ಮಂಡ್ಯ ಸ್ವಾಭಿಮಾನದ ಭಿಕ್ಷೆ ಕೊಡಿ
ಮೈಸೂರು

ಮಂಡ್ಯ ಸ್ವಾಭಿಮಾನದ ಭಿಕ್ಷೆ ಕೊಡಿ

April 17, 2019

ಮಂಡ್ಯ: ಸೆರಗೊಡ್ಡಿ ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಬೇಡುತ್ತಿದ್ದೇನೆ. ಮಂಡ್ಯದ ಸ್ವಾಭಿಮಾನವನ್ನು ಉಳಿಸಿ. ಮಂಡ್ಯವನ್ನು ವಾಪಸ್ ಕೊಡಿ. ನಿಮ್ಮನ್ನೇ ನಂಬಿದ್ದೇನೆ. ನೀವು ಕೈಬಿಡಲ್ಲ ಎಂಬ ನಂಬಿಕೆ ಇದೆ… ಹೀಗೆ ಭಾವೋದ್ವೇಗದಿಂದ ಮಾತನಾಡಿ ದವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್.

ರಾಜ್ಯದಲ್ಲಿನ ಮೊದಲ ಹಂತದ ಚುನಾ ವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಮಂಗಳವಾರ ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಉದ್ಯಾನವನದಲ್ಲಿನ ಬೃಹತ್ ವೇದಿಕೆಯಲ್ಲಿ ಕಡೆಯವರಾಗಿ ತುಸು ಭಾವುಕ ರಾಗಿಯೇ ಮಾತು
ಆರಂಭಿಸಿದ ಅವರು, 25 ನಿಮಿಷಗಳ ಭಾಷಣವನ್ನು ಕಣ್ಣೀರು ಹಾಕುತ್ತಲೇ ಮುಕ್ತಾಯಗೊಳಿಸಿದರು. ದುಃಖ, ಆಕ್ರೋಶ, ಮೆಚ್ಚುಗೆ, ಬೇಸರ ಭಾವಗಳು ಅವರ ಮಾತುಗಳಲ್ಲಿ ವ್ಯಕ್ತವಾದವು.

ನೀವು ನನಗೆ ಇಂದು ಸ್ವಾಭಿಮಾನದ ಭಿಕ್ಷೆ ಕೊಡಿ. ದುಡ್ಡಿನ ಆಸೆಗಾಗಿ ಮೋಸ ಹೋಗ್ಬೇಡಿ. ಹಣದ ರಾಜಕಾರಣ ಬೇಡ. ಮಂಡ್ಯದ ಜನ ಪ್ರಾಣ ಬಿಟ್ರೂ ಸ್ವಾಭಿಮಾನ ಬಿಡಬಾರದು. ಈ ಜಿಲ್ಲೆಯ ಸ್ವಾಭಿಮಾನದ ಭಿಕ್ಷೆ ನನಗೆ ವಾಪಸ್ ಕೊಡಿ. ಅಂಬರೀಶ್ ಅವರ ಪತ್ನಿಯಾದ ನನಗೂ ಒಂದು ಅವಕಾಶ ಕೊಡಿ ಎಂದು ತಮ್ಮ ಸೀರೆಯ ಸೆರಗನ್ನು ಮುಂದೊಡ್ಡಿದರು.

ದೇವರನ್ನು ಕಂಡೆ: ಮಂಡ್ಯದ ಸ್ವಾಭಿಮಾನಿ ಜನರೇ ನಿಮಗೆಲ್ಲ ನನ್ನ ಹೃತ್ಪೂರ್ವಕ ನಮಸ್ಕಾರ. ಇವತ್ತು ಸ್ವಾಭಿಮಾನದ ಸಮ್ಮಿಲನದ ದಿನ. 4 ವಾರದ ಹಿಂದೆ ಇದೇ ವೇದಿಕೆಯಲ್ಲಿ ನಿಂತಿದ್ದೆ. ಅವತ್ತು ಏನಾಗಿದ್ದೆ? ಇವತ್ತು ಏನಾಗಿದ್ದೇನೆ? ಈ 4 ವಾರಗಳಲ್ಲಿ ಮಂಡ್ಯದ ಜನರಲ್ಲಿ ನಾನು ದೇವರನ್ನು ನೋಡಿದೆ ಎಂದೇ ಸುಮಲತಾ ಅಂಬರೀಶ್ ಮಾತು ಆರಂಭಿಸಿದರು. ಅದೇ ವೇಳೆ ರಾಜಕಾರಣಿಗಳಲ್ಲಿ ರಾಕ್ಷಸತ್ವವನ್ನು ನೋಡಿದೆ. ನಿಜವಾಗಲೂ ಬೇಸರವಾಗುತ್ತದೆ.

ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಅಂಬರೀಶ್ ಎಲ್ಲೂ ಹೋಗಿಲ್ಲ. ನಿಮ್ಮ ಪ್ರೀತಿಯಲ್ಲೇ ಇದ್ದಾರೆ, ನಿಮ್ಮ ಜತೆಗೇ ಇದ್ದಾರೆ. ಅಂಬರೀಶ್ ಅವರನ್ನು ನೀವು ಈಗಲೂ ಜೀವಂತ ಇಟ್ಟಿದ್ದೀರಿ. ಅದಕ್ಕೆ ನಿಮ್ಮೆಲ್ಲರ ಪ್ರೀತಿಯೇ ಕಾರಣ. ಇದೇ ಪ್ರೀತಿಗಾಗಿಯೇ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಹೆದರದೇ ನನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮೊದಲು ಧನ್ಯವಾದ ಹೇಳುತ್ತೇನೆ ಎಂದರು.

ಕಳೆದ 4 ವಾರಗಳ ಸುತ್ತಾಟದ ವೇಳೆ ಜಿಲ್ಲೆಯ ಕೆಲವೆಡೆ ಜನರು ಹಾಳಾದ ರಸ್ತೆಗಳನ್ನು, ನೀರಿಲ್ಲದ ಕೆರೆಗಳನ್ನು ತೋರಿಸಿದರು. ನಿಮ್ಮಿಂದಲಾದರೂ ನಮ್ಮ ಸಮಸ್ಯೆಗಳು ಬಗೆಹರಿಯಬೇಕು ಎಂದರು. ಜನರ ಒತ್ತಾಯಕ್ಕಾಗಿ, ಅವರ ಅಭಿಮಾನಕ್ಕಾಗಿ ಚುನಾವಣೆಗೆ ನಿಂತೆ. ನಾನು ಎಲೆಕ್ಷನ್‍ಗೆ ನಿಂತಿದ್ದೇ ತಪ್ಪಾ? ನಾಮಪತ್ರ ಸಲ್ಲಿಸುವ ದಿನ ಕರೆಂಟ್, ಟಿವಿ ಕೇಬಲ್ ಕಟ್ ಮಾಡಿಸಿದರು. ಇವತ್ತೂ ಅದೇ ಕಥೆ. ಒಬ್ಬ ಮಹಿಳೆಗೆ ಹೆದರಿಕೊಂಡು ಹೀಗೆಲ್ಲಾ ಮಾಡುತ್ತೀರಾ? ದ್ವೇಷದ ರಾಜಕಾರಣ ಇಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬಂದಿದೆ ಎಂಬ ಕಾರಣಕ್ಕೆ ಆ ಹಳ್ಳಿಗಳಲ್ಲಿ ಸರಕಾರಿ ಕೆಲಸಗಳೇ ನಡೆಯುತ್ತಿಲ್ಲ ಎಂದು ಎದುರಾಳಿಗಳ ಮೇರೆ ಕಿಡಿಕಾರಿದರು.

ಭಯಾನಾ?: ನಾಮಪತ್ರ ಸಲ್ಲಿಸುವ ದಿನವೂ ವಿದ್ಯುತ್ ಮತ್ತು ಕೇಬಲ್ ತೆಗೆಸಿದ್ರು ಇವತ್ತೂ ಅದನ್ನೇ ಮಾಡಿದ್ದಾರೆ. ಹಾಗಾದ್ರೆ ನನ್ನ ಬಗ್ಗೆ ಅಷ್ಟೂ ಭಯನಾ? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬರುತ್ತಾರೆ, ಆಂಧ್ರದಿಂದ ಚಂದ್ರಬಾಬು ನಾಯ್ಡು ಬರುತ್ತಾರೆ, ಕಾಂಗ್ರೆಸ್ ರಾಜ್ಯ ನಾಯಕರು ಬರುತ್ತಾರೆ. ಇವೆಲ್ಲಾ ಕೇವಲ ಸುಮಲತಾ ಅಂಬರೀಷ್ ಅವರನ್ನು ಎದುರಿಸಲು ಅನ್ನೋದೆ ವಿಪರ್ಯಾಸ.

ನಿಮಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ನಿಮಗೆ ದೇಶದ ಗಡಿ ಕಾಯುವ ಯೋಧರ ಬಗ್ಗೆ ಗೌರವವಿಲ್ಲ. ಎದುರಾಳಿಗೆ ಗೌರವವನ್ನು ಕೊಡುವುದನ್ನು ನೀವು ಕಲಿಯಬೇಕು. ಸಿನಿಮಾದವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ. ಎದುರಾಳಿ ಅಭ್ಯರ್ಥಿಯೂ ಸಿನೇಮಾ ರಂಗಕ್ಕೆ ಸೇರಿದವರು ಎಂಬುದನ್ನು ಮರೆಯಬಾರದು. ದರ್ಶನ್, ಯಶ್ ನನಗಾಗಿ ಧೂಳು, ಬಿಸಿಲಿನಲ್ಲಿ ಪ್ರಚಾರ ಮಾಡಿದ್ದಾರೆ. ಯಾವುದೇ ಸಬೂಬುಗಳನ್ನು ಅವರು ಹೇಳಿಲ್ಲ. ಅಸಾಂವಿಧಾನಿಕ ಪದ ಬಳಕೆ ಮಾಡಿ ರಾಜಕಾರಣ ಮಾಡಬೇಕಿಲ್ಲ. ಸಭ್ಯತೆ, ಸಂಸ್ಕೃತಿ ನನಗೆ ಮೊದಲಿನಿಂದಲೂ ಬಂದಿದೆ, ಅದು ನನ್ನ ಗುಣ.

ರಾಜ್ಯ ರೈತ ಸಂಘದವರು, ಕಾಂಗ್ರೆಸ್‍ನವರು, ಜೆಡಿಎಸ್‍ನವರು, ಬಿಜೆಪಿಯವರು, ದಲಿತ ಸಂಘಟನೆಗಳವರು, ಮುಸ್ಲಿಂ ಸಮುದಾಯದ ಮುಖಂಡರು ಇಷ್ಟು ದಿವಸ ನನ್ನ ಬೆನ್ನೆಲುಬಾಗಿ ನಿಂತರು. ಅವರಿಗೆಲ್ಲಾ ನಾನು ಧನ್ಯವಾದ ಅರ್ಪಿಸುವೆ. ದರ್ಶನ್, ಯಶ್ ಅವರಿಬ್ಬರಿಗೂ ಧನ್ಯವಾದ ಹೇಳುವುದಿಲ್ಲ. ಏಕೆಂದರೆ, ಅವರು ಮನೆ ಮಕ್ಕಳು. ಅವರಿಗೆ ನನ್ನ ಪ್ರೀತಿಯ ಆಶೀರ್ವಾದ ಎಂದು ಮಾತು ಕೊನೆಗೊಳಿಸಿದರು.
ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಸಾವಿರಾರು ಮಂದಿ ಹಾಜರಿದ್ದು ಸುಮಲತಾ ಅವರಿಗೆ ಬೆಂಬಲ ಸೂಚಿಸಿದರು.

Translate »