ಮಂಡ್ಯ ರೈತರಿಗೆ ಸಿಹಿ ಸುದ್ದಿ: ನಾಲೆಗಳಿಗೆ ನೀರು ಹರಿಸಲು ನಿರ್ಧಾರ
ಮೈಸೂರು

ಮಂಡ್ಯ ರೈತರಿಗೆ ಸಿಹಿ ಸುದ್ದಿ: ನಾಲೆಗಳಿಗೆ ನೀರು ಹರಿಸಲು ನಿರ್ಧಾರ

July 16, 2019

ಮಂಡ್ಯ, ಜು.15(ನಾಗಯ್ಯ)- ರೈತರ ಬೆಳೆಗಳಿಗೆ ಕೆಆರ್‍ಎಸ್ ಜಲಾಶಯದಿಂದ ನೀರು ಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಂಗಳವಾರದಿಂದ (ಜು.16) 10 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಕಾವೇರಿ ಅಚ್ಚು ಕಟ್ಟು ವ್ಯಾಪ್ತಿಯ ಸಚಿವರು, ಶಾಸಕರು ಹಾಗೂ ಕಾವೇರಿ ಉಸ್ತುವಾರಿ ಸಮಿತಿ ಸದಸ್ಯರು ಬೆಳೆಗಳ ರಕ್ಷಣೆ ಹಾಗೂ ಕುಡಿಯಲು ನೀರು ಬಿಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

ಐಸಿಸಿ ಸಭೆಯ ನಿರ್ಣಯದ ಪ್ರಕಾರ ನಾಳೆಯಿಂದ 10ದಿನಗಳ ಕಾಲ ಅಂದರೆ ಜು. 16ರಿಂದ ಜು. 25 ರವರೆಗೆ ಕೆಆರ್‍ಎಸ್‍ನಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲಾಗುವುದು ಎಂದು ಕೃಷ್ಣರಾಜ ಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಅಭಿ ಯಂತರ ಬಿ.ಎನ್.ರಾಮಕೃಷ್ಣ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಐಸಿಸಿ ಕಮಿಟಿ ಅಧ್ಯಕ್ಷರೂ ಆದ ಸಿ.ಎಸ್.ಪುಟ್ಟರಾಜು ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಜನ ಜಾನುವಾರುಗಳಿಗೆ
ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಂಗಳ ವಾರ ಮಧ್ಯರಾತ್ರಿಯಿಂದಲೇ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತಿದ್ದು, ರೈತÀರು ಅಚ್ಚುಕಟ್ಟು ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ಮಾತ್ರ ಬಳಸಿ ಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೊಸ ಬೆಳೆಗಳನ್ನು ಬೆಳೆಯಬಾರದು. ಹೊಸ ಬೆಳೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ರೈತರು ಯಾವುದೇ ಹೊಸ ಬೆಳೆಗಳನ್ನು ಬೆಳೆದು ನೀರಿಲ್ಲದೆ ನಷ್ಟವಾದರೆ ಅದಕ್ಕೆ ನೀರಾವರಿ ಇಲಾಖೆಯು ಹೊಣೆಯಾಗುವುದಿಲ್ಲ. ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಕೆಆರ್‍ಎಸ್‍ನ ಇಂದಿನ ನೀರಿನ ಮಟ್ಟ: ಸೋಮವಾರ ಸಂಜೆ 6 ಗಂಟೆ ವೇಳೆಗೆ 90.50 ಅಡಿ ನೀರಿದ್ದು, ಒಳ ಹರಿವು 3641 ಕ್ಯೂಸೆಕ್ ಹಾಗೂ ಹೊರ ಹರಿವು 403 ಕ್ಯೂಸೆಕ್ ಇದ್ದು, 16.239 ಟಿಎಂಸಿ ನೀರು ಸಂಗ್ರಹವಿದೆ.

ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ: ಕಳೆದ ಒಂದು ತಿಂಗಳಿಂದ ರೈತ ಸಂಘದ ಕಾರ್ಯಕರ್ತರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಸರಣಿ ಹೋರಾಟ ಮಾಡುತ್ತಿದ್ದರು. ನಿನ್ನೆ ನಡೆದ ಸಭೆಯಲ್ಲಿ ಎರಡು ದಿನಗಳ ಗಡುವನ್ನು ರಾಜ್ಯ ಸರ್ಕಾ ರಕ್ಕೆ ನೀಡಲಾಗಿತ್ತು. ಹೀಗಾಗಿ ರೈತರು ಎಲ್ಲಿ ಹೋರಾಟ ಚುರುಕುಗೊಳಿಸುತ್ತಾರೋ ಎಂಬ ಭಿತಿಯಿಂದ ನೀರು ಹರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇದರ ಜೊತೆಗೆ ರಾಜ್ಯ ಸರ್ಕಾರದ ಡೋಲಾಯಮಾನ ಪರಿಸ್ಥಿತಿ ಹಾಗೂ ಶಾಸಕರ ರೆಸಾರ್ಟ್ ರಾಜಕಾರಣಕ್ಕೆ ಜಿಲ್ಲೆಯ ರೈತರು ಆಕ್ರೋಶ ಹೊರ ಹಾಕಿದ್ದರು. ರೈತರನ್ನು ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು. ಈ ಹಿನ್ನೆಯಲ್ಲಿ ರೈತರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಭಯದಲ್ಲಿ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಸಭೆಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್ ಸೇರಿದಂತೆ ಮಂಡ್ಯ ಜಿಲ್ಲೆಯ ಶಾಸಕರು, ಟಿ.ನರಸೀಪುರ, ಪಿರಿಯಾ ಪಟ್ಟಣ ಶಾಸಕರು ಮತ್ತು ಡೆಲ್ಲಿ ಕಮಿಟಿ ಸದಸ್ಯರೂ ಪಾಲ್ಗೊಂಡಿದ್ದರು.

Translate »