್ ಆನ್ ಮಾಡಿ ಅಬ್ಬಿ ಜಲಪಾತಕ್ಕೆ ದಾರಿ ಹುಡುಕಿದರೆ ಮಡಿಕೇರಿಯಿಂದ 19 ಕಿ.ಮಿ. ದೂರ, 36 ನಿಮಿಷ ಪಯಣ ಸಮಯ ಎಂದು ಗೂಗಲ್ ತೋರಿಸುತ್ತಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ.

ಈ ಕುರಿತು ‘ಮೈಸೂರು ‘ ಮಿತ್ರನೊಂದಿಗೆ ಕೆಲ ಪ್ರವಾಸಿಗಳು ತಮ್ಮ ಅನುಭವ ಹಂಚಿ ಕೊಂಡ ಹಿನ್ನೆಲೆಯಲ್ಲಿ ‘ಮೈಸೂರು ಮಿತ್ರ’ ಗೂಗಲ್ ಮ್ಯಾಪ್ ಆಧರಿಸಿ ಅಭ್ಬಿ ಫಾಲ್ಸ್‍ಗೆ ತೆರಳಿದಾಗ ಮುಂದೆ ಸಿಕ್ಕಿದ ಊರೇ ಹೊಸ್ಕೇರಿ ಗ್ರಾಮ. ಹೊಸ್ಕೇರಿ ವಿಷ್ಣುಮೂರ್ತಿ ಕುಟ್ಟಿಚಾತನ್ ದೇವಾಯದ ಪ್ರವೇಶ ದ್ವಾರದಲ್ಲಿ ಅಬ್ಬಿಫಾಲ್ಸ್ ಪಾಯಿಂಟ್ ಕೂಡ ತೋರಿಸುತ್ತಿದ್ದು, 0 ಕಿ.ಮಿ. 0 ನಿಮಿಷ ಎಂದು ಮ್ಯಾಪ್ ಗೈಡ್ ಮಾಡುತ್ತದೆ. ಆ ಹೊತ್ತಿಗಾಗಲೇ ಮಧ್ಯಪ್ರದೇಶ, ಮುಂಬೈ, ಕೇರಳ, ಬೆಂಗಳೂರು, ತಲಚೇರಿಯ ನೂರಾರು ಪ್ರವಾಸಿಗರು ಹೊಸ್ಕೇರಿ ಗ್ರಾಮಕ್ಕೆ ಬಂದು ಅಬ್ಬಿಫಾಲ್ಸ್‍ಗಾಗಿ ತಡಕಾಡುತ್ತಿರುವುದು ಕಂಡು ಬಂತು. ಪ್ರವಾಸಿಗರಿಗೆ ಗೂಗಲ್ ಮ್ಯಾಪ್‍ನ ದೋಷ ವಿವರಿಸಿದ ಬಳಿಕ ಗೂಗಲ್ ಮ್ಯಾಪ್‍ಗೆ ಹಿಡಿಶಾಪ ಹಾಕಿದ ಹೊರ ಊರ ಅತಿಥಿಗಳು, ಸಪ್ಪೆ ಮೋರೆ ಹಾಕಿಕೊಂಡು ಅಬ್ಬಿಫಾಲ್ಸ್ ಇರುವ ಗ್ರಾಮಕ್ಕೆ ತೆರಳುವ ಮಾರ್ಗವನ್ನು ತಿಳಿದುಕೊಂಡು ಅತ್ತ ತೆರ ಳಿದರು.

ಮಡಿಕೇರಿಯಿಂದ ಹೊಸ್ಕೇರಿ 18 ಕಿ.ಮಿ ದೂರವಿದ್ದು ಹೊಸ್ಕೇರಿಯಿಂದ ಮತ್ತೆ ಕರ್ಣಂಗೇರಿ ಅಬ್ಬಿಫಾಲ್ಸ್‍ಗೆ ತೆರಳಲು ಒಟ್ಟು 44 ಕಿ.ಮೀ. ಅಂತರವನ್ನು ಪ್ರವಾ ಸಿಗರು ಅನಾವಶ್ಯಕವಾಗಿ ಕ್ರಮಿಸುವಂತಾ ಗುತ್ತಿದೆ. ಈ ಕುರಿತು ರಾಜ್ಯ ಪ್ರವಾಸೋ ದ್ಯಮ ಇಲಾಖೆ ಮತ್ತು ಗೂಗಲ್ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಸ್ಥರು ಮತ್ತು ಪ್ರವಾಸಿಗರು ‘ಮೈಸೂರು ಮಿತ್ರ’ ನೊಂದಿಗೆ ಒತ್ತಾಯಿಸಿದ್ದಾರೆ.

– ಪ್ರಸಾದ್ ಸಂಪಿಗೆಕಟ್ಟೆ

Translate »