ಸರ್ಕಾರಿ ಶುಶ್ರೂಷಾಲಯದ 99 ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ
ಮೈಸೂರು

ಸರ್ಕಾರಿ ಶುಶ್ರೂಷಾಲಯದ 99 ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ

February 24, 2020

ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಶುಶ್ರೂಷ ಸೇವೆಗೆ ಪಾದಾರ್ಪಣೆ ಮಾಡಿದ 99 ವಿದ್ಯಾರ್ಥಿಗಳು `ಪ್ರತಿಜ್ಞಾವಿಧಿ’ ಸ್ವೀಕರಿಸಿದರು.

ಸಮಾರಂಭ ಉದ್ಘಾಟಿಸಿದ ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯರಿಗೆ ಹೆಚ್ಚಿನ ಅವಕಾಶಗಳಿವೆ. ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ನಿಮ್ಮೆಲ್ಲರಿಗೂ ಸೇವೆ ಮಾಡುವ ಅವಕಾಶ ದೊರಕಲಿದೆ. ಒತ್ತಡದ ನಡುವೆಯೂ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ರೀತಿ ಕೆಲಸ ಮಾಡಬೇಕು. ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶುಶ್ರೂಷಕಿಯರು ರೂಪುಗೊಳ್ಳುತ್ತಿದ್ದು, ಶುಶ್ರೂಷಕಿಯರ ಸೇವೆ ವಿಚಾರದಲ್ಲಿ ವಿಶ್ವದಲ್ಲೇ ಭಾರತ 2ನೇ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಪಿ.ದಾಕ್ಷಾ ಯಿಣಿ ಮಾತನಾಡಿ, ಶುಶ್ರೂಷಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಲ್ಲಿ ಕೊರತೆಯಿದ್ದರೂ ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಸದ್ಯದಲ್ಲಿಯೇ 250 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಬರುತ್ತಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ಕಲಿಕೆಯಲ್ಲಿ ನಿರತರಾಗಬೇಕು ಎಂದು ಮಾರ್ಗದರ್ಶನ ಮಾಡಿದರು.

ಕೆ.ಆರ್.ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಎಂ.ಎಸ್.ರಾಜೇಶ್ ಕುಮಾರ್, ಸಹಾಯಕ ಆಡಳಿತಾಧಿಕಾರಿ ಕುಸುಮ ಪಿ.ವೀರಕರ, ಕಾಲೇಜಿನ ಸಹಾಯಕ ಆಡಳಿತಾ ಧಿಕಾರಿ ವೆಂಕಟೇಶ್, ಕರ್ನಾಟಕ ಶುಶ್ರೂಷಕರ ಸಂಘದ ಜಿಲ್ಲಾಧ್ಯಕ್ಷೆ ಆಲೀಸ್ ಫ್ಲಾರೆನ್ಸ್ ಕ್ರಾಸ್ತಾ, ವಿ.ಸೌಭಾಗ್ಯ, ಗೀತಾಬಾಲಿ, ಹೆಲೆನ್ ಡಿ.ಸಿಲ್ವ ಇತರರು ಕಾರ್ಯಕ್ರಮದಲ್ಲಿದ್ದರು.

Translate »