ಮೈಸೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾ ನಿಲಯವು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದೆ.
ಜೆಎಲ್‍ಬಿ ರಸ್ತೆಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಂಗಾಮಿ ಕುಲಪತಿ ಪ್ರೊ. ನಾಗೇಶ ವಿ.ಬೆಟ್ಟಕೋಟೆ ಅವರು, ಸ್ವಂತ ಜಾಗ, ಆಡಳಿತ ಕಟ್ಟಡದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ, ಮೈಸೂರು, ಮಂಡ್ಯ ಜಿಲ್ಲೆಗೆ ಸೀಮಿತವಾಗಿದ್ದ ಕಾರ್ಯ ವ್ಯಾಪ್ತಿಯನ್ನು ರಾಜ್ಯದ ಇನ್ನಿತರೆಡೆಗೂ ವಿಸ್ತರಿಸಲು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯು ಅನುಮೋದನೆ ನೀಡಿದೆ ಎಂದರು.
ಬೆಂಗಳೂರು, ಧಾರವಾಡ, ಗುಲ್ಬರ್ಗಾ, ಬೆಳಗಾವಿ ಹಾಗೂ ಮಂಗ ಳೂರು ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿದರು.
ಸರ್ಕಾರ ಅನುಮತಿ ನೀಡಿರುವ 16 ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸಲು ಕ್ರಮ ವಹಿಸಿದ್ದು, ಇದರಿಂದ ಮೈಸೂರು, ಮಂಡ್ಯದ ಜೊತೆಗೆ ಇನ್ನಿತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನುಡಿದರು. ಭಕ್ತಿಗೀತೆ, ಸುಗಮ ಸಂಗೀತ, ಹಾರ್ಮೋ ನಿಯಂ, ತಬಲ, ಯಕ್ಷಗಾನ, ಗಮಕ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಮೃದಂಗ, ಕಲಾ ವಿಮರ್ಶೆ, ವಾದ್ಯ, ಕೀಬೋರ್ಡ್, ಗಿಟಾರ್, ಮ್ಯಾಂಡೋಲಿನ್, ಪಿಟೀಲು, ಭರತನಾಟ್ಯ, ರಂಗ ಸಂಗೀತಗಳಂತಹ ಕೋರ್ಸುಗಳನ್ನು ಆರಂಭಿಸಿ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ ಪರಿಕರಗಳ ತರಬೇತಿ ನೀಡಲಾಗುವುದು ಎಂದು ಪ್ರೊ.ನಾಗೇಶ ತಿಳಿಸಿದರು. ಓದು-ಬರಹ ಗೊತ್ತಿದ್ದು, ಆಸಕ್ತಿ ಹೊಂದಿದ ಪ್ರತಿಯೊಬ್ಬರಿಗೂ ಸಂಗೀತ ಕಲೆಗಳ ಅಭ್ಯಾಸ ತರಬೇತಿ ನೀಡಲಾಗುವುದು. ಸ್ಥಗಿತಗೊಂಡಿದ್ದ ಡಿ.ಲಿಟ್ ಪದವಿ ಕೋರ್ಸುಗಳ ಪುನರಾರಂಭಕ್ಕೂ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯು ಅನುಮತಿ ನೀಡಿದೆ ಎಂದು ಅವರು ಇದೇ ವೇಳೆ ನುಡಿದರು.