ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಮೀನಾಮೇಷಸುಪ್ರೀಂಕೋರ್ಟ್‍ನಲ್ಲಿ ಅತೃಪ್ತರ ಹಣೆಬರಹ ಇಂದು ನಿರ್ಧಾರ
ಮೈಸೂರು

ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಮೀನಾಮೇಷಸುಪ್ರೀಂಕೋರ್ಟ್‍ನಲ್ಲಿ ಅತೃಪ್ತರ ಹಣೆಬರಹ ಇಂದು ನಿರ್ಧಾರ

July 12, 2019

ಈಗಾಗಲೇ ತಾವು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಧೋರಣೆ ಅನುಸರಿಸು ತ್ತಿದ್ದಾರೆ. ಆ ಮೂಲಕ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಈ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇವರ ಮನವಿಯನ್ನು ಗುರುವಾರ ಬೆಳಿಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದೇ ಸಂಜೆ 6 ಗಂಟೆಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಇಂದು ಸಂಜೆ 6 ಗಂಟೆ 5 ನಿಮಿಷಕ್ಕೆ ಸ್ಪೀಕರ್ ಮುಂದೆ ಹಾಜರಾಗಿ ಮತ್ತೆ ಹೊಸದಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.

ಈ ವೇಳೆ ಸ್ಪೀಕರ್ ಶಾಸಕರಿಗೆ ನೀವು ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೀರಾ? ಇಲ್ಲವೇ ನಿಮ್ಮ ರಾಜೀನಾಮೆಗೆ ಯಾರದ್ದಾದರೂ ಬೆದರಿಕೆ ಇದೆಯಾ? ನಿಮ್ಮ ರಾಜೀ ನಾಮೆಗೆ ಬೇರೆ ಏನಾದರೂ ಕಾರಣ ಇದೆಯಾ?, ಯಾವುದಾದರೂ ಆಸೆ-ಆಮಿಷಕ್ಕೆ ಒಳಗಾಗಿದ್ದೀರಾ? ಚುನಾವಣೆಗೆ ವೆಚ್ಚ ಮಾಡುವುದರಿಂದ ಜನರಿಗೆ ಹೊರೆಯಾ ಗುವುದಿಲ್ಲವೇ? ಇದೆಲ್ಲದ್ದಕ್ಕೂ ಕುಳಿತು ಯೋಚಿಸಿ ನೋಡಿ, ಸಮಯ ತೆಗೆದುಕೊಳ್ಳಿ ಎಂದು ಸ್ಪಲ್ಪ ಕಾಲಾವಕಾಶ ಮಾಡಿಕೊಟ್ಟರು ಎನ್ನಲಾಗಿದೆ.

ಆದರೆ, ಇಂದು ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಸ್ಪೀಕರ್ ತಕ್ಷಣ ಅಂಗೀಕರಿಸ ಲಿಲ್ಲ. ಬದಲಾಗಿ ವಿಧಾನಮಂಡಳದ ನಿಯಮಾವಳಿಗಳನ್ನು ಅನುಸರಿಸಿಯೇ ರಾಜೀ ನಾಮೆ ಅಂಗೀಕರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ತರಾತುರಿಗೆ ಅವಕಾಶ ವಿಲ್ಲ. ಯಾವ ಒತ್ತಡಗಳಿಗೂ ಮಣಿಯುವುದಿಲ್ಲ. ಸಾಂವಿಧಾನಿಕ ನಿಯಮಾವಳಿಗಳ ಅನುಸಾರವೇ ನನ್ನ ಕರ್ತವ್ಯ ಪಾಲಿಸುತ್ತೇನೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಕೂಡಲೇ ಅಂಗೀಕರಿಸುತ್ತಾರೆಂಬ ಅತೃಪ್ತರ ನಿರೀಕ್ಷೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ ನಂತರ ಪುನಃ ನೇರವಾಗಿ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮುಂಬೈಗೆ ವಾಪಸ್ಸಾಗಿದ್ದಾರೆ. ಇತ್ತ ಸ್ಪೀಕರ್ ರಮೇಶ್‍ಕುಮಾರ್ ತಾವು ಅತೃಪ್ತ ಶಾಸಕರ ರಾಜೀನಾಮೆ ಸಲ್ಲಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಿದ್ದು, ಅದನ್ನು ನಾಳೆ ಸುಪ್ರೀಂಕೋರ್ಟ್‍ಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಷಯ ಸುಪ್ರೀಂಕೋರ್ಟಿನಲ್ಲೇ ಇತ್ಯರ್ಥವಾಗಬೇಕಿದೆ.

ಕಳೆದ ಜುಲೈ 6ರ ಶನಿವಾರದಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ 13 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿ, ಅಲ್ಲಿನ ಐಷಾರಾಮಿ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಇವರು ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ತೆರಳಿದ ವೇಳೆ ಸ್ಪೀಕರ್ ರಮೇಶ್‍ಕುಮಾರ್ ಕಚೇರಿಯಲ್ಲಿರಲಿಲ್ಲ. ಕೊನೆಗೆ ವಿಷಯ ತಿಳಿದು ತಮ್ಮ ಆಪ್ತ ಸಹಾಯಕರಿಗೆ ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿ, ಅವರಿಗೆ ಸ್ವೀಕೃತಿ ಪತ್ರ ನೀಡುವಂತೆ ಸೂಚಿಸಿದ್ದರು. ಮಂಗಳವಾರ ಈ ರಾಜೀನಾಮೆ ಪತ್ರಗಳ ಪರಿಶೀಲಿಸುವುದಾಗಿ ಸ್ಪೀಕರ್ ತಿಳಿಸಿದ್ದರು. ಅದರಂತೆ ಮಂಗಳವಾರ ಈ ರಾಜೀನಾಮೆ ಪತ್ರಗಳ ಪರಿಶೀಲನೆ ನಡೆಸಿದ ಸ್ಪೀಕರ್, ಅವುಗಳಲ್ಲಿ ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಕೆ. ಗೋಪಾಲಯ್ಯ, ಪ್ರತಾಪ್‍ಗೌಡ ಪಾಟೀಲ್, ಆನಂದ್‍ಸಿಂಗ್ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಉಳಿದಂತೆ ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಮುನಿರತ್ನ, ಹೆಚ್. ವಿಶ್ವನಾಥ್ ಹಾಗೂ ಭೈರತಿ ಬಸವರಾಜು ಅವರ ನಾಮಪತ್ರಗಳು ಕ್ರಮಬದ್ಧವಲ್ಲವೆಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನಾಮಪತ್ರ ಕ್ರಮಬದ್ಧವಾಗಿರುವ ಐವರು ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಜುಲೈ 13 ಮತ್ತು 15 ರಂದು ದಿನಾಂಕವನ್ನೂ ನಿಗದಿಪಡಿಸಿದ್ದರು. ಉಳಿದ ಎಂಟು ಮಂದಿ ಶಾಸಕರ ರಾಜೀನಾಮೆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ತಮ್ಮ ರಾಜೀನಾಮೆ ಪತ್ರಗಳ ಅಂಗೀಕರಿಸದೆ ಸ್ಪೀಕರ್ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಅತೃಪ್ತ ಶಾಸಕರು ಬುಧವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಇವರ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಇಂದು ಸಂಜೆ 6 ಗಂಟೆಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸೂಚನೆ ನೀಡಿತ್ತು.

ಓಡೋಡಿ ಬಂದು ಮತ್ತೆ ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ಹಾರಿದ ಅತೃಪ್ತ ಶಾಸಕರು!
ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‍ನ 11 ಮಂದಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಆದೇಶದಂತೆ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿ ತಲುಪಬೇಕಿತ್ತು. ಆದರೆ ಸಮಯ ಮೀರಿ ಈ ಶಾಸಕರು 6.05ಕ್ಕೆ ಓಡೋಡಿ ಬಂದು ಸ್ಪೀಕರ್ ಕಚೇರಿ ತಲುಪಿದರು.

ಮುಂಬೈ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್‍ಪೋರ್ಟ್‍ನಿಂದ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಈ ಅತೃಪ್ತ ಶಾಸಕ ರನ್ನು ಸಿಗ್ನಲ್ ಫ್ರೀ ಮೂಲಕ ಪೊಲೀಸರು ವಿಧಾನಸೌಧಕ್ಕೆ ಕರೆತರುವ ವ್ಯವಸ್ಥೆ ಮಾಡಿ ದ್ದರು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಪೊಲೀಸರು ಭಾರೀ ಬಿಗಿಭದ್ರತೆ ನಡುವೆ ಇವರನ್ನು ಸ್ಪೀಕರ್ ಕಚೇರಿ ತಲು ಪಿಸಿದರು. ಬರುವುದರಲ್ಲೇ ತಡವಾದ ಹಿನ್ನೆಲೆಯಲ್ಲಿ ಶಾಸಕರು ಆತಂಕಕ್ಕೀಡಾ ಗಿದ್ದರು. ವಿಮಾನ ನಿಲ್ದಾಣದಿಂದ ಬಸ್ ನಲ್ಲಿ ಬಂದ ಇವರು, ಬಸ್ ವಿಧಾನ ಸೌಧ ತಲುಪುತ್ತಿದ್ದಂತೆ ಅದರಿಂದ ಇಳಿದ ಶಾಸಕರು ತರಾತುರಿಯಲ್ಲಿ ವಿಧಾನ ಸೌಧದೊಳಗೆ ಪ್ರವೇಶಿಸಿದರು. ಅದ ರಲ್ಲೂ ಭೈರತಿ ಬಸವರಾಜು ಓಡೋಡಿ ಸ್ಪೀಕರ್ ಕಚೇರಿ ತಲುಪಿದರು. ಇವರ ಹಿಂದೆ ಭದ್ರತೆಗೆ ನಿಯೋಜಿತರಾದ ಪೊಲೀಸರು ಅನಿವಾರ್ಯವಾಗಿ ಓಡೋಡಿ ಬರಬೇಕಾಯಿತು. ಇವರ ನಂತರ ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಹೆಚ್. ವಿಶ್ವನಾಥ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ಕೆ. ಗೋಪಾಲಯ್ಯ ಹಾಗೂ ಮಹೇಶ್ ಕುಮಟಳ್ಳಿ ಅತ್ಯಂತ ವೇಗವಾಗಿ ಹೆಜ್ಜೆಹಾಕಿ ಸ್ಪೀಕರ್ ಕಚೇರಿ ತಲುಪಿದರು. ಕೆಲ ಶಾಸಕರು ತಮ್ಮ ಆಪ್ತ ಸಹಾಯಕರ ಮೂಲಕ ಪಡೆದ ತಮ್ಮದೇ ಲೆಟರ್‍ಹೆಡ್‍ನಲ್ಲಿ, ಇನ್ನು ಕೆಲವರು ಬಿಳಿ ಹಾಳೆಯಲ್ಲಿ ಹೊಸದಾಗಿ ರಾಜೀನಾಮೆ ಯನ್ನು ಸಲ್ಲಿಸಲು ಸ್ಪೀಕರ್ ರಮೇಶ್ ಕುಮಾರ್ ಅವಕಾಶ ನೀಡಿದರು.

ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸುವ ಅತೃಪ್ತ ಶಾಸಕರ ಈ ರಾಜೀನಾಮೆ ಪ್ರಕರಣದ ಬಗ್ಗೆ ಸ್ಪೀಕರ್ ರಮೇಶ್‍ಕುಮಾರ್ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿಸಿದರು. ಮತ್ತೊಂದೆಡೆ ಬಿಗಿಭದ್ರತಾ ವ್ಯವಸ್ಥೆ ಮಾಡು ತ್ತಿದ್ದ ಪೊಲೀಸರು ಸಹ ವಿಧಾನಸೌಧದ ಆವರಣವನ್ನು ಸಂಪೂರ್ಣ ವೀಡಿಯೋ ಕಣ್ಗಾವಲಿಗೆ ಒಳಪಡಿಸಿದ್ದರು. ಪೊಲೀಸ್ ಪೇದೆಗಳು ಅಲ್ಲಲ್ಲಿ ಕ್ಯಾಮೆರಾ ಹಿಡಿದು ಒಳಬರುವವರು ಹಾಗೂ ಹೊರಹೋಗುವವರನ್ನು ಚಿತ್ರೀಕರಣ ಮಾಡುತ್ತಿದ್ದರು. ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ವಿಚಾರಣೆ ನಡೆಸಿ ನಿರ್ಧಾರ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚನೆಯನ್ವಯ ಸ್ಪೀಕರ್ ರಮೇಶ್‍ಕುಮಾರ್ ಈ ವಿಷಯದಲ್ಲಿ ಹೆಚ್ಚು ಪಾರದರ್ಶಕತೆಗೆ ಆದ್ಯತೆ ನೀಡಿದ್ದರು. ಇದಕ್ಕಾಗಿ ಸ್ವತಃ ಖಾಸಗಿ ವೀಡಿಯೋಗ್ರಾಫರ್‍ವೊಬ್ಬರನ್ನು ನೇಮಿಸಿಕೊಂಡಿ ದ್ದರು. ಶಾಸಕರ ರಾಜೀನಾಮೆಯ ಪ್ರಕರಣದ ವಿಚಾರಣೆಯನ್ನು ವೀಡಿಯೋ ಚಿತ್ರೀಕರಣ ಮಾಡಿದ್ದು ಒಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಸುಮಾರು ಒಂದು ಗಂಟೆಗಳ ಕಾಲ ಹೊಸದಾಗಿ ರಾಜೀನಾಮೆ ಸಲ್ಲಿಸಿದ ಈ ಅತೃಪ್ತ ಶಾಸಕರಿಂದ ವಿವರಣೆ ಪಡೆದ ನಂತರ ಸ್ಪೀಕರ್ ರಮೇಶ್‍ಕುಮಾರ್ ಪತ್ರಿಕಾಗೋಷ್ಠಿ ಮೂಲಕ ಮಾಧ್ಯಮದವರಿಗೆ ಮಾಹಿತಿ ನೀಡಲು ಒಂದೆಡೆ ತೆರಳಿದರೆ, ಹೊಸದಾಗಿ ರಾಜೀನಾಮೆ ಸಲ್ಲಿಸಿ, ವಿವರಣೆ ನೀಡಿದ ನಂತರ ಸ್ಪೀಕರ್ ಕಚೇರಿಯಿಂದ ಹೊರಬಂದ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮತ್ತೆ ನೇರವಾಗಿ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನಗಳಲ್ಲಿ ಮುಂಬೈಗೆ ತೆರಳಿದರು. ಮುಂಬೈನಿಂದ ಈ ಶಾಸಕರು ಬಂದು, ಹೋಗುವಲ್ಲಿ ಎಲ್ಲಿಯೂ ಕೂಡ ಇವರನ್ನು ಸಂಪರ್ಕಿಸಲು ಯಾರಿಗೂ ಪೊಲೀಸರು ಅವಕಾಶವಾಗದಂತೆ ಸರ್ಪಗಾವಲಿದ್ದರು.

Translate »