ಮೈಸೂರು, ಫೆ.27(ಎಂಕೆ)- ಅಪಾರ ಅನುಕಂಪ ದಿಂದ ಸರ್ವಜೀವಿಗಳ ನೋವಿಗೆ ಸ್ಪಂದಿಸಿದವರು ಶ್ರೀ ಶಾರದಾದೇವಿ. ತಾಯಿ, ಗುರು, ದೇವಿಯಾಗಿದ್ದ ಅವರು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದು ದಾವಣಗೆರೆ ರಾಮಕೃಷ್ಣ ಮಿಷನ್‍ನ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದಜೀ ಮಹಾ ರಾಜ್ ಸ್ಮರಿಸಿಕೊಂಡರು.
ಮೈಸೂರಿನ ಯಾದವಗಿರಿಯಲ್ಲಿರುವ ಶ್ರೀ ರಾಮ ಕೃಷ್ಣ ಆಶ್ರಮದಲ್ಲಿ ‘ಶ್ರೀ ರಾಮಕೃಷ್ಣ ಪರಮಹಂಸರ 185ನೇ ಜನ್ಮದಿನೋತ್ಸವ ಹಾಗೂ ಆಶ್ರಮದ ವಾರ್ಷಿಕೋತ್ಸವ’ದ ಅಂಗವಾಗಿ ಆಯೋಜಿಸಿದ್ದ ‘ಮಹಾತಾಯಿ ಶ್ರೀ ಶಾರದಾದೇವಿಗೆ ನಮನ’ ಉಪ ನ್ಯಾಸದಲ್ಲಿ ‘ಕರುಣಾಮಯಿ ಶ್ರೀಶಾರದಾಮಾಯಿ’ ಕುರಿತು ಮಾತನಾಡಿದ ಅವರು, ತಾಯಿ ಶಾರದಾ ದೇವಿ ವೈವಿಧ್ಯ, ವೈಪರೀತ್ಯಗಳನ್ನು ಗಮನಿಸದೆ ಎಲ್ಲರನ್ನೂ ಪ್ರೇಮದಿಂದ ಕಾಣುತ್ತಿದ್ದರು. ಅನೇಕ ಜನರಿಗೆ ಗುರುವಾಗಿದ್ದರು. ಸಾಮಾನ್ಯರಿಗೂ ಮಂತ್ರ ದೀಕ್ಷೆಯನ್ನು ಕೊಟ್ಟರು. ಎಲ್ಲರನ್ನೂ ಕ್ಷಮಿಸುವ ಕ್ಷಮಾಗುಣ ಅವರಲ್ಲಿತ್ತು. ಸದಾ ಸೇವೆಯಲ್ಲಿಯೇ ತಲ್ಲೀನರಾಗಿರು ತ್ತಿದ್ದರು ಎಂದು ನೆನಪಿಸಿದರು.
‘ಶ್ರೀ ಶಾರದಾ ದೇವಿ-ಅನುಕರ ಣೀಯ ಆದರ್ಶ’ ವಿಚಾರವಾಗಿ ಮಾತನಾಡಿದ ವಿದುಷಿ ದೀಪಿಕಾ ಪಾಂಡುರಂಗಿ, ಮತ್ತೊಬ್ಬರ ಬಗ್ಗೆ ಚಿಂತಿಸುವ ಬದಲು ನಮ್ಮ ನಡೆ-ನುಡಿ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟ ಆದರ್ಶ ಮಹಿಳೆ ತಾಯಿ ಶಾರದಾದೇವಿ. ಅವರೊಂದು ಅನುಕರಣೀಯ ಆದರ್ಶ ಎಂದು ಗುಣಗಾನ ಮಾಡಿದರು.
ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ರಾಮಕೃಷ್ಣ ವಿದ್ಯಾಶಾಲೆ ಸಂಚಾಲಕ ಯುಕ್ತೇಶಾ ನಂದಜೀ ಮಹಾ ರಾಜ್, ಕುವೆಂಪು ವಿವಿ ನಿವೃತ್ತ ಕುಲಪತಿ ಕೆ.ಚಿದಾನಂದ ಗೌಡ, ಲೇಖಕಿ ತಾರಿಣಿ ಚಿದಾನಂದ, ಭಾರತ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯ ದರ್ಶಿ ಎಂ.ಎಸ್.ಚಕ್ರವರ್ತಿ ಮತ್ತಿತರರು ಉಪಸ್ಥಿತರಿದ್ದರು.