ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ
ಕೊಡಗು

ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ

November 17, 2018

ಮಡಿಕೇರಿ: ಹಲವು ವರ್ಷಗಳಿಂದ ಭಗವಂತನ ಸಾನಿಧ್ಯವೇ ದೊರೆತ ಆನಂದದಲ್ಲಿದ್ದ ಪೊನ್ನಂಪೇಟೆ ರಾಮ ಕೃಷ್ಣ ಶಾರದಾಶ್ರಮ ಸ್ವಾಮಿ ಜಗದಾತ್ಮನಂದಜಿ ಅವರು ಸಹಸ್ರಾರು ಭಕ್ತಾಧಿಗಳ ಅಶ್ರುತರ್ಪಣೆಯ ನಡುವೆ ಪಂಚಭೂತಗಳಲ್ಲಿ ಲೀನವಾದರು. ಬದುಕಲು ಕಲಿಯಿರಿ ಕೃತಿಯ ಮೂಲಕ ಯುವ ಸಮುದಾಯವನ್ನು ಬಡಿದೆಚ್ಚರಿಸಿ ಸ್ಫೂರ್ತಿಯಾಗಿಸಿದ್ದ ಸ್ವಾಮೀಜಿ ದೈವಾಧೀನರಾಗಿದ್ದು ಪೊನ್ನಂಪೇಟೆ ಪಟ್ಟಣ್ಣವನ್ನೇ ದುಖಃದ ಮಡುವಿಗೆ ತಳ್ಳಿತ್ತು.

ಶುಕ್ರವಾರ ಬೆಳಿಗಿನಿಂದಲೇ ಪೊನ್ನಂಪೇಟೆ, ಗೋಣಿಕೊಪ್ಪ ಪಟ್ಟಣ್ಣಗಳು ಮೋಡ ಕವಿದ ವಾತಾವರಣದಿಂದ ಪ್ರಕೃತಿ ಕೂಡ ಸ್ವಾಮಿಯ ಅಗಲಿಕೆಗೆ ಮಿಡಿದು ಕಂಬನಿ ಹರಿಸಿತ್ತು. ಸನ್ಯಾಸಿ ಜೀವನ ಪ್ರಾರಂಭಿಸಿ 58 ವರ್ಷಗಳ ಕಾಲ ಶ್ರೀ ರಾಮಕೃಷ್ಣರ ನಾಮವನ್ನು ಜಪಿಸುತ್ತಾ ಅವರ ತತ್ವಗಳನ್ನು ಅಳವಡಿಸಿಕೊಂಡು ಶಿಸ್ತು ಬದ್ಧ ಜೀವನ ನಡೆಸಿದ 89ರ ಹರೆಯದ ಸ್ವಾಮಿ ಜಗದಾತ್ಮನಂದರು ಜನರ ನೋವು ಗಳಿಗೆ ಮಿಡಿಯುವ ಸರಳ ಹೃದಯಿ ಯಾಗಿದ್ದರು ಎಂದು ಭಕ್ತ ಸಮೂಹ ಕಂಬನಿ ಮಿಡಿದಿದೆ.

ವೇದಘೋಷ, ಮಂತ್ರಗಳೊಂದಿಗೆ ಉಪ ನಿಷತ್ ಪಠಣದೊಂದಿಗೆ ಸಾಧು ಸನ್ಯಾಸಿ ಗಳು ಸ್ವಾಮಿ ಜಗದಾತ್ಮನಂದರ ದಿವ್ಯಾತ್ಮಕ್ಕೆ ಶಾಂತಿ ಕೋರಿದರು. ಶ್ರೀ ರಾಮಕೃಷ್ಣ ಶಾರದಾ ಶ್ರಮದ ಸಂಭಾವನಂದಜಿ ಸಭಾಂಗಣದ ಮುಂಭಾಗದಲ್ಲಿ ಸ್ವಾಮಿಯ ಪಾರ್ಥಿವ ಶರೀರವನ್ನು ಭಕ್ತಾಧಿಗಳ ದರ್ಶನಕ್ಕೆ ಇಡ ಲಾಗಿತ್ತು. ಸಾವಿರಾರು ಭಕ್ತಾದಿಗಳು, ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪ್ರತಿನಿಧಿಗಳು ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತು ತಮ್ಮ ಗುರುಗಳ ಕೊನೆಯ ದರ್ಶನ ಪಡೆದು ಕಣ್ಣೀರು ಹಾಕಿದರು.

ಶಾಸಕ ಕೆ.ಜಿ.ಬೋಪಯ್ಯ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತ, ಜಿ.ಪಂ. ಸದಸ್ಯೆ ಶ್ರೀಜಾ ಸೇರಿದಂತೆ ಹಲವು ಪ್ರಮುಖರು ಸ್ವಾಮಿಯ ಅಂತಿಮ ದರ್ಶನ ಪಡೆದರು.

ಹೊರ ಜಿಲ್ಲೆ, ಹೊರ ರಾಜ್ಯಗಳ ಸ್ವಾಮೀಜಿ ಗಳು ಆಗಮಿಸಿ ಅಂತಿಮ ದರ್ಶನ ಪಡೆದರು. ಕನ್ನಡ ಮಠದ ಶ್ರೀ ಚೆನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಸ್ವಾಮೀಜಿ ಗಳಾದ ವೀರೇಶಾನಂದಾ, ಸರ್ವಜಯಾ ನಂದಾ, ಗಣೇಶಾನಂದಾ, ಸರ್ವಧರ್ಮ ನಂದಾ, ಉರುದೇವಾನಂದಾ, ಚರಣ ನಾಂದ, ಬ್ರಹ್ಮ ನಿಷ್ಠಾನಂದಾ, ಬೀರ ನಾಂದಾ, ಲಲಿತೇಶ್ವರಾನಂದಾ, ಸಚ್ಚಿದಾ ನಂದಾ, ಪ್ರಕಾಶಾನಂದಾ ಮಹರಾಜ್, ಯುಕ್ತೇಶಾನಂದಾ, ಶಾಂತಿ ವೃತ್ತಾನಂದಾ, ಏಕಗಮ್ಯನಂದಾ, ವಿನಯಾನಂದ ಸರಸ್ವತಿ, ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಮಾಜ ಸೇವಕ ಸಂಕೇತ್ ಪೂವಯ್ಯ ಸೇರಿ ದಂತೆ ನೂರಾರು ಗಣ್ಯರು ದರ್ಶನ ಪಡೆದರು.

ಮೈಸೂರು ಒಂಟಿಕೊಪ್ಪಲಿನಲ್ಲಿರುವ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಸ್ವಾಮಿಯ ಪಾರ್ಥಿವ ಶರೀರವನ್ನು ಮಧ್ಯಾಹ್ನ 2 ಗಂಟೆಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾ ಆಶ್ರಮಕ್ಕೆ ತರಲಾಯಿತು.

2ರಿಂದ 4.50 ರ ತನಕ ಭಕ್ತಾಧಿಗಳ ದರ್ಶನಕ್ಕೆ ಇಟ್ಟು ಸಂಜೆ 5 ಗಂಟೆಗೆ ಪಟ್ಟಣ ದಲ್ಲಿ ಮೆರವಣಿಗೆ ನಡೆಸಿ ಬಸವೇಶ್ವರ ದೇವಸ್ಥಾನದ ಹೊರ ಭಾಗದಿಂದ ಮೂರು ಸುತ್ತು ಬಂದು ಪೊನ್ನಂಪೇಟೆ ಹಿಂದು ರುದ್ರಭೂಮಿಯಲ್ಲಿ ರಾಮಕೃಷ್ಣ ಮಠದ ನಿಯಮದಂತೆ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

Translate »