ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಬಹಿರಂಗ ಪ್ರಚಾರಕ್ಕೆ ತೆರೆ

April 17, 2019

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆಬಿತ್ತು.

ಏಪ್ರಿಲ್ 18 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಅಂತ್ಯಗೊಳ್ಳುವ 48 ಗಂಟೆ ಮುಂಚಿತವಾಗಿ, ಅಂದರೆ ಇಂದು ಸಂಜೆ 6 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡಿತು.

ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಮೊದಲ ಹಂತದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಎಲ್ಲಾ 14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಸಂಜೆ ಬಹಿರಂಗ ಚುನಾವಣಾ ಪ್ರಚಾರ ಸಭೆ, ರೋಡ್ ಶೋಗಳನ್ನು ಕೊನೆಗಾಣಿಸಿದರು. ಸಹಾಯಕ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ಟೀಂ, ವಿಡಿಯೋ ವೀವಿಂಗ್ ಸ್ಕ್ವಾಡ್ ಅಧಿಕಾರಿಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಸೂಚಿಸಿದರು.

ನಾಳೆ (ಏ.17) ಮನೆ-ಮನೆಗೆ ತೆರಳಿ ನಾಲ್ವ ರೊಂದಿಗೆ ಅಭ್ಯರ್ಥಿಗಳು ಮತಯಾಚನೆ ಮಾಡ ಬಹುದೇ ಹೊರತು, ರೋಡ್ ಶೋ, ಬಹಿರಂಗ ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವಂತಿಲ್ಲ. ಹಾಗಾಗಿ ಐವರ ಗುಂಪಾಗಿ ಕ್ಷೇತ್ರಾದ್ಯಂತ ಕಾಲ್ನಡಿಗೆಯಲ್ಲಿ ಮತದಾರನ ಸೆಳೆಯಲು ಅಭ್ಯರ್ಥಿ ಗಳು ಅಂತಿಮ ಹಂತದ ಕಸರತ್ತು ನಡೆಸುವರು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಮೈಸೂರಿನ ಎನ್‍ಆರ್ ವಿಧಾನಸಭಾ ಕ್ಷೇತ್ರದಾದ್ಯಂತ ಬೆಂಬಲಿಗರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತ ಪ್ರಚಾರ ನಡೆಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ಮಡಿಕೇರಿ ಹಾಗೂ ವಿರಾಜಪೇಟೆ ಸುತ್ತಮುತ್ತ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಇಂದು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಅಂತಿಮ ಹಂತದ ಪ್ರಚಾರ ಮಾಡಿದರು.

ಕ್ಷೇತ್ರ ಬಿಡಬೇಕು: ಇಂದು ಸಂಜೆ 6 ಗಂಟೆ ನಂತರ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕ್ಷೇತ್ರದ ಮತದಾರರಲ್ಲದವರು. ಕಲ್ಯಾಣ ಮಂಟಪ, ಸಮುದಾಯ ಭವನ, ವಸತಿ ಗೃಹಗಳು, ಅತಿಥಿ ಗೃಹಗಳಲ್ಲಿ ವಾಸವಿರುವ ಪ್ರಚಾರಕ್ಕಾಗಿ ಬಂದ ಹೊರಗಿನವರು ಕ್ಷೇತ್ರ ಬಿಟ್ಟು ಹೊರಡುವಂತೆ ಸೂಚಿಸಲಾಗಿದೆ.

Translate »