ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ
ಮೈಸೂರು

ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ

March 19, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಮಾರ್ಚ್ 20ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಇದರೊಂದಿಗೆ ಸುಮ ಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಇಂದು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಿಕ್ಕಿ ರಿದ ಪತ್ರಿಕಾಗೋಷ್ಠಿಯಲ್ಲಿ ಅವರು ತೆರೆ ಎಳೆದರು.
ಮಂಡ್ಯದ ಮತದಾರರ ಹಾಗೂ ಅಂಬರೀಷ್ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಸುಮಲತಾ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾಗುವ ರೀತಿ ಯಲ್ಲಿ ನನ್ನ ಸ್ಪರ್ಧೆ ಇರಬೇಕು ಎಂಬುದು ನನ್ನ ಬಯಕೆ ಯಾಗಿದೆ. ಹಾಗಾಗಿ ಯಾರೂ ಕೂಡ ವೈಯಕ್ತಿಕ ಆರೋಪಗಳು, ಕೀಳುಮಟ್ಟದ ಪ್ರಚಾರ ತಂತ್ರಗಳನ್ನು ಎದುರಾಳಿಗಳ ವಿರುದ್ಧ ಬಳಸದಂತೆ ಸುಮಲತಾ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಚುನಾವಣೆಗೆ ಸ್ಪರ್ಧಿಸುವ ಮುನ್ನ ಕ್ಷೇತ್ರದ ಬಹು ತೇಕ ಹಳ್ಳಿಗಳಿಗೆ ಭೇಟಿ ನೀಡಿ, ಸಾವಿರಾರು ಜನರ ಅಭಿಪ್ರಾಯ ಮತ್ತು ಅಭಿಮಾನಿಗಳ ಆಣತಿಗೆ ಮಣಿದು, ಇಂತಹ ನಿರ್ಧಾರ ಕೈಗೊಂಡಿದ್ದೇನೆ. ಪ್ರವಾಸ ಸಂದರ್ಭ ದಲ್ಲಿ ಅಂಬರೀಷ್ ಬಿಟ್ಟುಹೋದ ಕನಸುಗಳನ್ನು ನೀವು ಈಡೇರಿಸಬೇಕು ಎನ್ನುವುದು ಅವರ ಒತ್ತಾಸೆಯಾಗಿತ್ತು. ಅಂಬರೀಷ್ ತೀರಿಹೋದ ಸಂದರ್ಭದಲ್ಲಿ ನಾನು ಕತ್ತಲೆಯಲ್ಲಿದ್ದ ಮನಸ್ಥಿತಿಯಲ್ಲಿದ್ದೆ.ಈ ಜೀವನದಲ್ಲೇನಿದೆ ಎಂಬ ಭಾವನೆ ಶುರುವಾಗಿತ್ತು. ಇಂತಹ ಸಂದರ್ಭದಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕೆ, ಇಲ್ಲವೇ ಮುಳ್ಳಿನ ಹಾದಿಯಲ್ಲಿ ನಡೆಯಬೇಕೇ ಎಂಬ ದ್ವಂದ್ವದಲ್ಲಿದ್ದೆ. ಇಂತಹ ಸಂದರ್ಭದಲ್ಲಿ ನನ್ನ ಮನೆಯ ಮಕ್ಕಳಂತಿರುವ ನಟ ದರ್ಶನ್, ಯಶ್ ಮತ್ತಿತರರು ಜಿಲ್ಲಾ ಜನರ ಮಾತಿಗೆ ಮನ್ನಣೆ ನೀಡಿ ಅಣ್ಣನ ಕನಸ್ಸನ್ನು ಈಡೇರಿಸೋಣ ಎಂದರು. ನಂತರ ಸ್ವತಂತ್ರ ನಿರ್ಧಾರ ಕೈಗೊಳ್ಳಲಾಗದೆ ಜನರು ಮತ್ತು ಅಭಿಮಾನಿಗಳ ವಿಶ್ವಾಸ ಗಳಿಸಲು ಒಂದೆರಡು ಬಾರಿ ಮಂಡ್ಯ ಜಿಲ್ಲಾ ಪ್ರವಾಸ ಮಾಡಿದೆ.

ಈ ಸಂದರ್ಭದಲ್ಲಿ ಅವರಿಂದ ಬಂದ ಭಾವನೆಗಳಿಗೆ ಸ್ಪಂದಿಸಿ, ಚುನಾವಣೆಗೆ ನಿಲ್ಲುವ ನಿರ್ಧಾರ ಕೈಗೊಂಡೆ. ಅಂಬರೀಷ್ ಅವರು ಯಾವತ್ತೂ ನಾನು, ನನ್ನ ಕುಟುಂಬ ಎನ್ನಲಿಲ್ಲ. ಅವರ ಸುತ್ತ ಯಾವಾಗಲೂ ಸ್ನೇಹಿತರ ಬಳಗವಿರುತ್ತಿತ್ತು. ಅಂಬಿ ಇಲ್ಲದಿದ್ದರೂ ಅದೇ ಪ್ರೀತಿ-ವಿಶ್ವಾಸವನ್ನು ಜನ ಇಟ್ಟುಕೊಂಡಿದ್ದಾರೆ. ಅವರ ಪ್ರೀತಿಗೆ ನಾನು ಬೆಲೆ ಕೊಡದಿದ್ದರೆ ಸರಿಯಿರಲ್ಲ ಎಂದುಕೊಂಡಿದ್ದೆ. ಹಾಗಾಗಿ ರಾಜಕೀಯ ಪ್ರವೇಶದಂತಹ ಕಠಿಣ ದಾರಿ ತುಳಿಯುತ್ತಿದ್ದೇನೆ. ಇದರ ಹಿಂದೆ ಇನ್ಯಾವ ಅನ್ಯ ಉದ್ದೇಶಗಳಿಲ್ಲ. ಯಾರ ಮನಸ್ಸಿಗೂ ನೋವುಂಟು ಮಾಡಲು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನನ್ನ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ. ಅಂಬಿ ಸ್ಥಾನದಲ್ಲಿ ನನ್ನನ್ನು ನೋಡಲು ಬಯಸಿದ್ದರು. ನಿಮ್ಮ ಸೇವೆ ನಮಗೆ ಬೇಕಿದೆ ಎಂದು ಅಂಬಿ ಅಭಿಮಾನಿಗಳು ಕೇಳಿಕೊಂಡಿದ್ದರು. ಆ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಿ ಎಂದಿದ್ದರು. ದಿನವೂ ಅಭಿಮಾನಿಗಳು ಈ ಮಾತು ಹೇಳುತ್ತಲೇ ಇದ್ದರು.

ನನಗೆ ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲ. ನನ್ನನ್ನು ಬಲ್ಲವರಿಗೆ ಈ ವಿಷಯ ಗೊತ್ತು. ಅಂಬಿ ರಾಜಕೀಯದಲ್ಲಿ ನಾನು ಎಂದಿಗೂ ಎಂಟ್ರಿ ಆಗಿಲ್ಲ. ರಾಜಕೀಯ ಪ್ರವೇಶಿಸುವುದು ಸುಲಭವಾದದ್ದಲ್ಲ ಎಂಬುದು ನನಗೆ ಗೊತ್ತಿತ್ತು. ಇದು ಮುಳ್ಳಿನ ಹಾದಿ ಎಂಬುದು ಗೊತ್ತಿದೆ. ಅವಮಾನ, ಅಪಮಾನ ಎಲ್ಲವನ್ನೂ ಎದುರಿಸಬೇಕು. ಚುನಾವಣೆ ಎದುರಿಸಲು ಆತ್ಮಸ್ಥೈರ್ಯ ಅಷ್ಟೇ ಅಲ್ಲ, ಬೆಂಬಲ ಕೂಡ ಬೇಕು ಎಂದರು. ಇದ್ಯಾವುದೂ ನನ್ನ ಬಳಿ ಇಲ್ಲ ಎಂದುಕೊಂಡಿದ್ದೆ. ಆದರೆ, ಜನ ಅದನ್ನು ಸುಳ್ಳು ಮಾಡಿದರು. ನನ್ನನ್ನು ಭೇಟಿಯಾದ ಜನ ಹೇಳಿದ್ದು ಒಂದೇ ಮಾತು. ಅಂಬಿ ಅವರನ್ನು ಬಿಟ್ಟು ಕೊಡಲು ನಾವು ಸಿದ್ಧರಿಲ್ಲ ಅಂದ್ರು. ನೀವು ಚುನಾವಣೆಗೆ ನಿಂತು ಅವರ ಸ್ಥಾನ ತುಂಬಿ ಎಂದ್ರು. ಆ ಪ್ರೀತಿ, ವಿಶ್ವಾಸ ಉಳಿಯಬೇಕು. ಅಂಬಿ ಕಂಡ ಕನಸು ನನಸಾಗಬೇಕು. ಕೆಲವು ಸಂದರ್ಭಗಳು ನಮ್ಮನ್ನು ಹುಡುಕಿಕೊಂಡು ಬಂದು ನಮ್ಮ ಕೈಲಿ ಕೆಲಸ ಮಾಡಿಸು ತ್ತವೆ. 4 ತಿಂಗಳ ಹಿಂದೆ ನಾನು ನಿರೀಕ್ಷಿಸದ ಘಟನೆ ನಡೆದಿತ್ತು. ಜೀವನ ವ್ಯರ್ಥವಾ ಯಿತಾ ಎಂಬ ಯೋಚನೆ ಇತ್ತು. ಸ್ನೇಹಿತರು, ಕುಟುಂಬದವರು ಧೈರ್ಯ ತುಂಬಿದರು.

Translate »