ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಮೈಸೂರು

ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ

July 16, 2019

ಮೈಸೂರು,ಜು.15-ಮೈಸೂರು ಮಹಾ ನಗರಪಾಲಿಕೆಯಲ್ಲಿ ವಿವಿಧ ಯೋಜನೆಗಳ ಅನುದಾನವನ್ನು ಅವೈಜ್ಞಾನಿಕವಾಗಿ ಬಳ ಸುತ್ತಿರುವುದು ಮಾತ್ರವಲ್ಲದೇ, ವಾರ್ಡ್ ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

14ನೇ ಹಣಕಾಸು ಆಯೋಗದ ಅನು ದಾನದಲ್ಲಿ ಹೆಚ್ಚಿನ ಅನುದಾನವನ್ನು ಕುಡಿ ಯುವ ನೀರಿಗೆ ನೀಡಬೇಕಾಗಿದ್ದು, ಅದಕ್ಕಾಗಿ ಶೇ.20ರಷ್ಟು ಅನುದಾನ ಮೀಸ ಲಿಡುವ ಬದಲು ಕೇವಲ ಶೇ. 13ರಷ್ಟು ಮೀಸಲಿಡಲಾಗಿದೆ. ಕಬಿನಿಯಿಂದ ಬರುವ ಬಿದರುಗೂಡು ನೀರು ಸಂಗ್ರಹಾಗಾರದಲ್ಲಿ ಪ್ರತಿನಿತ್ಯ 82 ರಿಂದ 85 ಎಂಎಲ್‍ಡಿ ನೀರು ಹೊರ ಬರುತ್ತಿದ್ದು, 22 ಎಂಎಲ್‍ಡಿ ನೀರು ಶುದ್ಧೀಕರಣ ಮಾಡಲು ಘಟಕ ಇಲ್ಲದಿರುವುದರಿಂದ ಆ ನೀರು ಮತ್ತೆ ನದಿಗೆ ಸೇರುತ್ತಿದೆ. 8 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಿದರೆ, ನೀರು ಪೋಲಾ ಗುವುದನ್ನು ತಡೆಗಟ್ಟಿ ಜನರಿಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡ ಬಹುದು ಎಂದು ಅವರು ತಿಳಿಸಿದ್ದಾರೆ.

ನಿರುಪಯುಕ್ತ: ಮೈಸೂರು ನಗರದ ಹಲವಾರು ಸ್ಥಳಗಳಲ್ಲಿ ಈ ಹಿಂದೆ ನಿರ್ಮಿ ಸಿದ್ದ ಇ-ಶೌಚಾಲಯಗಳು ನಿರುಪಯು ಕ್ತವಾಗಿವೆ. ಹಲವು ವಾರ್ಡ್‍ಗಳಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಆದರೆ, ಕೆಲವು ವಾರ್ಡ್ ಗಳಿಗೆ 10 ಲಕ್ಷ ಅನುದಾನ ನೀಡಲಾಗಿದೆ. ಅದೇ ವೇಳೆ 40 ಮತ್ತು 41ನೇ ವಾರ್ಡ್ ಗಳಿಗೆ ತಲಾ 37 ಲಕ್ಷ, 26ನೇ ವಾರ್ಡ್‍ಗೆ 35 ಲಕ್ಷ, ಮತ್ತು 51ನೇ ವಾರ್ಡ್‍ಗೆ 25 ಲಕ್ಷ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ. ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ಮೀಸಲಿಡ ಲಾಗಿದ್ದು, ಅದರ ಉನ್ನತೀಕರಣಕ್ಕೆ 20 ಲಕ್ಷ ರೂ.ಗಳನ್ನು ಅವೈಜ್ಞಾನಿಕವಾಗಿ ಮೀಸ ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಳಚರಂಡಿ ವ್ಯವಸ್ಥೆ ಕಾಮಗಾರಿಗಳಿಗೆ ಶೇ.2ರಷ್ಟು ಹೆಚ್ಚಿನ ಮೊತ್ತವನ್ನು ಬಳಸಲಾಗುತ್ತಿದೆ ಎಂದಿರುವ ಅವರು, ದೇವನೂರು ಕೆರೆ ಹಿಂಭಾಗ ಮಳೆ ನೀರಿನ ಮೋರಿಯಲ್ಲಿ ತ್ಯಾಜ್ಯದ ನೀರು ಹರಿಯುವುದನ್ನು ತಡೆಗಟ್ಟಲು 85 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಆದರೆ ಆ ವ್ಯಾಪ್ತಿಗೆ ಸೇರಿದ ಅಭಿಯಂತರರು, ಈ ಮೋರಿಯಲ್ಲಿ ತ್ಯಾಜ್ಯದ ನೀರು ಹರಿಯುತ್ತಿಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ 47ನೇ ವಾರ್ಡ್‍ಗೆ ಸಂಬಂಧಿಸಿದಂತೆ ಅಪೊಲೋ ಆಸ್ಪತ್ರೆ ಹಿಂಭಾಗ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುವುದನ್ನು ತಡೆಗಟ್ಟಲು ಕೊಳವೆ ಮಾರ್ಗ ಅಳವಡಿಸಲು 87 ಲಕ್ಷ ರೂ.ಗಳನ್ನು ಮೀಸಲಿಡಲಾಗಿದ್ದು, ಆ ವ್ಯಾಪ್ತಿಯ ಅಭಿಯಂತರರು ಈ ಕಾಮಗಾರಿಯ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಇವೆರಡೂ ಕಾಮಗಾರಿ ಗಳನ್ನು ಕೈಬಿಟ್ಟರೆ 1.72 ಕೋಟಿ ಪಾಲಿಕೆಗೆ ಉಳಿತಾಯವಾಗುತ್ತದೆ. ಈ ಅನಾವಶ್ಯಕ ಕಾಮಗಾರಿಗಳನ್ನು ಕೈಬಿಟ್ಟು, ಆ ಹಣ ವನ್ನು ಕುಡಿಯುವ ನೀರಿನ ಕಾಮಗಾರಿಗೆ ಬಳಸಬಹುದು ಎಂದಿದ್ದಾರೆ.

14ನೇ ಹಣಕಾಸು ಆಯೋಗ ಅನು ದಾನವನ್ನು ಕೆಲ ವಾರ್ಡ್‍ಗಳಿಗೆ 35 ಲಕ್ಷ, 37 ಲಕ್ಷ, 25 ಲಕ್ಷ, 15 ಲಕ್ಷ, 10 ಲಕ್ಷ ಈ ರೀತಿ ಹಂಚಿಕೆ ಮಾಡಿ ತಾರತಮ್ಯ ಎಸಗ ಲಾಗಿದೆ ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ವಿದ್ಯುತ್ ತಂತಿ ಮೇಲೆ ಹಾದು ಹೋಗಿರುವ ಮರದ ಕೊಂಬೆ ಗಳನ್ನು ಚೆಸ್ಕಾಂರವರು ಕಡಿಯುವುದರಿಂದ ಹಾಗೂ ವಯೋಸಹಜವಾಗಿ ಬೀಳುವ ಮರದ ಕೊಂಬೆಗಳು ಮತ್ತು ಪ್ರಕೃತಿದತ್ತ ವಾಗಿ ಉದುರುವ ಎಲೆಗಳು ಇವೆಲ್ಲ ವನ್ನೂ ಯಂತ್ರದ ಮೂಲಕ ಪುಡಿ ಮಾಡಿ ಗೊಬ್ಬರವಾಗಿ ಮಾರ್ಪಡಿಸಬಹುದಾಗಿತ್ತು. ಪ್ರತೀ ವಾರ್ಡ್‍ನಲ್ಲೂ ಒಂದು ಯಂತ್ರ ವನ್ನು ಯಾವುದಾದರೂ ಪಾರ್ಕ್‍ನಲ್ಲಿ ಅಳ ವಡಿಸಬಹುದಾಗಿದ್ದು, ಈ ಕಾಮಗಾರಿ ಯಿಂದ ವಾರ್ಡ್‍ನಲ್ಲಿ ಪ್ರತಿನಿತ್ಯ ಗುಡಿಸಿ ದಾಗ ಬರುವ ಎಲೆ, ಕಸ, ಗಾರ್ಡನ್ ವೇಸ್ಟ್ ಮರದ ರೆಂಬೆ-ಕೊಂಬೆಗಳ ತುಂಡು ಗಳನ್ನು ಉಪಯುಕ್ತ ವಸ್ತುವಾಗಿ ಮಾರ್ಪ ಡಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡ ಬಹುದು. ಈ ಯಂತ್ರವನ್ನು ಅಳವಡಿಸಲು 3ರಿಂದ 4 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ, ತ್ಯಾಜ್ಯ ನಿರ್ವಹಣೆ, ಯೋಜನಾ ವರದಿ ತಯಾರಿಸಲು 30 ಲಕ್ಷ ರೂ.ಗಳನ್ನು ಮೀಸ ಲಿಡಲಾಗಿದೆ. ಕೇವಲ ವರದಿ ತಯಾರಿಕೆಗೆ ಇಷ್ಟು ಮೊತ್ತ ಬೇಕಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಚೆಲುವಾಂಬ ಪಾರ್ಕ್ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಗಿಡ ನೆಡಲು 48 ಲಕ್ಷ ರೂ. ಮೀಸಲಿಡಲಾಗಿದೆ. ವಿಪರ್ಯಾಸ ವೆಂದರೆ, ಹಾಲಿ ಇರುವ ಪಾರ್ಕ್‍ಗಳಲ್ಲಿನ ಗಿಡಗಳು ಒಣಗಿ ಹೋಗಿದ್ದು, ಸದರಿ ಮೊತ್ತವನ್ನು ಪಾರ್ಕ್‍ಗಳಲ್ಲಿ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸಲು ಬಳಸಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ವಹಣೆ ಕಾಮಗಾರಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ತಾರತಮ್ಯ ಎಸಗಲಾಗಿದ್ದು, ಆಡಳಿತ ಪಕ್ಷದವರ ವಾರ್ಡ್‍ಗಳಿಗೆ ಹೆಚ್ಚಿನ ಅನುದಾನ ನೀಡ ಲಾಗಿದೆ. ವಲಯ ಕಚೇರಿವಾರು ನಿಷ್ಕ್ರೀ ಯಗೊಂಡಿರುವ ಬೀದಿ ಬೀಪಗಳನ್ನು ಬದಲಿಸಿ, ಎಲ್‍ಇಡಿ ದೀಪಗಳನ್ನು ಅಳವಡಿಸುವ ಸಂಬಂಧ ಒಂದೊಂದು ವಲಯ ಕಚೇರಿಗೆ ಒಂದೊಂದು ರೀತಿ ಅನುದಾನ ನೀಡುವುದರ ಮೂಲಕ ತಾರತಮ್ಯ ಎಸಗಲಾಗಿದೆ.

ಸ್ಮಶಾನ ನಿರ್ವಹಣೆಗಾಗಿ ನೀಡಿರುವ ಅನುದಾನದಲ್ಲೂ ಕೂಡ ತಾರತಮ್ಯ ಎಸಗಲಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಿರುವ ವಾರ್ಡ್‍ಗಳಿಗೆ ಒಟ್ಟು 205.70 ಲಕ್ಷ ನೀಡಲಾಗಿದ್ದು, ಬಿಜೆಪಿ ಸದಸ್ಯರಿರುವ ವಾರ್ಡ್‍ಗಳಿಗೆ ಕೇವಲ 50 ಲಕ್ಷ ನೀಡಲಾಗಿದೆ.

ಬಿಜೆಪಿ ಸದಸ್ಯರಾದ ಗುರು ವಿನಾಯಕ ಮತ್ತು ಸುಬ್ಬಯ್ಯ ಅವರ ವಾರ್ಡ್‍ಗಳಿಗೆ ನೀಡಿರುವ ಅನುದಾನದ ಮೊತ್ತ ದೊಡ್ಡ ದಾಗಿದ್ದರೂ, ಒಳ ಹೊಕ್ಕಿ ನೋಡಿದರೆ ಗುರುವಿನಾಯಕ ಅವರ 18 ವಾರ್ಡ್‍ಗೆ ನೀಡಿರುವ ಅನುದಾನದಲ್ಲಿ ಬಹುಪಾಲು ವಾಣಿ ವಿಲಾಸ ಕಚೇರಿಗಳ ಕಾಮಗಾರಿ ಗಳಿಗೆ, ಆಯುಕ್ತರ ವಸತಿ ಗೃಹ ದುರಸ್ತಿಗೆ ಹಾಗೂ ಸಸಿ ನೆಡಲು 48 ಲಕ್ಷ ಮತ್ತು ಸುಬ್ಬಯ್ಯ ಪ್ರತಿನಿಧಿಸಿರುವ 20ನೇ ವಾರ್ಡ್‍ನಲ್ಲಿ ನೀಡಿರುವ ಅನುದಾನದಲ್ಲಿ 1.50 ಕೋಟಿಯನ್ನು 100 ಹೆಚ್‍ಪಿಯ ನಾಲ್ಕು ಮೋಟಾರ್ ಅಳವಡಿಸಲು ಬಳಸಲಾಗಿದೆ. ಈ ವಾರ್ಡ್‍ಗೆ 2.40 ಕೋಟಿ ನೀಡಿರುವುದಾಗಿ ತೋರಿಸಿದ್ದರೂ ಕೂಡ ವಾಸ್ತವವಾಗಿ ವಾರ್ಡ್‍ಗೆ ದೊರೆತಿ ರುವುದು ಕೇವಲ 90 ಲಕ್ಷ ಮಾತ್ರ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ವಾರ್ಡ್‍ಗಳಲ್ಲಿ 24.1ರ ಅನುದಾನ ಬಳಸಬೇಕು. ಈ ವರ್ಗದವರು ಹೆಚ್ಚಾಗಿ ವಾಸಿಸುವ ಗಾಂಧಿನಗರದಿಂದ ಸಾಮಾನ್ಯ ವರ್ಗದ ಶ್ರೀಮತಿ ಅಶ್ವಿನಿ ಶರತ್ ಮತ್ತು ಅಶೋಕಪುರಂನಿಂದ ಹಿಂದುಳಿದ ವರ್ಗದ ಪಲ್ಲವಿ ಉರುಫ್ ಬೇಗಂ ಆಯ್ಕೆಯಾಗಿದ್ದಾರೆ ಎಂದ ಮಾತ್ರಕ್ಕೆ ಈ ವಾರ್ಡ್‍ಗಳಿಗೆ 24.1ರ ಅನುದಾನವನ್ನು ನೀಡಿಲ್ಲ. 16ನೇ ವಾರ್ಡ್‍ನಲ್ಲಿ ಪರಿಶಿಷ್ಟ ಜಾತಿಯವರು ಬೆರಳೆಣಿಕೆಯಷ್ಟಿದ್ದರೂ, ಅಲ್ಲಿ ದಲಿತ ವಿದ್ಯಾರ್ಥಿ ನಿಲಯ ಇದೆ ಎಂಬ ನೆಪವೊಡ್ಡಿ, ಆರೀಫ್ ಹುಸೇನ್ ಪ್ರತಿನಿಧಿಸುತ್ತಿರುವ ಈ ವಾರ್ಡ್‍ಗೆ 60 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿರುವ ಅವರು, ಪಾಲಿಕೆಯ ಇಂತಹ ತಾರತಮ್ಯದಿಂದಾಗಿ 24.1ರ ಅನುದಾನದ ಮೂಲ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅನುದಾನವನ್ನು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಮತ್ತು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಧ್ಯೇಯ ವಾಕ್ಯದಂತೆ ಅನುದಾನ ಹಂಚಬೇಕು ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಮನವಿಯ ಪ್ರತಿಯನ್ನು ಮೈಸೂರು ನಗರಪಾಲಿಕೆ ಆಯುಕ್ತರಿಗೆ ರವಾನಿಸಿದ್ದಾರೆ.

Translate »