ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ
ಚಾಮರಾಜನಗರ

ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ

July 15, 2018

ಕೊಳ್ಳೇಗಾಲ: ಹನೂರು ಶೈಕ್ಷಣಿಕ ವಲಯದ ಕಾಡಂಚಿನಲ್ಲಿರುವ ಹಾವಿನ ಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಶನಿವಾರ ಶಿಕ್ಷಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿ, ಮಕ್ಕಳು ವಾಪಾಸ್ ಮನೆಗೆ ತೆರಳಿದ ಘಟನೆ ನಡೆದಿದೆ.

ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಹಾವಿನ ಮೂಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 43 ಗಿರಿಜನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಪ್ರತಾಪ್ ಹಾಗೂ ಚಿಕ್ಕಸ್ವಾಮಿ ಎಂಬ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಶನಿವಾರ ಇಲಾಖಾಧಿಕಾರಿಗಳ ಅನುಮತಿ ಪಡೆಯದೇ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.

ಶಾಲೆಗೆ ಪ್ರತಿ ಶನಿವಾರ ಶಿಕ್ಷಕರು ಸಕಾಲದಲ್ಲಿ ಬರುವುದಿಲ್ಲ. ಇದರಿಂದ ಗಿರಿಜನ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ. ಇಂದು ಶಾಲೆಗೆ ಶಿಕ್ಷಕರು ಬಾರದ ಕಾರಣ ಮಕ್ಕಳು ವಾಪಾಸ್ ಮನೆಗೆ ತೆರಳಿದ್ದಾರೆ ಎಂದು ಗಿರಿಜನ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಮಹದೇ ವಪ್ಪ ಅವರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಶಿಕ್ಷಕರಿಬ್ಬರು ಶಾಲೆಗೆ ಬರುವಾಗ ಆನೆ ನೋಡಿ ಭಯ ಗೊಂಡು ವಾಪಾಸ್ ಹೋಗಿದ್ದೇವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಈ ದಿನ ಶಿಕ್ಷಕರು ನಮ್ಮ ಗ್ರಾಮದ ಶಾಲೆಗೆ ಬಂದಿಲ್ಲ. ಪ್ರತಿ ಶನಿವಾರವೂ ಬರುವುದಿಲ್ಲ. ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿ ವಿಚಾರ ಗಮನಕ್ಕೆ ತಂದಿದ್ದೇನೆ. ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳ ಕ್ರಮ ವಹಿಸಬೇಕು’ ಎಂದು ಗಿರಿಜನ ಮುಖಂಡ ಪಿ.ಮಹದೇವ ಒತ್ತಾಯಿಸಿದ್ದಾರೆ.

ಕಾಡಂಚಿನ ಹಾವಿನಮೂಲೆ ಶಾಲೆಗೆ ಶನಿವಾರ ಇಬ್ಬರು ಶಿಕ್ಷಕರು ಗೈರಾಗಿದ್ದ ರಿಂದ ಶಾಲೆ ಮುಚ್ಚಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಬಿಇಓ ಅವರಿಂದ ಮಾಹಿತಿ ತರಿಸಿ ಕೊಂಡು ಮುಂದಿನ ಕ್ರಮಕೈಗೊಳ್ಳುತ್ತೇನೆ. -ಮಹದೇವಪ್ಪ, ಡಿಡಿಪಿಐ., ಚಾ.ನಗರ

Translate »