ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ
ಕೊಡಗು

ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ

August 27, 2018

ಸೋಮವಾರಪೇಟೆ: ತಮ್ಮದೇ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು, ಸ್ವಂತ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ನಿಂತಿದೆ. ಮನೆಯಿಲ್ಲ, ತೋಟವಿಲ್ಲ, ಮುಂದೇನೆಂಬ ಬಗ್ಗೆ ಗೊತ್ತಿಲ್ಲದ ಈ ಕುಟುಂಬ ಉಟ್ಟ ಬಟ್ಟೆ ಯಲ್ಲೇ ಮನೆಯಿಂದ ಹೊರಬಂದ ಪರಿಣಾಮ ಜೀವ ಮಾತ್ರ ಉಳಿದಿದೆ. ಮಿಕ್ಕಿ ದೆಲ್ಲವೂ ಮಣ್ಣುಪಾಲಾಗಿದೆ.

ಇಂತಹ ನತದೃಷ್ಟ ಕುಟುಂಬಗಳು ತಾಲೂಕಿನ ಮಾದಾಪುರ ಸಮೀಪದ ಇಗ್ಗೋ ಡ್ಲಿನಲ್ಲಿದ್ದವು. ಇದೀಗ ಇಲ್ಲವಾಗಿವೆ. ಇಗ್ಗೋಡ್ಲು ಗ್ರಾಮದ ಜಗ್ಗಾರಂಡ ಕಾವೇರಪ್ಪ-ಫ್ಯಾನ್ಸಿ, ಜಗ್ಗಾರಂಡ ದೇವಯ್ಯ-ನಳಿನಿ ಮತ್ತು ರೀತ್‍ಕುಮಾರ್ ಅವರ ಕುಟುಂಬ ಅಕ್ಷರಶಃ ಶೂನ್ಯದಲ್ಲಿದೆ.

ಕಳೆದ ಆ.16ರವರೆಗೆ ಎಲ್ಲವೂ ಇದ್ದುದು ಈಗ ಏನೂ ಇಲ್ಲದ ಸ್ಥಿತಿ ಈ ಕುಟುಂಬ ಗಳಿಗೆ ಒದಗಿದೆ. ದುರದೃಷ್ಟವೆಂಬದು ದಿಢೀರ್ ಎದುರಾದ ಪರಿಣಾಮ ಇವರ ಬದುಕು ಮೂರಾಬಟ್ಟೆಯಂತಾಗಿದೆ.

ಕಳೆದ ಆ.16ರಂದು ಸುರಿಯುತ್ತಿದ್ದ ಭಾರೀ ಮಳೆಗೆ ಈ ಕುಟುಂಬಗಳು ಜರ್ಝರಿತಗೊಂಡಿದ್ದವು. ಆ.17ರಂದು ಮನೆ ಖಾಲಿ ಮಾಡಿ ಎಲ್ಲಿಯಾದರೂ ಇರೋಣ, ಮಳೆ ಕಡಿಮೆಯಾದ ನಂತರ ವಾಪಸ್ ಮನೆಗೆ ಬರೋಣ ಎಂಬ ಚಿಂತನೆ ನಡೆಸಿದ್ದವು.

ಆದರೆ ರಾತ್ರಿ 10.30ರ ಸುಮಾರಿಗೆ ಬೆಟ್ಟದ ಮೇಲೆ ಭಾರೀ ಶಬ್ದ ಕೇಳಿ ಉಟ್ಟ ಬಟ್ಟೆಯಲ್ಲೇ ಮನೆಬಿಟ್ಟು ಹೊರಗೋಡಿ ಮುಖ್ಯರಸ್ತೆ ತಲುಪಿದ್ದವು. ಪ್ರಕೃತಿಯ ರೌದ್ರನರ್ತನಕ್ಕೆ ಇವರುಗಳ ಮನೆ ಕೊಚ್ಚಿ ಹೋಯಿತು. ಬೆಟ್ಟ ಕುಸಿತದಿಂದ ಬಂದ ಮಣ್ಣು ಇವರುಗಳ ಮನೆಯನ್ನೇ ಆಪೋಷನ ತೆಗೆದುಕೊಂಡಿತು. ಕಣ್ಣೆದುರೇ ಕೊಚ್ಚಿ ಹೋದ ಮನೆಯನ್ನು ಕಂಡು ದಿಗ್ಭ್ರಮೆ ಗೊಂಡಿದ್ದನ್ನು ಬಿಟ್ಟರೆ ಬೇರೇನೂ ಮಾಡಲು ಇವರಿಂದ ಸಾಧ್ಯವಾಗಲಿಲ್ಲ.

ಇಗ್ಗೋಡ್ಲಿನ ಕಾವೇರಪ್ಪ ಅವರಿಗೆ ಇದ್ದ ವಾಸದ ಮನೆ, ಸುಮಾರು 8 ಎಕರೆ ಕಾಫಿ ತೋಟದ ಮೇಲೆ ಬೆಟ್ಟದ ಮಣ್ಣಿದೆ. ದೇವಯ್ಯ ಅವರ ಎರಡು ಅಂತಸ್ತಿನ ಮನೆ, ತೋಟ ಇಲ್ಲವಾಗಿದೆ. ರೀತ್‍ಕುಮಾರ್ ಅವರ ಸರ್ವಸ್ವವೂ ಮುಚ್ಚಿಹೋಗಿದೆ. ಜೀವನದ ಮಧ್ಯದಲ್ಲಿ ಇಂತಹ ದುರಂತ ಒದಗಿದ ಬಗ್ಗೆ ಕುಟುಂಬಗಳಿಗೆ ಅಸಾಧ್ಯ ನೋವಿದೆ. ಈ ನೋವನ್ನು ಪರಿಹರಿಸುವದಾದರೂ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.

ಸದ್ಯ ಕಾವೇರಪ್ಪ ಮತ್ತು ಪತ್ನಿ ಫ್ಯಾನ್ಸಿ ಅವರುಗಳು ಗುಡ್ಡೆಹೊಸೂರು ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿರುವ ಪತ್ನಿಯ ಸಹೋದರಿ ಕುಸುಮ ಅವರ ಮನೆಯಲ್ಲಿದ್ದಾರೆ. ದೇವಯ್ಯ ಅವರು ಚೆಯ್ಯಂಡಾಣೆಯಲ್ಲಿರಬಹುದು ಎಂದು ಫ್ಯಾನ್ಸಿ ಅವರು ತಿಳಿಸಿದ್ದಾರೆ. ರೀತ್‍ಕುಮಾರ್ ಅವರು ಸೊಸೆಯ ಮನೆ ಸೇರಿದ್ದಾರೆ.

Translate »