ನಾಗರಹೊಳೆ ಅಭಯಾರಣ್ಯದಲ್ಲಿ `ಕಾಳ್ಗಿಚ್ಚು’ ತಡೆಗೆ ಕಣ್ಗಾವಲು
ಮೈಸೂರು

ನಾಗರಹೊಳೆ ಅಭಯಾರಣ್ಯದಲ್ಲಿ `ಕಾಳ್ಗಿಚ್ಚು’ ತಡೆಗೆ ಕಣ್ಗಾವಲು

February 6, 2019

ಮೈಸೂರು: ಉರಿ ಬಿಸಿಲಿನಿಂದ ನಾಗರಹೊಳೆ ಅಭಯಾರಣ್ಯ ಭಾಗಶಃ ಒಣಗಿದ್ದು, ಬೇಸಿಗೆಯ ಬೇಗೆಗೆ ಸಂಭವಿಸ ಬಹುದಾದ ಅಗ್ನಿ ಆಕಸ್ಮಿಕ ತಡೆಗೆ ಅರಣ್ಯ ಇಲಾಖೆ ಸಜ್ಜಾಗಿ, ದಿನದ 24 ತಾಸು ಟೊಂಕ ಕಟ್ಟಿ ಕಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯ ಪ್ರದೇಶ ಹಾಗೂ ವನ್ಯಜೀವ ಸಂಕುಲದ ರಕ್ಷಣೆ ಅರಣ್ಯ ಇಲಾಖೆಗೆ ದೊಡ್ಡ ಸವಾ ಲಾಗಿ ಪರಿಣಮಿಸುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ಅಂತ್ಯದವರೆಗೆ ಅರಣ್ಯ ಪ್ರದೇಶ ವನ್ನು ಕಾಪಾಡಿಕೊಳ್ಳುವುದಕ್ಕೆ ಇಲಾಖೆ ಎಲ್ಲಿಲ್ಲದ ಕಸರತ್ತು ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಿಡಿಗೇಡಿಗಳು ಬೇಕಂತಲೇ ಕಾಡಿಗೆ ಬೆಂಕಿ ಇಟ್ಟು ವಿಕೃತ ಭಾವವನ್ನು ಪ್ರದರ್ಶಿಸಿದರೆ, ಮತ್ತೆ ಕೆಲವು ಸಂದರ್ಭ ಗಳಲ್ಲಿ ವಾಹನ ಸವಾರರು, ದಾರಿ ಹೋಕರು ಬೀಡಿ, ಸಿಗರೇಟ್ ಸೇವನೆ ನಂತರ ಕಿಡಿ ನಂದಿಸದೆ ಎಸೆದು ಹೋಗುವು ದರಿಂದ ಕಾಳ್ಗಿಚ್ಚು ಸಂಭವಿಸುತ್ತವೆ. ಇದರೊಂದಿಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು ತಮ್ಮ ಜಮೀನಿನಲ್ಲಿ ಕಳೆ ಗಿಡ ಗಳಿಗೆ ಬೆಂಕಿ ಹಾಕಿ ಮೈಮರೆಯುವುದರಿಂದಲೂ ಅರಣ್ಯ ಪ್ರದೇಶಕ್ಕೆ ಬೆಂಕಿ ಕಿಡಿ ಬಿದ್ದು ಅಪಾರ ಹಾನಿ ಸಂಭವಿಸಿರುವ ನಿದರ್ಶನಗಳಿವೆ.

ಬೆಂಕಿ ರೇಖೆ(ಫೈರ್ ಲೈನ್): ನಾಗರ ಹೊಳೆ(ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನ) ಅಭಯಾರಣ್ಯವು 643 ಚದರ ಕಿ.ಮೀ ವಿಸ್ತಾರ ಹೊಂದಿದ್ದು, ನಾಗರಹೊಳೆ, ಕಲ್ಲಹಳ್ಳ, ಆನೆಚೌಕೂರು, ಹುಣಸೂರು, ವೀರನಹೊಸಳ್ಳಿ, ಮೇಟಿ ಕುಪ್ಪೆ, ಅಂತರಸಂತೆ, ಡಿ.ಬಿ.ಕುಪ್ಪೆ ವಲಯ ಗಳಾಗಿ ವಿಂಗಡಿಸಲಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಈ ಅಭಯಾರಣ್ಯ ವೈವಿಧ್ಯಮಯ ಕಾಡಾ ಗಿದೆ. ಕಾಳ್ಗಿಚ್ಚಿನಿಂದ ಕಾಡನ್ನು ರಕ್ಷಿಸಲು 1989.2 ಕಿ.ಮೀ ಉದ್ದದ ಬೆಂಕಿ ರೇಖೆ ನಿರ್ಮಿಸಲಾಗಿದೆ. ಆಕಸ್ಮಿಕವಾಗಿ ಬೆಂಕಿ ಬಿದ್ದರೆ ಎಲ್ಲಾ ಭಾಗಗಳಿಗೆ ಹಬ್ಬದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಕಿ ರೇಖೆ(ಫೈರ್ ಲೈನ್) ನಿರ್ಮಿಸಲಾಗುತ್ತದೆ. ವಲಯ ವಾರು ದಟ್ಟವಾಗಿರುವ ಕಾಡಿನಲ್ಲಿ ಫೈರ್ ಲೈನ್ ಸಹಕಾರಿಯಾಗಲಿದೆ.

ಟೊಂಕ ಕಟ್ಟಿ ನಿಂತವರು: ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ನಾರಾ ಯಣಸ್ವಾಮಿ ನೇತೃತ್ವದಲ್ಲಿ ಎಲ್ಲಾ 8 ವಲಯಗಳ ಎಸಿಎಫ್, ಆರ್‍ಎಫ್‍ಒ, ಡಿಆರ್‍ಎಫ್ ಸೇರಿದಂತೆ ಸಿಬ್ಬಂದಿಗಳು ಕಾಡು ಕಾಯಲು ಶ್ರಮಿಸುತ್ತಿದ್ದಾರೆ. ಇವರೊಂದಿಗೆ 300 ಬೆಂಕಿ ವಾಚರ್‍ಗಳು, 108 ಕಾವಲುಗಾರರು, 135 ಖಾಯಂ ಸಿಬ್ಬಂದಿಗಳು ಅವಿರತ ಶ್ರಮಿಸುತ್ತಿದ್ದಾರೆ. ಸಮೀಪದ ಹಾಡಿ ಅಥವಾ ಗ್ರಾಮಗಳಿಂದ ವಾಚರ್ ಕೆಲಸಕ್ಕೆ ಬರುವವರನ್ನು ಇಲಾಖೆ ವಾಹನಗಳಲ್ಲಿಯೇ ಆಯ್ದ ಸ್ಥಳಕ್ಕೆ ಕರೆದೊ ಯ್ಯಲಾಗುತ್ತದೆ. ಊಟದ ವ್ಯವಸ್ಥೆಯನ್ನು ಇಲಾಖೆ ವತಿಯಿಂದಲೇ ಪೂರೈಸಲಾಗುತ್ತಿದೆ.

ಕ್ಲಿಷ್ಟಕರ: ಕೇರಳ ರಾಜ್ಯಕ್ಕೆ ಹೊಂದಿಕೊಂ ಡಂತಿರುವ ನಾಗರಹೊಳೆ ಅಭಯಾರಣ್ಯ ಮೈಸೂರು ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೂ ಒಳಪಡುತ್ತದೆ. ಒಂದೆಡೆ ವಾಹನ ಸವಾರರಿಂದ ಸಮಸ್ಯೆ ಉಂಟಾದರೆ, ಮತ್ತೊಂ ದೆಡೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲಿನ ಸೇಡಿಗಾಗಿ ಕಾಡಿಗೆ ಬೆಂಕಿ ಹಾಕುವ ಕೀಳು ಮನಸ್ಥಿತಿಯುಳ್ಳವರ ಆತಂಕವೂ ಇಲಾಖೆ ಮುಂದಿದೆ. ಈ ನಡುವೆ ಕಾಡಿನಿಂದ ನಾಡಿಗೆ ಬರುವ ವನ್ಯ ಜೀವಿಗಳ ಹಾವಳಿ ಯಿಂದಲೂ ಬೇಸತ್ತಿರುವ ಕೆಲವರು ಇಲಾಖೆಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊಡಗು ಜಿಲ್ಲೆಯ ಭಾಗದಲ್ಲಿ ಕಾಡಾನೆ ಗಳ ಹಾವಳಿ ಹೆಚ್ಚಾಗಿದ್ದು, ನಾಡಿಗೆ ಬರುವ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾಯಕದಲ್ಲಿಯೂ ಸಿಬ್ಬಂದಿಗಳು ನಿರತರಾ ಗಿರಬೇಕಾದ ಅನಿ ವಾರ್ಯತೆ ಸೃಷ್ಟಿಯಾ ಗಿದೆ. ಅಂತರಸಂತೆ, ಡಿ.ಬಿ.ಕುಪ್ಪೆ ವಲಯ ದಲ್ಲಿರುವ ಹಾಡಿಗಳಿಗೆ ಹುಲಿ ಆಗಮಿಸುತ್ತಿ ರುವುದು ನುಂಗಲಾರದ ತುತ್ತಾಗಿ ಪರಿಣ ಮಿಸಿದೆ. ಏಕಕಾಲಕ್ಕೆ ಮೂರು ಸವಾಲುಗಳು ಇಲಾಖೆಯ ಮುಂದಿದ್ದು, ವನ್ಯ ಸಂಪತ್ತನ್ನು ಉಳಿಸುವುದಕ್ಕೆ ಶ್ರಮಿಸುತ್ತಿದ್ದಾರೆ.

ಅಗತ್ಯ ಕ್ರಮ ಕೈಗೊಳ್ಳಲಾಗಿದೆ: ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ನಾಗರಹೊಳೆ ಹುಲಿ ಯೋಜನೆ ನಿರ್ದೇ ಶಕ ನಾರಾಯಣಸ್ವಾಮಿ ಮಾತನಾಡಿ, ಫೈರ್‍ಲೈನ್ ನಿರ್ಮಿಸಲಾಗಿದೆ. ಕಳೆದ ಸಾಲಿನಲ್ಲಿ ಕೆಲಸ ಮಾಡಿದ್ದ ವಾಚರ್ ಹಾಗೂ ಕಾವಲುಗಾರರನ್ನು ನಿಯೋಜಿಸ ಲಾಗಿದೆ. ಅರಣ್ಯ ಪ್ರದೇಶದ ವಿವಿಧೆಡೆಯಿ ರುವ ಟವರ್‍ಗಳ ಮೇಲೆ ವಾಚರ್‍ಗಳು ನಿರಂತರವಾಗಿ ವೀಕ್ಷಣೆ ಮಾಡುತ್ತಿದ್ದಾರೆ. ವೀರನಹೊಸಳ್ಳಿ, ನಾಗರಹೊಳೆ, ಅಂತರ ಸಂತೆ ವಲಯದಲ್ಲಿ ತಲಾ ಒಂದೊಂದು ಅಗ್ನಿಶಾಮಕ ವಾಹನವನ್ನು ನಿಲ್ಲಿಸಲಾಗಿದೆ. ಇಲಾಖೆಯ 39 ಹಾಗೂ ಬಾಡಿಗೆ ಪಡೆದ 8 ಖಾಸಗಿ ವಾಹನಗಳನ್ನು ಬಳಸಿ ಕೊಳ್ಳಲಾಗುತ್ತಿದೆ. ಯಾವುದೇ ಸ್ಥಳದಲ್ಲಿ ಆಕಸ್ಮಿಕ ಸಂಭವಿಸಿದರೆ 30 ನಿಮಿಷದಲ್ಲಿ ಆ ಸ್ಥಳಕ್ಕೆ ತಲುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಚರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೆ ನೀರಿನ ಕ್ಯಾನ್ ಸೇರಿ ದಂತೆ ಅಗತ್ಯ ಸಲಕರಣೆ ನೀಡಲಾಗಿದೆ. ಅರಣ್ಯದ ಗಡಿ ಭಾಗದಲ್ಲಿ ನಿರಂತರ ಗಸ್ತು ವ್ಯವಸ್ಥೆ ಕಲ್ಪಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಾಡಿನತ್ತ ಬರುವುದನ್ನು ಸೂಕ್ಷ್ಮ ವಾಗಿ ಗಮನಿಸಲಾಗುತ್ತಿದೆ. ಬೆಂಕಿಯಿಂದ ಕಾಡನ್ನು ರಕ್ಷಿಸುವಂತೆ ಕಾಡಂಚಿನ ಗ್ರಾಮಗಳಲ್ಲಿ ಹಾಗೂ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ನಡೆಸುವ ಮೂಲಕ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಲಾಗಿದೆ ಎಂದರು.

ಎಂ.ಟಿ.ಯೋಗೇಶ್ ಕುಮಾರ್

Translate »