ಅಂಬಿ ಸಮಾಧಿ ಮೇಲೆ ನಿಮ್ಮ ಮಗನ ರಾಜಕೀಯದ ಬುನಾದಿಯೇ?
ಮಂಡ್ಯ

ಅಂಬಿ ಸಮಾಧಿ ಮೇಲೆ ನಿಮ್ಮ ಮಗನ ರಾಜಕೀಯದ ಬುನಾದಿಯೇ?

April 17, 2019

ಮುಖ್ಯಮಂತ್ರಿ ಹೆಚ್‍ಡಿಕೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ತರಾಟೆ
ಮಂಡ್ಯ: ಅಂಬರೀಶ್ ಅವರ ಸಮಾಧಿ ಮೇಲೆ ನಿಮ್ಮ ಮಗನ ರಾಜಕೀಯ ಭವಿಷ್ಯದ ಬುನಾದಿ ನಿರ್ಮಿಸಲು ಹೊರಟಿದ್ದೀರಾ? ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಮಂಗಳವಾರ ಸ್ವಾಭಿಮಾನ ಸಮಾವೇಶ ದಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಿದ್ದು ನಾನು ಎಂದು ಹೇಳುತ್ತಲೇ ಇದ್ದಾರೆ. ಈ ವಿಚಾರವನ್ನು ಪದೇ ಪದೆ ಹೇಳುತ್ತಾ ನನ್ನಲ್ಲಿ ನೋವು ತರಿಸುವ ಯತ್ನ ಮಾಡು ತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ಅಂದು ನಾನು ಹಾಕಿದ ಕಣ್ಣೀರಿನಲ್ಲಿ ನೋವಿತ್ತು ಆದರೆ ಇವತ್ತು ನನ್ನ ಕಣ್ಣಿನಲ್ಲಿ ಬರುವ ನೀರಿನಲ್ಲಿ ಧೈರ್ಯ ಇದೆ ಎಂದರು.

ಅಂಬರೀಶ್ ಅವರ ಸಮಾಧಿ ಮೇಲೆ ನಿಮ್ಮ ಮಗನ ರಾಜಕಾರಣ ಮಾಡಲು ಹೊರಟಿದ್ದೀರಾ? ಇದೆಂತಹಾ ರಾಜಕಾರಣ. ಅಂತ್ಯಕ್ರಿಯೆ ವಿಚಾರವನ್ನು ನೀವು ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ ಎಂಬುದು ಅವತ್ತೇ ಗೊತ್ತಾಗಿದ್ದಿದ್ದರೆ ಅವತ್ತೇ ಯಶ್ ಮತ್ತು ದರ್ಶನ್ ಮುಂದೆ ಬರುತ್ತಿದ್ದರು. ಇಡೀ ಚಿತ್ರರಂಗವೇ ಬರುತ್ತಿತ್ತು. ಮಂಡ್ಯದ ಜನರ ಆಶಯ ಈಡೇರಿಸುತ್ತಿತ್ತು ಎಂದರು.

ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದು ಕೊಂಡು ಹೋಗಲು ನಾನೇ ಕಾರಣ ಅಂತ ಅವರು ಹೇಳಿಕೊಳ್ಳುತ್ತಿದ್ದಾರೆ. ಅಂಬರೀಶ್ ಅವರೇನು ‘ಝೀರೋ’ ನಾ? ಅವರಿಗೇನು ಅರ್ಹತೆ ಇರಲಿಲ್ಲವಾ? ಎಂದು ಖಾರವಾಗಿ ಪ್ರಶ್ನಿಸಿದರು.
ಅಂದು ಶ್ರದ್ಧಾಂಜಲಿ ಸಭೆಗೆ ಬಂದಿದ್ದ ಮುಖ್ಯಮಂತ್ರಿ ಯವರು ನನಗೆ ಸಮಾಧಾನ ಮಾಡುತ್ತ ‘ನಾನು ನಿಮ್ಮ ಸಹೋದರ ಇದ್ದಂತೆ’ ಎಂದು ಹೇಳಿದವರು ಈಗ ಇವರು ಮಾಡುತ್ತಿರುವುದೇನು? ಪತಿಯನ್ನು ಕಳೆದುಕೊಂಡ ಪತ್ನಿ ಕಣ್ಣೀರು ಹಾಕಿದರೆ ಅದು ಡ್ರಾಮಾ ಅಂತೆ, ಆದರೆ ಚುನಾವಣಾ ಪ್ರಚಾರಕ್ಕೆ ಬಂದು ಅಲ್ಲಿ ಕಣ್ಣೀರು ಹಾಕಿ ದರೆ ಅದಕ್ಕೆ ಏನು ಹೇಳ್ಬೇಕು? ಎಂದು ಕಿಡಿಕಾರಿದರು.

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರವನ್ನು ತರಬೇಕೆಂದು ಹೇಳಿದ್ದು ನಾನೇ ಎಂದು ನಿಖಿಲ್ ಹೇಳಿಕೊಂಡಿದ್ದರು. ಅದು ಬರೀ ಸುಳ್ಳು. ಅದನ್ನು ಹೇಳಿದ್ದು ನನ್ನ ಪುತ್ರ ಅಭಿ ಮತ್ತು ಇತರೆ ನಾಯಕರು ಎಂದು ಸ್ಪಷ್ಟಪಡಿಸಿದರು. ಇದನ್ನು ನಾನು ಹೇಳಬಾರ ದಿತ್ತು. ಆದರೆ ಈ ರೀತಿ ಹೇಳುವಂತೆ ಒತ್ತಡ ಮಾಡಿದ್ದೇ ಅವರು ಎಂದು ಸಿಎಂ ಕಡೆಗೆ ಬೊಟ್ಟು ಮಾಡಿದರು.

Translate »