ತೆರಿಗೆ ಸಂಗ್ರಹ ಏಕಗವಾಕ್ಷಿ ವ್ಯವಸ್ಥೆ: ತಂತ್ರಾಂಶ ಅಭಿವೃದ್ಧಿಗೆ ಕೌನ್ಸಿಲ್ ಒಪ್ಪಿಗೆ
ಮೈಸೂರು

ತೆರಿಗೆ ಸಂಗ್ರಹ ಏಕಗವಾಕ್ಷಿ ವ್ಯವಸ್ಥೆ: ತಂತ್ರಾಂಶ ಅಭಿವೃದ್ಧಿಗೆ ಕೌನ್ಸಿಲ್ ಒಪ್ಪಿಗೆ

February 15, 2019

ಮೈಸೂರು: ನಗರ ಪಾಲಿಕೆ ಆರ್ಥಿಕ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಏಕಗವಾಕ್ಷಿ ತೆರಿಗೆ ಸಂಗ್ರಹ ಸೇವೆ ನೀಡುವ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಲು ಕೌನ್ಸಿಲ್ ಒಪ್ಪಿಗೆ ದೊರೆತಿದ್ದು, ಈಗಾಗಲೇ ಈ ಆನ್‍ಲೈನ್ ಸೇವೆ ಅಳವ ಡಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ತೆರಳಿ, ಪರಿಶೀಲಿಸಿದ ನಂತರ ಮುಂದು ವರೆಯಲು ತೀರ್ಮಾನಿಸಲಾಗಿದೆ.

ಮೈಸೂರು ನಗರ ಪಾಲಿಕೆಯಲ್ಲಿ ಗುರು ವಾರ ನಡೆದ ಕೌನ್ಸಿಲ್ ಸಭೆಯಲ್ಲಿ, ಬಿಜೆಪಿ ಸದಸ್ಯ ಶಿವಕುಮಾರ್, ಪಾಲಿಕೆಯ ಆರ್ಥಿಕ ಸ್ಥಿತಿ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ, ಆದಾಯ ಸೋರಿಕೆ ಇನ್ನಿತರ ವೈಫಲ್ಯಗಳನ್ನು ತಿಳಿಸುವುದರೊಂದಿಗೆ, ಸಾಫ್ಟ್‍ವೇರ್ ಅಭಿವೃದ್ಧಿಪಡಿಸಿ, ತೆರಿಗೆ ಸಂಗ್ರಹಕ್ಕೆ ಏಕಗವಾಕ್ಷಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ವಿವರಿಸಿದರು. ಇವರಿಗೆ ಪೂರಕವಾಗಿ ಮಾತನಾಡಿದ ಸದಸ್ಯ ಕೆ.ವಿ.ಶ್ರೀಧರ್, ಆದಾಯ ಕ್ರೂಢೀ ಕರಿಸುವ ದೃಷ್ಟಿಯಿಂದ ಈ ಸೇವೆ ಅಗತ್ಯ ವಾಗಿದೆ ಎಂದು ಹೇಳಿದರು. ಮಾಜಿ ಮೇಯರ್ ಆರಿಫ್ ಹುಸೇನ್ ಮಾತನಾಡಿ, ಈಗಾಗಲೇ ಈ ಆನ್‍ಲೈನ್ ಸೇವೆಯನ್ನು ಅಳವಡಿಸಿ ಕೊಂಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಪರಿ ಶೀಲಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಬೇಕೆಂದು ಅಭಿಪ್ರಾಯಿಸಿದರು.

ಕೊನೆಗೆ ತೆರಿಗೆ ಸಂಗ್ರಹಕ್ಕೆ ಪಾಲಿಕೆಯ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲು ಒಪ್ಪಲಾ ಗಿದ್ದು, ಕಾರ್ಪೊರೇಟರ್‍ಗಳ ತಂಡ, ಈಗಾಗಲೇ ಅಳವಡಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ತೆರಳಿ, ಸೇವೆಯ ಬಗ್ಗೆ ತಿಳಿದ ನಂತರ ಪ್ರಕ್ರಿಯೆ ಮುಂದು ವರೆಸಲಾಗುವುದು ಎಂದು ಹೇಳಿದರು.
ಸಾಫ್ಟ್‍ವೇರ್ ಅಗತ್ಯವೇನು?: ಇದಕ್ಕೂ ಮುನ್ನ ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವ ಅನಿವಾರ್ಯತೆ ಬಗ್ಗೆ ಸದಸ್ಯ ಶಿವಕು ಮಾರ್ ವಿವರಿಸಿದರು. ನಗರಪಾಲಿಕೆ ಮೇಲಿರುವ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್‍ನ ಸಾಲದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದಿದ್ದರೆ, ಮುಂದಿನ ವರ್ಷದಿಂದ ಪಾಲಿಕೆಗೆ ಎಸ್‍ಎಫ್‍ಸಿ ಅನುದಾನ ಬರುವುದಿಲ್ಲ. ಇತ್ತ ನಿರೀಕ್ಷಿತ ತೆರಿಗೆಯೂ ಸಂಗ್ರಹವಾಗಿಲ್ಲ. ಪಾಲಿಕೆ ಯಿಂದ ಯಾವುದೇ ಯೋಜನೆ ಕೈಗೊಳ್ಳ ಲಾಗದ ದುಸ್ಥಿತಿ ಇದೆ. ಹಾಗಾಗಿ ಪಾಲಿ ಕೆಯ ಆರ್ಥಿಕ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶೇ.100ರಷ್ಟು ತೆರಿಗೆ ಸಂಗ್ರಹ ಸಾಧಿಸಬೇಕಿದೆ. ಇದಕ್ಕಾಗಿ ಪಾಲಿಕೆಗೆ ಪ್ರತ್ಯೇಕವಾದ ಸಾಫ್ಟ್‍ವೇರ್ ಅಭಿವೃದ್ಧಿಪಡಿ ಸಬೇಕು. ಆ ಮೂಲಕ ಎಲ್ಲಾ ತೆರಿಗೆಯನ್ನು ಸರಳ ಮಾರ್ಗದಲ್ಲಿ, ಪಾರದರ್ಶಕವಾಗಿ, ಪರಿ ಣಾಮಕಾರಿಯಾಗಿ ಸಂಗ್ರಹಿಸಬಹುದು.

ಜೊತೆಗೆ ಆದಾಯ ಸೋರಿಕೆ ಅವ್ಯವ ಹಾರವನ್ನೂ ತಡೆಯಬಹುದು. ಆಸ್ತಿಗಳ ಸಂಖ್ಯೆ, ತೆರಿಗೆ ಪಾವತಿ ಮೊತ್ತ, ಆಸ್ತಿ ಮಾಲೀಕನ ವಿವರ ಸೇರಿದಂತೆ ಎಲ್ಲಾ ಮಾಹಿತಿಯೂ ಸುಲಭವಾಗಿ ಲಭ್ಯವಾಗು ತ್ತದೆ. ಆಸ್ತಿ ಮಾಲೀಕನಿಗೂ ತಾನು ಪಾವ ತಿಸಿದ ತೆರಿಗೆಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಪ್ರತಿ ಪ್ರಕ್ರಿಯೆಗೂ ಆಸ್ತಿ ಮಾಲೀಕ ಹಾಗೂ ಪಾಲಿಕೆಗೆ ಸಂದೇಶ ರವಾನೆಯಾಗುತ್ತದೆ. ಎಲ್ಲಾ ವ್ಯವಹಾರವೂ ಪಾರದರ್ಶಕ ವಾಗಿರುತ್ತದೆ. ಮೊಬೈಲ್‍ನಲ್ಲೇ ಎಲ್ಲಾ ವಿವರ ಪಡೆಯುವ ಅವಕಾಶವಿರುತ್ತದೆ. ಎಲ್ಲಾ ರೀತಿಯ ತೆರಿಗೆಯನ್ನೂ ಏಕಗ ವಾಕ್ಷಿ ವ್ಯವಸ್ಥೆಯಡಿ ಸಂಗ್ರಹಿಸುವುದರಿಂದ ಸೋರಿಕೆಯಾಗುವುದಿಲ್ಲ. ಆದಾಯ ಕ್ರೋಢೀಕರಣ ಹೆಚ್ಚಾಗುತ್ತದೆ. ಈಗಾಗಲೇ ಮಂಗಳೂರು, ಶಿವಮೊಗ್ಗ, ತುಮಕೂರು ಸೇರಿದಂತೆ ಅನೇಕ ತಾಲೂಕು ಮಟ್ಟ ದಲ್ಲೂ ಈ ಆನ್‍ಲೈನ್ ಸೇವೆ ಅಳವಡಿಸಿ ಕೊಳ್ಳಲಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಅಭಿವೃದ್ಧಿ ಕಂಡಿದ್ದಾರೆ. ಮೈಸೂರು ನಗರಪಾಲಿಕೆಯಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಆಗ್ರಹಿಸಿದರು.

ಉಪಮೇಯರ್‍ಗೆ ಹೊಸಕಾರು: ಉಪ ಮೇಯರ್‍ಗೆ ಹೊಸ ಇನ್ನೋವಾ ಕಾರು ಖರೀದಿಸಲು ಕೌನ್ಸಿಲ್ ಒಪ್ಪಿಗೆ ಸಿಕ್ಕಿತು.

ತುಂಡು ಭೂಮಿ ಗುರುತಿಸಿ: ಬನ್ನಿ ಮಂಟಪ ಹುಡ್ಕೋ ಬಡಾವಣೆಯ ಲ್ಲಿರುವ ತುಂಡು ಸ್ಥಳಗಳನ್ನು ಗುರುತಿಸಿ, ಹರಾಜು ಹಾಕಬೇಕೆಂದು ಮಾಜಿ ಮೇಯರ್‍ಗಳಾದ ಅಯೂಬ್‍ಖಾನ್ ಹಾಗೂ ಆರಿಫ್ ಹುಸೇನ್ ಆಗ್ರಹಿಸಿದರು. ಈ ಬಗ್ಗೆ ಕೆಲಕಾಲ ಚರ್ಚೆಯಾದ ಬಳಿಕ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಮಾತನಾಡಿ, ಮುಡಾ ಮಾರ್ಗಸೂಚಿ ಯಂತೆ ನಿವೇಶನದ ನಿಗದಿತ ಅಳತೆಯಲ್ಲಿ ಶೇ.25ಕ್ಕಿಂತ ಕಡಿಮೆ ವಿಸ್ತೀರ್ಣವಿರುವ ಸ್ಥಳವನ್ನು ಪಕ್ಕದ ನಿವೇಶನದಾರರಿಗೆ ಮಾರಾಟ ಮಾಡುವುದು ಹಾಗೂ ಹೆಚ್ಚಿದ್ದರೆ ಹರಾಜು ಮೂಲಕ ಮಾರಾಟ ಮಾಡಲು ಮಾರ್ಚ್ ಅಂತ್ಯದೊಳಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Translate »