ಸ್ವಂತ ಕಟ್ಟಡ ಭಾಗ್ಯವಿಲ್ಲದ ಸರ್ಕಾರಿ ಶಾಲೆಗಳಿಗೆ ರೈಲ್ವೆ ಕಾರ್ಯಾಗಾರದ ಆಸರೆ
ಮೈಸೂರು

ಸ್ವಂತ ಕಟ್ಟಡ ಭಾಗ್ಯವಿಲ್ಲದ ಸರ್ಕಾರಿ ಶಾಲೆಗಳಿಗೆ ರೈಲ್ವೆ ಕಾರ್ಯಾಗಾರದ ಆಸರೆ

August 2, 2018

ಮೈಸೂರು:  ಈ ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಆದರೆ ಆಶ್ರಯ ನೀಡಿದವರು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ನಡೆಯಲು ಅಗತ್ಯ ಸಹಕಾರ ನೀಡಿದ್ದರ ಫಲವಾಗಿ ಯಾವುದೇ ಅಡೆತಡೆ ಇಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸ ಸಾಗಿದೆ.

ಹೌದು, ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರ ಕಟ್ಟಡಗಳಲ್ಲಿ ಈ ಶಾಲೆಗಳು ಆಶ್ರಯ ಪಡೆದಿವೆ. ಈ ಸರ್ಕಾರಿ ಶಾಲೆಗಳಿಗೆ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವನ್ನು ರೈಲ್ವೆ ಇಲಾಖೆ ಕಲ್ಪಿಸಿಕೊಡುತ್ತಿದೆ. ರೈಲ್ವೆ ಕಾರ್ಯಾಗಾರದ ಕಟ್ಟಡದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಪ್ರತ್ಯೇಕವಾಗಿ ನಡೆಯುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಇವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಗಂಭೀರ ಪ್ರಯತ್ನಕ್ಕೆ ಮುಂದಾಗಿಲ್ಲ.

ರೈಲ್ವೆ ಕಾರ್ಯಾಗಾರದ ಕ್ಯಾಂಟೀನ್ ಕಟ್ಟಡದಲ್ಲಿ ಸರ್ಕಾರಿ ಪ್ರೌಢಶಾಲೆ ನಡೆಯುತ್ತಿದ್ದರೆ, ರೈಲ್ವೆ ಕಾರ್ಯಾಗಾರದ ಮನೆಯಂತಿರುವ ಕಟ್ಟಡದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದೆ. 1996ರಲ್ಲಿ ರೈಲ್ವೆ ಕಾರ್ಯಾಗಾರದ ಕ್ಯಾಂಟಿನ್‍ನ ಭಾಗಶಃ ಕಟ್ಟಡದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡು ಇಂದಿಗೂ ಅದೇ ಕಟ್ಟಡದಲ್ಲಿ ನಡೆಯುತ್ತಿದೆ. ರೈಲ್ವೆ ಇಲಾಖೆ ಶಾಲೆಗೆ ಆಶ್ರಯ ನೀಡಿ ಒಂದು ರೀತಿಯಲ್ಲಿ ದತ್ತು ಪಡೆದಂತೆ ನಿರ್ವಹಣೆ ನೋಡಿಕೊಳ್ಳುತ್ತಿದ್ದು, ಇದೇ ಸಮಾಧಾನಕ್ಕೇನೋ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಶಾಲೆಗೆ ಸ್ವಂತ ಕಟ್ಟಡ ಕಲ್ಪಿಸುವ ಗೋಜಿಗೆ ಹೋಗಿಲ್ಲ.

ಕ್ಯಾಂಟೀನ್ ವಿಶಾಲವಾದ ಹಾಲ್‍ನಲ್ಲಿ ಪ್ರೌಢಶಾಲೆಯ ತರಗತಿಗಳು ನಡೆಯುತ್ತಿವೆ. ಪ್ಲೇವುಡ್ ಹಾಗೂ ಪರದೆಯ ಸಹಾಯದಿಂದ ಕೊಠಡಿ ವಿನ್ಯಾಸ ಮಾಡಿ ತರಗತಿಗಳನ್ನು ನಡೆಸಲಾಗುತ್ತಿದೆ. ಕಳೆದ 22 ವರ್ಷಗಳಿಂದ ತಮ್ಮ ಕಟ್ಟಡದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದರೂ ರೈಲ್ವೆ ಇಲಾಖೆ ಮಾತ್ರ ಈವರೆಗೂ ಯಾವುದೇ ಬಾಡಿಗೆಗೆ ಬೇಡಿಕೆ ಇಟ್ಟಿಲ್ಲ. ಬದಲಾಗಿ ಶಾಲೆಯ ವಿದ್ಯುತ್ ಶುಲ್ಕ ಹಾಗೂ ನೀರಿನ ಶುಲ್ಕ ಪಾವತಿಯ ಹೊಣೆಯನ್ನು ರೈಲ್ವೆ ಇಲಾಖೆಯೇ ವಹಿಸಿಕೊಂಡಿದೆ. ಎರಡು ದಶಕಗಳ ಹಿಂದೆ ರೈಲ್ವೆ ಕಾರ್ಯಾಗಾರ ಕಾಲೋನಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಆರಂಭಕ್ಕೆ ಮಂಜೂರಾತಿ ಸಿಕ್ಕಾಗ ಶಾಲೆ ಮುಖ್ಯ ಶಿಕ್ಷಕರು ಹಾಗೂ ರೈಲ್ವೆ ಇಲಾಖೆಯ ನಡುವೆ ಮೌಖಿಕ ಒಪ್ಪಂದವಾಗಿ ಕ್ಯಾಂಟೀನ್‍ನ ಭಾಗಶಃ ಭಾಗದಲ್ಲಿ ಶಾಲೆ ಕಾರ್ಯಾರಂಭ ಮಾಡಿತು ಎಂದು ಹೇಳಲಾಗಿದ್ದು, ಇಂದಿಗೂ ಇದಕ್ಕೆ ಸ್ವಂತ ಕಟ್ಟಡದ ಭಾಗ್ಯ ಕೂಡಿಬಂದಿಲ್ಲ.

ಹಲವು ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಸ್ವಂತ ಕಟ್ಟಡಕ್ಕಾಗಿ ಪ್ರಯತ್ನ ನಡೆಸಿದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ. ರೈಲ್ವೆ ಕ್ಯಾಂಟೀನ್ ಕಟ್ಟಡ ಸುಮಾರು ಶತಮಾನ ಪೂರೈಸಿದ್ದು, ಕಟ್ಟಡದ ಕೆಲ ಭಾಗ ಶಿಥಿಲಗೊಂಡಿದೆ. ಹೀಗಾಗಿ ನವೀಕರಣ ಹಾಗೂ ದುರಸ್ತಿ ಅಗತ್ಯವಿದ್ದು, ಇಲ್ಲವಾದರೆ ಸಮಸ್ಯೆ ಎದುರಾಗುವ ಆತಂಕವೂ ಇದೆ.

ಸದರಿ ಪ್ರೌಢಶಾಲೆಯು ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಗೆ ಬರಲಿದ್ದು, ಈ ವ್ಯಾಪ್ತಿಗೆ ಬರುವ 9 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಸ್ವಂತ ಕಟ್ಟಡ ಹೊಂದದ ಹಾಗೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರೌಢಶಾಲೆ ಇದಾಗಿದೆ. ಸದರಿ ಶಾಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಕಾಯ್ದುಕೊಂಡು ಬರುತ್ತಿದೆ. ಶ್ರೀರಾಂಪುರ, ಮಹದೇವಪುರ, ನಾಚನಹಳ್ಳಿ ಪಾಳ್ಯ, ದೇವರಾಜ ಅರಸು ಕಾಲೋನಿಯ ಬಡ ಕುಟುಂಬದ ಮಕ್ಕಳಿಗೆ ಈ ಶಾಲೆ ಶಿಕ್ಷಣ ನೀಡುತ್ತಿದೆ.
ಮುಖ್ಯಶಿಕ್ಷಕಿ ಎಸ್.ಪದ್ಮಾಂಬ ಹಾಗೂ ಶಿಕ್ಷಕ ವರ್ಗದ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭ್ಯವಾಗುತ್ತಿದ್ದು, ಸ್ವಂತ ಕಟ್ಟಡದೊಂದಿಗೆ ಶಾಲೆ ವಾತಾವರಣಕ್ಕೆ ಪೂರಕ ರೀತಿ ಕಟ್ಟಡ ವಿನ್ಯಾಸ ಇಲ್ಲವೆಂಬುದನ್ನು ಬಿಟ್ಟರೆ ರೈಲ್ವೆ ಇಲಾಖೆಯ ಸಹಕಾರದಿಂದ ಶಾಲೆಯ ಉತ್ತಮವಾಗಿ ನಡೆಯುತ್ತಿದೆ.

`ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಕರು ವಿಶೇಷ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಯೋಜನೆಯಡಿಯ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಸ್ವಂತ ಕಟ್ಟಡ ಕಲ್ಪಿಸಲು ಸಾಕಷ್ಟು ಪ್ರಯತ್ನ ನಡೆಸಿದೆ. ಸದ್ಯ ಅದು ಇನ್ನೂ ಕೈಗೂಡಿಲ್ಲ. ರೈಲ್ವೆ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಯಾವುದೇ ಕೊರತೆ ಇಲ್ಲದೆ, ಶಾಲೆ ಉತ್ತಮವಾಗಿ ನಡೆಯುತ್ತಿದೆ. ಆದರೆ ಶಾಲೆಯ ವಾತಾವರಣಕ್ಕೆ ಪೂರಕ ಕಟ್ಟಡ ಹಾಗೂ ಮೈದಾನವಿಲ್ಲ ಎಂಬ ಕೊರಗು ಕೂಡ ಒಂದೆಡೆ ಇದ್ದೇ ಇದೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಪದ್ಮಾಂಬ.

ಮುಂದುವರೆದು ಮಾಹಿತಿ ನೀಡಿದ ಎಸ್.ಪದ್ಮಾಂಬ, ಪ್ರಸಕ್ತ ಸಾಲಿನಲ್ಲಿ ಒಟ್ಟು 127 ವಿದ್ಯಾರ್ಥಿಗಳು ಮೂರು ತರಗತಿಗಳಿಂದ ಕಲಿಯುತ್ತಿದ್ದಾರೆ. ಈ ಪೈಕಿ 79 ವಿದ್ಯಾರ್ಥಿಗಳಿದ್ದರೆ, 48 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಶಾಲೆ ಉತ್ತಮ ಫಲಿತಾಂಶ ಕಾಯ್ದುಕೊಂಡಿದೆ. 2017-18ನೇ ಸಾಲಿನಲ್ಲಿ ಪರೀಕ್ಷೆ ಬರೆದ 43 ವಿದ್ಯಾರ್ಥಿಗಳ ಪೈಕಿ 25 ಮಂದಿ ಉತ್ತೀರ್ಣರಾದರು. ಇವರಲ್ಲಿ ಎಂ.ಕೀರ್ತಿ ಎಂಬ ವಿದ್ಯಾರ್ಥಿನಿ ಶೇ.78ರಷ್ಟು ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಎಂದು ವಿವರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡ ಸರ್ಕಾರಿ ಪ್ರಾಥಮಿಕ ಶಾಲೆಗೂ ಸ್ವಂತ ಕಟ್ಟಡ ಭಾಗ್ಯ ಇಲ್ಲವಾಗಿದ್ದು, ಇದಕ್ಕೂ ರೈಲ್ವೆ ಕಾರ್ಯಾಗಾರದ ಕಟ್ಟಡವೇ ಆಸರೆಯಾಗಿದೆ. ರೈಲ್ವೆ ಕಾರ್ಯಾಗಾರದ ಹಳೆ ಕಟ್ಟಡದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಮನೆಯ ವಿನ್ಯಾಸದಲ್ಲಿರುವ ಹಳೆಯ ಮೂರು ಕಟ್ಟಡಗಳಲ್ಲಿ ಶಾಲೆ ನಡೆಯಲು ವ್ಯವಸ್ಥೆ ಮಾಡಿಕೊಡಲಾಗಿದೆ.

ರೈಲ್ವೆ ಇಲಾಖೆ ಶಾಲೆಗೆ ಅಗತ್ಯವಿರುವ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿದೆ. ಸದ್ಯ ವಿದ್ಯುತ್ ವ್ಯವಸ್ಥೆ ಈ ಕಟ್ಟಡಕ್ಕೆ ಇಲ್ಲವಾಗಿದೆ. ರೈಲ್ವೆ ಇಲಾಖೆಯು ಕೈಮೀರಿ ಸಹಾಯಹಸ್ತ ನೀಡುತ್ತಿದ್ದು, ಸಣ್ಣಪುಟ್ಟ ವ್ಯವಸ್ಥೆಯನ್ನಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಲ್ಪಿಸಲು ಮುಂದಾಗಬೇಕಿದೆ. ಮುಖ್ಯ ಶಿಕ್ಷಕರು ಸೇರಿದಂತೆ ಶಾಲೆಯಲ್ಲಿ ನಾಲ್ವರು ಶಿಕ್ಷಕರು ಇದ್ದು, ನಾಚನಹಳ್ಳಿಪಾಳ್ಯ ಸೇರಿದಂತೆ ಸುತ್ತಮುತ್ತಲ ಬಡವರ್ಗದ ಮಕ್ಕಳ ಶಿಕ್ಷಣಕ್ಕೆ ಈ ಶಾಲೆ ನೆಲೆಯಾಗಿದೆ.

`ಅಂದಿನ ಮೈಸೂರು ಸಂಸ್ಥಾನದಲ್ಲೇ ಈ ಸರ್ಕಾರಿ ಶಾಲೆ ಪ್ರಾರಂಭವಾಗಿದೆ. ರೈಲ್ವೆ ಕಾರ್ಯಾಗಾರದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಈ ಶಾಲೆಯನ್ನು ಆರಂಭಿಸಲಾಯಿತು ಎಂದು ಸ್ಥಳೀಯರು ಹೇಳುತ್ತಾರೆ. ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ 60 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಶಾಲೆ ಮುಖ್ಯಶಿಕ್ಷಕಿ ವಿಜಯಾ ಶಾನಭಾಗ್ ತಿಳಿಸಿದರು.

Translate »