ಶಿಕ್ಷಕ ಎಸೆದ ಕೋಲಿನಿಂದ ವಿದ್ಯಾರ್ಥಿ ಕಣ್ಣಿಗೆ ಹಾನಿ?
ಚಾಮರಾಜನಗರ

ಶಿಕ್ಷಕ ಎಸೆದ ಕೋಲಿನಿಂದ ವಿದ್ಯಾರ್ಥಿ ಕಣ್ಣಿಗೆ ಹಾನಿ?

June 3, 2018

ಚಾಮರಾಜನಗರ:  ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳತ್ತ ಶಿಕ್ಷಕರೊಬ್ಬರು ಕೋಲು ಎಸೆದಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಹಾನಿಯಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ರಾಮಸಮುದ್ರದಲ್ಲಿರುವ ಕ್ರಿಸ್ತ ರಾಜ ಬಾಲರಪಟ್ಟಣ ಶಾಲೆಯ ಮುಖ್ಯಶಿಕ್ಷಕ ಯೋಸೆಫ್ ಉರುಫ್ ಜೋಸೆಫ್ ಅವರು ವಿದ್ಯಾರ್ಥಿ ಗಿರಿಮಲ್ಲೇಶ್ ಅವರ ಎಡಗಣ್ಣಿಗೆ ಹಾನಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಘಟನೆ ವಿವರ: ರಾಮಸಮುದ್ರ ಗಿರಿಮಲ್ಲೇಶ್ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, 6 ತಿಂಗಳ ಹಿಂದೆ ತರಗತಿ ಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಜೋಸೆಫ್ ಅವರು ವಿದ್ಯಾರ್ಥಿಗಳತ್ತ ಕೋಲು ಎಸೆದಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮ ವಿದ್ಯಾರ್ಥಿ ಗಿರಿಮಲ್ಲೇಶ್ ಅವರ ಎಡಗಣ್ಣಿಗೆ ಕೋಲು ತಾಕಿದೆ. ಆ ವೇಳೆ ವಿದ್ಯಾರ್ಥಿಯಾಗಲೀ ಅಥವಾ ಶಿಕ್ಷಕರಾಗಲೀ ಅಷ್ಟೇನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ವಿದ್ಯಾರ್ಥಿ ಗಿರಿಮಲ್ಲೇಶ್ ಕಣ್ಣು ನೋವು ಎಂದು ಪೋಷಕರಿಗೆ ತಿಳಿಸಿದ್ದಾನೆ. ಕೂಡಲೇ ಪೋಷಕರು ಆತನನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲು ಹೋದಾಗ ವೈದ್ಯರು ವಿದ್ಯಾರ್ಥಿಯ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ಅವನಿಗೆ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೋಷಕರು ವಿಚಾರಿಸಿದಾಗ ಆತ ಶಿಕ್ಷಕರು ಕೋಲು ಎಸೆದಿದ್ದರು ಎಂದು ತಿಳಿಸಿದ್ದಾನೆ. ಕೂಡಲೇ ಪೋಷಕರು ಶಾಲೆಗೆ ತೆರಳಿ ಶಿಕ್ಷಕ ಜೋಸೆಫ್ ಅವರನ್ನು ಕೇಳಿದಾಗ ಅವರು ನಾನು ಮಾಡಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಶಿಕ್ಷಕರು ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣ ಶಾಲಾ ಆಡಳಿತ ಮಂಡಳಿ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರೊಂದಿಗೆ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಕಳು ಹಿಸಿದರು. ಅಲ್ಲಿ ವೈದ್ಯರು ವಿದ್ಯಾರ್ಥಿಗೆ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಮುಖ್ಯಶಿಕ್ಷಕ ಜೋಸೆಫ್ ಅವರ ವಿರುದ್ಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Translate »